ಸುಳ್ಯ: ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಸುಳ್ಯ ತಾಲೂಕು ಘಟಕ ಹಾಗೂ ಅರಂತೋಡು ವಲಯ ಘಟಕ ವತಿಯಿಂದ ರೈತರ ಸಾಲ ಮನ್ನಾ ಸೌಲಭ್ಯ ವಿಳಂಬ ಖಂಡಿಸಿ ಅರಂತೋಡು ಸಹಕಾರಿ ಸಂಘದ ಎದುರು ಪ್ರತಿಭಟನೆ ನಡೆಸಲಾಯಿತು. ಸಹಕಾರಿ ಬ್ಯಾಂಕ್ ನ ಸುಳ್ಯ ವಲಯ ಮೇಲ್ವಿಚಾರಕರು ನೀಡಿದ ಭರವಸೆಗೆ ತೃಪ್ತರಾಗದೆ ಸಹಕಾರಿ ಸಂಘದ ಉಪನಿಬಂಧಕರು ಬಂದು ಸರಿಯಾದ ಉತ್ತರ ಕೊಡಬೇಕೆಂದು ಪಟ್ಟು ಹಿಡಿದು ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು. ಬಳಿಕ ಸುಳ್ಯ ತಹಸೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಸ್ಥಳಕ್ಕೆ ಆಗಮಿಸಿ ರೈತರ ಅಹವಾಲು ಆಲಿಸಿದರು. ಬಳಿಕ ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಅಹವಾಲು ಸ್ವೀಕರಿಸಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಸಾಲ ಮನ್ನಾ ಎಲ್ಲಾ ರೈತರ ಖಾತೆಗಳಿಗೆ ಜಮಾ ಮಾಡುವಂತೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ, ರೈತಸಂಘ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಲೊಲಜಾಕ್ಷ ಭೂತಕಲ್ಲು ,ಪ್ರಧಾನ ಕರ್ಯದರ್ಶಿ ತೀರ್ಥರಾಮ ನೆಡ್ಚಿಲು ,ಜಿಲ್ಲಾ ಕಾರ್ಯದರ್ಶಿ ದಿವಾಕರ ಪೈ ಮಜಿಗುಂಡಿ,ಖಜಾಂಜಿ ದೇವಪ್ಪ,ಅರಂತೋಡು ವಲಯ ಅಧ್ಯಕ್ಷ ತೀರ್ಥರಾಮ ಉಳುವಾರು,ಕಾರ್ಯದರ್ಶಿ ಮೋಹನ್ ಅಡ್ತಲೆ ಮತ್ತಿತರರು ಭಾಗವಹಿಸಿದ್ದರು. ಅರಂತೋಡು ,ಅಲೆಟ್ಟಿ ,ಉಬರಡ್ಕ, ಮಡಪ್ಪಾಡಿ ಜಾಲ್ಸೂರು, ಅಜ್ಜಾವರ ಮುಂತಾದ ಗ್ರಾಮಗಳ ರೈತರು ಭಾಗಹಿಸಿದ್ದರು.