ಸುಳ್ಯ: ಸುಳ್ಯ ನಗರದ ಕಸವನ್ನು ನಗರ ಪಂಚಾಯತ್ ಕಲ್ಚೆರ್ಪೆಗೆ ಮತ್ತೆ ತಂದು ಹಾಕುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಕಲ್ಚೆರ್ಪೆಯಲ್ಲಿ ಅ.14 ರಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ ಇಲ್ಲಿ ಕಸ ಹಾಕುವ ಪ್ರಸ್ತಾಪ ಆರಂಭದಲ್ಲಿ ಬಂದಾಗ ನಾವು ಹೋರಾಟ ನಡೆಸಿದ್ದೆವು. ಆದರೆ ಇಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ವ್ಯವಸ್ಥೆ ಮಾಡುವುದಾಗಿ ಹೇಳಿ ಕಸ ಹಾಕಲು ಆರಂಭಿಸಿದ್ದರು. ಆದರೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕಸ ವಿಲೇವಾರಿ ಮಾಡಿಲ್ಲ. ಕಸವನ್ನು ಹಾಗೆ ತಂದು ಹಾಕಲಾಯಿತು. ಇದರಿಂದ ಈ ಪರಿಸರದ ಜನರು ತೀವ್ರ ತೊಂದರೆ ಅನುಭವಿಸುವಂತಾಯಿತು. ಇಲ್ಲಿಗೆ ಕಸ ಹಾಕುವುದು ಮುಂದುವರಿದರೆ ಇನ್ನಷ್ಟು ತೊಂದರೆ ಆಗಬಹುದು, ಅಲ್ಲದೆ ನಗರ ಪಂಚಾಯತ್ ಕೂಡ ಸಮಸ್ಯೆ ಎದುರಿಸಬೇಕಾದೀತು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಶೋಕ್ ಪೀಚೆ ಇಲ್ಲಿಗೆ ಕಸ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂಬುದು ನಮ್ಮ ಬೇಡಿಕೆ. ಜನರ ಭಾವನೆಗಳಿಗೆ ವಿರುದ್ಧವಾಗಿ ಕಸ ಹಾಕುವುದು ಮುಂದೆವರಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ನ.ಪಂ. ಮಾಜಿ ಸದಸ್ಯ ಕೆ.ಗೋಕುಲ್‌ದಾಸ್ ಮಾತನಾಡಿ ನಾನು ನ.ಪಂ. ಸದಸ್ಯನಾಗಿದ್ದ ಸಂದರ್ಭ ಕಲ್ಚರ್ಪೆಗೆ ಕಸ ಹಾಕಬಾರದೆಂದು ಗಟ್ಟಿಯಾಗಿ ಧ್ವನಿ ಎತ್ತಿದ್ದೆ. ಬದಲಿ ಜಾಗದ ವ್ಯವಸ್ಥೆಯ ಬಗ್ಗೆಯೂ ಸಲಹೆ ನೀಡಿದ್ದೆ. ಒಂದು ವರ್ಷದಿಂದ ಈ ಪ್ರದೇಶಕ್ಕೆ ಕಸ ಬರುತ್ತಿರಲಿಲ್ಲ. ಈಗ ಮತ್ತೆ ಬರುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಇಲ್ಲವಾದರೆ ನ.ಪಂ. ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಹಾಗೂ ಸದಸ್ಯ ಯೂಸಫ್ ಅಂಜಿಕಾರು ಮಾತನಾಡಿದರು. ಬಾಪೂ ಸಾಹೇಬ್, ಪುಷ್ಪಾವತಿ, ರಾಧಾಕೃಷ್ಣ ಪರಿವಾರಕಾನ, ಜನಾರ್ದನ , ದೇವಕಿ, ಜಲಜಾಕ್ಷಿ, ಬಾಲಚಂದ್ರ ಮತ್ತಿತರರು ಉಪಸ್ಥಿತರಿದ್ದರು.