ಸುಳ್ಯ: ಸುಳ್ಯ ಪೊಲೀಸ್ ಠಾಣೆಯ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಯಿತು. ರಸ್ತೆ ಸುರಕ್ಷೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಅಂಗಾರ ರಸ್ತೆಯಲ್ಲಿ ಪ್ರಯಾಣಿಸುವಾಗ ಜನರು ಅತ್ಯಂತ ಜಾಗೃತರಾಗಿದ್ದು ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಅಪಘಾತಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಸ್ತೆಯಲ್ಲಿನ ಅಪಾಯಕಾರಿ ತಿರುವು, ದಿಬ್ಬಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು. ಸುಳ್ಯಕ್ಕೆ ಮಂಜೂರಾದ ಹೈವೇ ಪಟ್ರೋಲ್ ವಾಹನವನ್ನು ಶಾಸಕ ಅಂಗಾರ ಈ ಸಂದರ್ಭದಲ್ಲಿ ಉದ್ಘಾಟಿಸಿದರು.
ಒಂದು ವರ್ಷದಲ್ಲಿ ಅಪಘಾತದಲ್ಲಿ 35 ಸಾವು:
ಪ್ರಾಸ್ತಾವಿಕವಾಗಿ ಮಾತನಾಡಿದ ಸುಳ್ಯ ವೃತ್ತ ನಿರೀಕ್ಷಕ ನವೀನ್‍ಚಂದ್ರ ಜೋಗಿ ರಸ್ತೆ ಅಪಘಾತಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ. ಮಾನವ ಜೀವಗಳು ರಸ್ತೆಯಲ್ಲಿ ಬಲಿಯಾಗುವುದನ್ನು ತಪ್ಪಿಸಲು ಎಲ್ಲರೂ ಕೈಜೋಡಸಬೇಕು ಎಂದರು. ಸುಳ್ಯ ತಾಲೂಕಿನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 100 ಅಪಘಾತ ಪ್ರಕರಣಗಳು ದಾಖಲಾಗಿದ್ದು 35 ಮಂದಿ ಮೃತಪಟ್ಟಿದ್ದಾರೆ ಮತ್ತು 96 ಮಂದಿ ಗಾಯಗೊಂಡಿದ್ದಾರೆ. ರಸ್ತೆ ಸುರಕ್ಷತೆಯ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕಾಗಿದೆ ಎಂದರು.
ಸುಳ್ಯ ಎಸ್‍ಐ ಎಂ.ಆರ್.ಹರೀಶ್, ಕ್ರೈಂ ಎಸ್‍ಐ ರತ್ನಕುಮಾರ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಜಾಗೃತಿ ಜಾಥಾದಲ್ಲಿ ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರಾದ ನಟರಾಜ್, ಭವಾನಿ, ಜಯಲತ, ರಮ್ಯ, ವಿನೋದ್ ಉಪಸ್ಥಿತರಿದ್ದರು.