ಸುಳ್ಯ: ನಗರ ಪಂಚಾಯತ್ ಆಡಳಿತ ಯಾರಿಗೆ ಒಲಿಯುತ್ತದೆ ? ಈ ಪ್ರಶ್ನೆ ಎಲ್ಲೆಡೆ ಇದೆ. ಕುತೂಹಲ ಎಲ್ಲರಿಗೂ ಇದೆ. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಚರ್ಚೆ ಆಗುತ್ತಲೇ ಇತ್ತು. ಈಗಲೂ ಆಗುತ್ತಿದೆ. ಈಗ ನಗರ ಪಂಚಾಯತ್ ಚುನಾವಣೆ ಮುಗಿದು ಮತದಾರನ ತೀರ್ಪು ಇ.ವಿ.ಎಂನಲ್ಲಿ ಭದ್ರವಾಗಿದೆ. ಇನ್ನು ಕೇವಲ 36 ಗಂಟೆಗಳಲ್ಲಿ ನಗರ ಪಂಚಾಯತ್ ನ ಆಡಳಿತ ಯಾರಿಗೆ ಒಲಿಯಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಅಧಿಕೃತವಾಗಿ ಫಲಿತಾಂಶ ಹೊರಬರಲಿದೆ.
ನಗರ ಪಂಚಾಯತ್ ನಲ್ಲಿ ಮತ್ತೆ ಕಮಲ ಅರಳುತ್ತದಾ.. … ಅಥವಾ ಆಡಳಿತ ಕೈ ವಶವಾಗುತ್ತದಾ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
ಸುಳ್ಯನ್ಯೂಸ್.ಕಾಂ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಪ್ರಮುಖರೊಂದಿಗೆ ಮತ್ತು 20 ವಾರ್ಡ್ ಗಳ ಮತದಾರರೊಂದಿಗೆ ಮಾತುಕತೆ ನಡೆಸಿದಾಗ ಬಂದ ಅಭಿಪ್ರಾಯಗಳನ್ನು ಕ್ರೂಡೀಕರಿಸಿ ಇದನ್ನು ಓದುಗರ ಮುಂದಿಡುತ್ತಿದ್ದೇವೆ.
20 ವಾರ್ಡ್ ಗಳಲ್ಲಿ ಏಳು ವಾರ್ಡ್ ಗಳಲ್ಲಿ ಬಿರುಸಿನ ಮತ್ತು ತೀವ್ರ ಪೈಪೋಟಿ ಕಂಡು ಬಂದಿದೆ. ಪೋಟೋ ಫಿನೀಶ್ ಫಲಿತಾಂಶ ನೀಡುವ ಈ 7 ವಾರ್ಡ್ ಗಳು ನಿರ್ಣಾಯಕವಾಗಲಿದೆ. ಒಟ್ಟಿನಲ್ಲಿ ಎರಡೂ ಪಕ್ಷಗಳಿಗೆ ತಮ್ಮ ಭದ್ರವಾದ ವಾರ್ಡ್ ಗಳನ್ನು ಪಡೆಯುವುದರ ಜೊತೆಗೆ ಈ 7 ವಾರ್ಡ್ ಯಾರ ತೆಕ್ಕೆಗೆ ಬೀಳುತ್ತದೆ ಎಂಬುದರ ಆಧಾರದಲ್ಲಿ ಅಧಿಕಾರದ ಸಾಧ್ಯತೆಯನ್ನು ತೆರೆದಿಡಲಿದೆ.
7 ವಾರ್ಡ್ ಗಳ ಫಲಿತಾಂಶದ ಕುತೂಹಲ ಉಳಿದಿದ್ದು ಈ ವಾರ್ಡ್ ಗಳ ಫಲಿತಾಂಶ ಎರಡೂ ಪಕ್ಷಗಳಿಗೆ ಹಂಚಿ ಹೋಗಲಿದ್ದು ಆಡಳಿತಾರೂಢ ಬಿಜೆಪಿ 10 ರಿಂದ 13 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದ್ದರೆ ಕಾಂಗ್ರೆಸ್ 8 ರಿಂದ 11 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಒಂದು ಸ್ಥಾನ ಎಸ್ ಡಿ ಪಿ ಐ ಮತ್ತು ಒಂದು ಸ್ಥಾನ ಪಕ್ಷೇತರರು ಪಡೆಯುವ ಸಾಧ್ಯತೆ ಇದೆ.
( ಸುಳ್ಯನ್ಯೂಸ್.ಕಾಂ ತಂಡ ಮತದಾರರೊಂದಿಗೆ ಮಾತನಾಡಿದ ಹಾಗೂ ಪ್ರಮುಖರೊಂದಿಗೆ ಮಾತನಾಡಿದ ಆಧಾರದಲ್ಲಿ ಈ ವಿಶ್ಲೇಷಣೆ ಮಾಡಲಾಗಿದೆ. ಯಾವುದೇ ವೈಜ್ಞಾನಿಕ ಆಧಾರದಲ್ಲಿ ಸಮೀಕ್ಷೆ ನಡೆಸಿಲ್ಲ. ಹೀಗಾಗಿ ಶೇ.100 ರಷ್ಟು ಖಚಿತವಾದ ವಿಶ್ಲೇಷಣೆ ಸಾಧ್ಯವಾಗಿಲ್ಲ. ಇದು ಮೇಲ್ನೋಟದ ಮಾಹಿತಿಯಷ್ಟೇ. ಇದರಲ್ಲಿ ಬದಲಾವಣೆ ಆಗುವ ಸಾಧ್ಯತೆಯೂ ಇದೆ. – ಸಂಪಾದಕ )