ಸುಳ್ಯ: ಸುಳ್ಯ ನಗರ ಪಂಚಾಯತ್ ನ 20 ವಾರ್ಡ್ ಗಳ ಪೈಕಿ ಎರಡು ಮಂದಿ ಪಕ್ಷೇತರ ಅಭ್ಯರ್ಥಿಗಳು ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
10 ಮಂದಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆ ಮಾಡುವ ಮೂಲಕ ಈ ಬಾರಿ ಹಲವು ವಾರ್ಡ್ ಗಳಲ್ಲಿ ತ್ರಿಕೋನ ಸ್ಪರ್ಧೆಯ ರಂಗು ತಂದಿತ್ತು. ತೀವ್ರ ಕುತೂಹಲ ಕೆರಳಿಸಿದ್ದ 17ನೇ ವಾರ್ಡ್ ಬೋರುಗುಡ್ಡೆ ಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ ಕೆ.ಎಸ್.ಉಮ್ಮರ್(ಬಿ.ಉಮ್ಮರ್) ಮತ್ತು 13ನೇ ವಾರ್ಡ್ ಬೂಡುವಿನಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ ರಿಯಾಝ್ ಕಟ್ಟೆಕ್ಕಾರ್ ಗೆಲುವಿನ ನಗೆ ಬೀರಿದ್ದಾರೆ. ಕಳೆದ ಬಾರಿ ಎಸ್.ಡಿ.ಪಿ.ಐ ಸದಸ್ಯ ನಾಗಿದ್ದ ಉಮ್ಮರ್ ಈ ಬಾರಿ ಪಕ್ಷೇತರನಾಗಿ ಸ್ಪರ್ಧೆಗಿಳಿದಿದ್ದರು. ಕಾಂಗ್ರೆಸ್ ನ ಕೆ.ಎಂ.ಮುಸ್ತಫಾ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆರ್.ಕೆ.ಮಹಮ್ಮದ್, ಬಿಜೆಪಿ ಅಭ್ಯರ್ಥಿ ರಂಜಿತ್ ಪೂಜಾರಿ ಒಡ್ಡಿದ ಚತಷ್ಕೋನ ಸ್ಪರ್ಧೆ ಯನ್ನು ಎದುರಿಸಿ ಉಮ್ಮರ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಳೆದ ಬಾರಿ ಸದಸ್ಯರಾಗಿದ್ದ ಸಂದರ್ಭದಲ್ಲಿ ತನ್ನ ವಾರ್ಡ್ ನಲ್ಲಿ ನಡೆಸಿದ ಅಭಿವೃದ್ಧಿ ಮತ್ತು ಹೋರಾಟಗಳು ವಾರ್ಡ್ ಬದಲಾದರೂ ಮತದಾರ ಉಮ್ಮರ್ ಕೈ ಹಿಡಿಯಲು ಸಹಕಾರಿಯಾಯಿತು ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಿಯಾಝ್ ಕಟ್ಟೆಕ್ಕಾರ್ ಪಕ್ಚೇತರನಾಗಿ ಸ್ಪರ್ಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಗಳನ್ನು ಪರಾಭವಗೊಳಿಸಿ ಗೆಲುವಿನ ನಗೆ ಬೀರಿದರು. ಕಳೆದ ಒಂದು ವರ್ಷದಿಂದ ವಾರ್ಡ್ ನಲ್ಲಿ ಸಕ್ರೀಯನಾಗಿ ಜನಪರ ಸೇವೆಯಲ್ಲಿ ತೊಡಗಿದ್ದ ರಿಯಾಝ್ ಗೆ ಮತದಾರ ಬೆಂಬಲ ಸೂಚಿಸುವ ಮೂಲಕ ಅನಿರೀಕ್ಷಿತ ಫಲಿತಾಂಶ ಬಂದಿದೆ. ಇನ್ನುಳಿದಂತೆ ಪಕ್ಷೇತರರಾಗಿ 19ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಮೋಹಿನಿ 140 ಮತ ಮತ್ತು ಆರನೇ ವಾರ್ಡ್ ಬೀರಮಂಗಲ ದಲ್ಲಿ ಸ್ಲರ್ಧಿಸಿದ್ದ ಅಬ್ದುಲ್ ರಹಿಮಾನ್ 30 ಮತ ಪಡೆದರೆ ಉಳಿದ ಕಡೆ ಪಕ್ಷೇತರ ಅಭ್ಯರ್ಥಿಗಳು ಯಾವುದೇ ಪ್ರಭಾವ ಬೀರಿಲ್ಲ.