ಮಡಿಕೇರಿ : ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಮೇಲಿನ ಒಲವನ್ನು ಬಿಟ್ಟು ಶೈಕ್ಷಣಿಕ ಗುರಿ ಸಾಧಿಸಲು ಪುಸ್ತಕದ ಕಡೆ ಹೆಚ್ಚಿನ ಗಮನ ಹರಿಸಬೇಕು ಮತ್ತು ಶಿಸ್ತುಬದ್ಧ ಜೀವನ ನಡೆಸಲು ಎನ್ ಸಿ ಸಿ ಸೇರಿ ಎಂದು ಎನ್‍ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ವಿ.ಎಂ.ನಾಯಕ್ ಕರೆ ನೀಡಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ಎನ್‍ಸಿಸಿ ಸಹಯೋಗದಲ್ಲಿ ಕಾಲೇಜ್‍ನಲ್ಲಿ ನಡೆದ “ಎನ್‍ಸಿಸಿ ಸೇರ್ಪಡೆ” ದಿಕ್ಸೂಚಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎನ್‍ಸಿಸಿ ತನ್ನದೇ ಆದ ಮೌಲ್ಯ ಹಾಗೂ ಮಹತ್ವವನ್ನು ಹೊಂದಿದ್ದು, ಇದರಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಇತರರಿಗಿಂತ ಭಿನ್ನವಾಗಿರುತ್ತಾರೆ. ಕೇವಲ ವಿದ್ಯಾರ್ಥಿ ಜೀವನದಲ್ಲಿ ಮಾತ್ರ ಶಿಸ್ತನ್ನು ಅಳವಡಿಸಿಕೊಳ್ಳದೆ ಜೀವನದುದ್ದಕ್ಕೂ ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು. ಎನ್‍ಸಿಸಿ ಬೆಳೆದು ಬಂದ ಹಾದಿ ಹಾಗೂ ಅದರ ಕಾರ್ಯವೈಖರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಕರ್ನಲ್ ನಾಯಕ್, ಎನ್‍ಸಿಸಿ ಯಲ್ಲಿ ವಿಫುಲ ಅವಕಾಶಗಳಿದ್ದು, ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜ್‍ನ ಪ್ರಾಂಶುಪಾಲ ಡಾ.ಟಿ.ಡಿ.ತಿಮ್ಮಯ್ಯ ಅವರು ಎನ್‍ಸಿಸಿ ವಿದ್ಯಾರ್ಥಿಗಳು ತಮ್ಮ ಶಿಸ್ತುಬದ್ಧ ಜೀವನ ಶೈಲಿಯ ಮೂಲಕವೇ ಇತರರಿಗೆ ಮಾದರಿಯಾಗಬೇಕೆಂದರು.
ಎನ್‍ಸಿಸಿ ಅಧಿಕಾರಿ ಮೇಜರ್ ಡಾ.ಬಿ.ರಾಘವ ಮಾತನಾಡಿ, ಎನ್‍ಸಿಸಿ ಗೆ ತನ್ನದೇ ಆದ ಇತಿಹಾಸವಿದ್ದು, ಬಹಳಷ್ಟು ವಿದ್ಯಾರ್ಥಿಗಳು ಇದರಲ್ಲಿ ತೊಡಗಿಸಿಕೊಂಡು ಶಿಸ್ತು ಮತ್ತು ಸಂಯಮವನ್ನು ಬೆಳೆಸಿಕೊಂಡಿದ್ದಾರೆ.