*ಸ್ಪೆಷಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ
ಸುಳ್ಯ: ರಾಜ್ಯ ಸರಕಾರದ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿಯೂ ಮೈತ್ರಿ ಏರ್ಪಡುವ ಸಂಭವ ಇದೆ. ಈ ಕುರಿತು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಮಧ್ಯೆ ಒಂದು ಹಂತದ ಮಾತುಕತೆ ನಡೆದಿದೆ. ಮೂರು ವಾರ್ಡ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಮಧ್ಯೆ ನಡೆದ ಚರ್ಚೆಯಲ್ಲಿ ಜಯನಗರ, ಶಾಂತಿನಗರ, ನಾವೂರು ವಾರ್ಡ್ ಗಳನ್ನು ಬಿಟ್ಟು ಕೊಡಬೇಕು ಎಂದು ಜೆಡಿಎಸ್ ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿ. ನಾಮಪತ್ರ ಹಿಂಪಡೆಯುವ ಅವಧಿ ಮುಗಿಯುವುದರೊಳಗೆ ಚರ್ಚೆ ನಡೆಸಿ ವಾರ್ಡ್ ಗಳನ್ನು ಹಂಚಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂಬ ಸಲಹೆಯನ್ನು ಕಾಂಗ್ರೆಸ್ ಮುಖಂಡರು ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಇಳಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಜಯನಗರ ಮತ್ತು ಶಾಂತಿನಗರ ವಾರ್ಡ್ ಗಳಲ್ಲಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ನಾವೂರು ವಾರ್ಡ್ ನಲ್ಲಿ ಕಾಂಗ್ರೆಸ್ ನ ಪ್ರಮುಖರು ಅಭ್ಯರ್ಥಿಯಾಗಲು ರೇಸ್ ನಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಮೈತ್ರಿ ಉಂಟಾದಲ್ಲಿ ಯಾವ ರೀತಿಯ ಬದಲಾವಣೆ ಆಗಲಿದೆ ಎಂಬ ಕುತೂಹಲ ಮೂಡಿದೆ.
ಕಳೆದ ಅವಧಿಗಿಂತ ಮೊದಲು ನಗರ ಪಂಚಾಯತ್ ನಲ್ಲಿ ಜೆಡಿಎಸ್ ಸದಸ್ಯರು ಇದ್ದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿಯೇ ಸ್ಪರ್ಧೆಗೆ ಇಳಿಯುತ್ತಿತ್ತು. ಈಗ ರಾಜ್ಯದಲ್ಲಿ ಉಂಟಾಗಿರುವ ಮೈತ್ರಿಯ ಹಿನ್ನಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಎದುರಿಸಲು ಎರಡೂ ಪಕ್ಷಗಳು ಕೈ ಜೋಡಿಸಲಿದೆ ಎಂದು ಹೇಳಲಾಗಿದೆ. ಲೋಕಸಭಾ ಚುನಾವಣೆಯಲ್ಲಿಯೂ ಎರಡೂ ಪಕ್ಷಗಳು ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಸುಳ್ಯ ನ.ಪಂ.ಚುನಾವಣೆಯಲ್ಲಿ ಮೈತ್ರಿ ಸಂಭವ : ಜೆಡಿಎಸ್ ಮೂರು ಕಡೆ ಸ್ಪರ್ಧೆ ?"