ಸ್ವಾತಂತ್ರ್ಯದಿನ ಶುಭಾಶಯ. ಎಲ್ಲರಿಗೂ ಶುಭಾಶಯವನ್ನು ತಿಳಿಸುತ್ತಾ, ಈ ಸಂದರ್ಭ ನಮ್ಮ ಜವಾಬ್ದಾರಿ ಏನು ಎಂಬುದರ ಬಗ್ಗೆಯೂ ಅರಿಯಬೇಕಿದೆ. ಈ ಕಾರಣದಿಂದ ರಾಕೇಶ್ ಕುಮಾರ್ ಕಮ್ಮಜೆ ಅವರು ಲೇಖನವನ್ನು ಬರೆದಿದ್ದಾರೆ. ಈ ಕಡೆಗೆ ನಮ್ಮ ಬೆಳಕು…
ಸ್ವಾತಂತ್ರ್ಯ ಅನ್ನುವುದು ಸಕಲ ಜೀವರಾಶಿಗಳೂ ಸದಾ ಬಯಸುವ ಸಂಗತಿಯೇ ಹೌದು. ಅದರಲ್ಲೂ ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಪಡೆದುಕೊಂಡವರಿಗೆ ಸ್ವಾತಂತ್ರ್ಯ ಉತ್ಸವವೆನಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ನಾವೂ ಹಾಗೆಯೇ!
ಸ್ವಾತಂತ್ರ್ಯ ಎಂಬ ಪದ ಬಿಡುಗಡೆ, ವಿಮೋಚನೆ ಎಂಬ ಅರ್ಥವನ್ನು ಹೊಮ್ಮಿಸುತ್ತದಾದರೂ, ಆ ಪದದ ಜತೆಜತೆಗೇ ಜವಾಬ್ದಾರಿ ಎಂಬ ಅಗೋಚರ ಭಾವವೂ ವ್ಯಕ್ತವಾಗುವುದನ್ನು ಗುರುತಿಸುವಲ್ಲಿ ಎಡವಬಾರದು. ಸ್ವಾತಂತ್ರ್ಯಕ್ಕೆ ಮೆರುಗು ಮೂಡುವುದೇ ಜವಾಬ್ದಾರಿಯ ತಳಹದಿಯಲ್ಲಿ ಎಂಬುದು ಸರ್ವವಿಧಿತ.
ನಮ್ಮ ದೇಶವೀಗ ವಿಶ್ವವಂದ್ಯ ಸ್ಥಾನವನ್ನು ಅಲಂಕರಿಸುವ ಸಾಮರ್ಥ್ಯವನ್ನು ಹೊರಸೂಸುತ್ತಿದೆ. ಅದಕ್ಕೆ ಬೇಕಾದ ಯೋಗ್ಯತೆಗಳೂ ಇಲ್ಲಿವೆ. ಆದರೆ ಇಂತಹ ಸಾರ್ವಭೌಮ ರಾಷ್ಟ್ರದ ಪ್ರಜೆಗಳು ಹೇಗಿರಬೇಕು? ಇತರರಿಗೆ ಮಾದರಿಯಾಗಲಿರುವವರ ಆಚಾರ, ವಿಚಾರ, ವ್ಯವಹಾರಗಳು ಎಂತಿರಬೇಕು? ಈ ಕುರಿತು ಆಲೋಚಿಸಲು ಇದು ಪ್ರಶಸ್ತ ಸಂದರ್ಭವೆನಿಸುತ್ತದೆ. ಹಾಗೆ ನೋಡಿದರೆ ದೇಶವೊಂದು ಉಚ್ರಾಯ ಸ್ಥಿತಿ ಅಥವ ಅಧಃಪತನ ಕಾಣುವುದಕ್ಕೆ ಅಲ್ಲಿನ ಜನರ ಮನಃಸ್ಥಿತಿಗಳೂ ಕಾರಣವಾಗುತ್ತವೆ ಎಂಬುದನ್ನು ಮರೆಯಬಾರದು. ಅಂದಹಾಗೆ, ನನ್ನ ದೇಶಕ್ಕೆ ನನ್ನ ಬಾಧ್ಯಸ್ಥಿಕೆ ಏನು ಎಂಬುದನ್ನು ನೆನಪು ಮಾಡುವುದಕ್ಕೇ ಈ ಸ್ವಾತಂತ್ರ್ಯ ದಿನಾಚರಣೆ ಬರುತ್ತಿದೆಯೇನೋ ಅನಿಸುತ್ತದೆ!

ರಾಕೇಶ್ ಕುಮಾರ್ ಕಮ್ಮಜೆ
ಮುಖ್ಯಸ್ಥರು , ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು, ಪುತ್ತೂರು