ಸುಳ್ಯ: ನಗರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಇದೀಗ ಪಕ್ಷಗಳ ಒಳಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.
ಅಭ್ಯರ್ಥಿ ಆಕಾಂಕ್ಷಿಗಾಗಿದ್ದು ಟಿಕೆಟ್ ಸಿಗದವರು ಪ್ರಮುಖ ನಾಯಕರ ಬೆಂಬಲದೊಂದಿಗೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಬ್ದುಲ್ ರಹಿಮಾನ್ ಮೊಗರ್ಪಣೆ 6 ನೇ ವಾರ್ಡ್ನಿಂದ, ಮಹಮ್ಮದ್ ರಿಯಾಝ್ ಕಟ್ಟೆಕ್ಕಾರ್ 13ನೇ ವಾರ್ಡ್ನಿಂದ ಮತ್ತು ಆರ್.ಕೆ.ಮಹಮ್ಮದ್ 17ನೇ ವಾರ್ಡ್ನಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವುದು ಕಾಂಗ್ರೆಸ್ಗೆ ತಲೆ ನೋವು ತಂದಿದೆ. ಇವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
10 ನೇ ವಾರ್ಡ್ನಲ್ಲಿ ಸುನಿಲ್ಕುಮಾರ್ ಕೆ.ಸಿ ಮತ್ತು 20ನೇ ವಾರ್ಡ್ನಲ್ಲಿ ಜಯಂತಿ ಆರ್ ರೈ ಪಕ್ಷೇತರರಾಗಿ ಸ್ಪರ್ಧಿಸುವುದು ಬಿಜೆಪಿಗೆ ತಲೆ ನೋವು ಸೃಷ್ಠಿಸಲಿದೆ. ಮಾಜಿ ನಗರ ಪಂಚಾಯತ್ ಅಧ್ಯಕ್ಷ ಎನ್.ಎ.ರಾಮಚಂದ್ರ ನೇತೃತ್ವದಲ್ಲಿ ಸುನಿಲ್ಕುಮಾರ್ ಮತ್ತು ಇತರ ಕಾರ್ಯಕರ್ತರು 10ನೇ ವಾರ್ಡ್ನಲ್ಲಿ ನಾಮಪತ್ರ ಸಲ್ಲಿಸಿ ಬಿಜೆಪಿಗೆ ಸಡ್ಡುಹೊಡೆದಿದ್ದಾರೆ. ಅದೇ ರೀತಿ ನಗರ ಪಂಚಾಯತ್ ಮಾಜಿ ಸದಸ್ಯ ರಮಾನಂದ ರೈ ಪತ್ನಿ ಜಯಂತಿ ಆರ್ ರೈ ನಾಮಪತ್ರ ಸಲ್ಲಿಸಿರುವುದು ಕೂಡ ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಸಂಕಷ್ಠ ತರಲಿದೆ.
ಕಳೆದ ಬಾರಿ ಎಸ್.ಡಿ.ಪಿ.ಐ ಸದಸ್ಯರಾಗಿ ಆಯ್ಕೆಯಾಗಿದ್ದ ಕೆ.ಎಸ್.ಉಮ್ಮರ್ ಈ ಬಾರಿ 17ನೇ ವಾರ್ಡ್ನಲ್ಲಿ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರು ಎಸ್.ಡಿ.ಪಿ.ಐ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಪೈಪೋಟಿ ನೀಡಲಿದ್ದಾರೆ.