ಸುಳ್ಯ: ಸುಳ್ಯ ತಾಲೂಕಿನಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಕೊರೊನಾ ವೈರಸ್ ಸಂಬಂಧವಾಗಿ ತಾಲೂಕಿನಲ್ಲಿ 54 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು, ಅವರೆಲ್ಲರದ್ದೂ ನೆಗೆಟಿವ್ ವರದಿ ಬಂದಿದೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಬಂದಿದ್ದ ಸುಬ್ರಹ್ಮಣ್ಯ ಬಳಿಯ ವ್ಯಕ್ತಿಯೊಬ್ಬರನ್ನು ಹಾಗೂ ಅವರ ಮನೆಯವರನ್ನು ಮತ್ತು ಅವರನ್ನು ಮಾತನಾಡಲು ಹೋಗಿದ್ದ ಗುತ್ತಿಗಾರು ಗ್ರಾಮದ ಕಮಿಲದ ಕುಟುಂಬ, ಪೆರಾಜೆಯ ಕುಟುಂಬವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಅವರೆಲ್ಲರ ಪರೀಕ್ಷಾ ವರದಿಗಳೂ ಸೇರಿದಂತೆ ತಾಲೂಕಿನ ಇದುವರೆಗಿನ ಎಲ್ಲಾ ಪರೀಕ್ಷಾ ವರದಿಗಳೂ ನೆಗೆಟಿವ್ ಬಂದಿದ್ದು ಯಾವುದೇ ಆತಂಕವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕ್ವಾರಂಟೈನ್ ಗೆ ಒಳಗಾದವರನ್ನು ಕೊರೊನಾ ಸೋಂಕು ಬಾಧಿಸಿದೆ ಎಂಬ ರೀತಿಯಲ್ಲಿ ಕೆಲವು ಮಂದಿ ನೋಡಿದ್ದಾರೆ ಹಾಗೂ ಕೆಲವು ಮಂದಿ ಕೊರೊನಾ ವೈರಸ್ ಬಾಧಿಸಿದೆ ಎಂದೇ ಅಪಪ್ರಚಾರ ಮಾಡಿದ್ದಾರೆ ಎಂದು ಕ್ವಾರಂಟೈನ್ ಒಳಗಾದವರು ನೋವು ತೋಡಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್ ಗೆ ಒಳಗಾಗಿ ಇದೀಗ ಕೊರೊನಾ ನೆಗೆಟಿವ್ ವರದಿ ಬಂದಿರುವುದು ಯಾವುದೇ ಆತಂಕವಿಲ್ಲದಾಗಿದೆ. ಅನಗತ್ಯವಾಗಿ ಯಾರೊಬ್ಬರೂ ಅಪಪ್ರಚಾರ ಮಾಡಬಾರದು ಎಂದು ಕ್ವಾರಂಟೈನ್ ಗೆ ಒಳಗಾದವರು ಹೇಳಿದ್ದಾರೆ.