ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಸ್ವಾಮಿ ಮಠದ ನಡುವಿನ ಸರ್ಪಸಂಸ್ಕಾರ ಸೇವೆ ಸೇರಿದಂತೆ ಉಂಟಾಗಿರುವ ಭಿನ್ನಾಭಿಪ್ರಾಯ ಬಗೆಹರಿಸಲು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ನಡೆದ ಸಭೆಯಲ್ಲೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗದೆ ಜೂ.11 ರ ಮೊದಲು ಮತ್ತೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಅದಕ್ಕೂ ಮುನ್ನ ಮತ್ತೊಮ್ಮೆ ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಲಾಗಿದೆ.
ಸಂಜೆ 4 ಗಂಟೆಗೆ ಕ್ಷೇತ್ರಕ್ಕೆ ಆಗಮಿಸಿದ ಪೇಜಾವರ ಶ್ರೀಗಳು ಸುಬ್ರಹ್ಮಣ್ಯ ದೇವರ ದರ್ಶನ ನಡೆಸಿದ ಬಳಿಕ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಜೊತೆ ಚರ್ಚೆ ನಡೆಸಿದ್ದಾರೆ.ಈ ವೇಳೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮುಖಂಡರೂ ಸ್ವಾಮೀಜಿ ಗೆ ಸಾಥ್ ನೀಡಿದ್ದರು. ಆ ಬಳಿಕ ಸಭೆ ನಡೆಯಿತು. ಭಕ್ತರು ಹಾಗೂ ದೇವಸ್ಥಾನದ ಪ್ರಮುಖರು ಭಾಗವಹಿಸಿದ್ದರು.
ಮಠದ ಜೊತೆಗಿನ ಚರ್ಚೆ ಬಳಿಕ ಕ್ಷೇತ್ರದ ಕಚೇರಿಯಲ್ಲಿ ಎರಡೂ ಕಡೆಯನ್ನು ಕೂರಿಸಿ ಸಂಧಾನ ನಡೆಸಲು ಪ್ರಯತ್ನಿಸಿದ್ದಾರೆ.ಈ ವೇಳೆ ಎರಡೂ ಕಡೆಯ ನಾಯಕರಿಂದ ವಾದ – ಪ್ರತಿವಾದ ಚರ್ಚೆ ನಡೆದಿದ್ದರಿಂದ ಪೇಜಾವರ ಶ್ರೀ ಸಂಧಾನ ಸಭೆ ಮೊಟಕುಗೊಳಿಸಿ ಜೂನ್ ಹತ್ತರೊಳಗೆ ಮಂಗಳೂರಿನಲ್ಲಿ ಸಭೆ ಕರೆದು ನಿರ್ಧಾರ ಪ್ರಕಟಿಸಿದರು. ಕ್ಷೇತ್ರದ ಆಡಳಿತ ಮಂಡಳಿ ಮತ್ತು ಮಠದ ಮುಖಂಡರು ಈ ಸಂಧಾನ ಸಭೆ ಗೆ ಒಪ್ಪಿಕೊಂಡಿದ್ದು,ಜೂನ್ ಹತ್ತರೊಳಗೆ ಮಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಭೆಯಲ್ಲಿ ವಿಹಿಂಪ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರು, ಮಠದ ಪ್ರಮುಖರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ಭಕ್ತರು ಇದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸುಬ್ರಹ್ಮಣ್ಯ ದೇವಸ್ಥಾನ – ಸಂಪುಟ ನರಸಿಂಹ ಮಠ: ಮುಗಿಯದ ಸಂಘರ್ಷ : ಜೂ.10 ರ ಮೊದಲು ಮತ್ತೆ ಸಭೆ"