ಹಸಿರು ಏಕವ್ಯಕ್ತಿ ಸೈನ್ಯ

June 5, 2019
5:00 PM

ಮಂಗಳೂರಿನ ನಂದಿಗುಡ್ಡೆಯ ಸ್ಮಶಾನದಲ್ಲಿ ಜೀತ್ ಮಿಲನ್ ರೋಚ್ (42) ಜತೆಗೆ ಅಡ್ಡಾಡುತ್ತಿದ್ದಾಗ, “ನಿಜವಾದ ಆನಂದ ಅನುಭವಿಸುವ ಜಾಗವಿದು. ಮನುಷ್ಯಾತಿಕ್ರಮಣವಿಲ್ಲ. ರಾಗ ದ್ವೇಷಗಳ ಸೋಂಕಿಲ್ಲ. ಇಲ್ನೋಡಿ. ಎಷ್ಟೊಂದು ಮರಗಳು. ಹಕ್ಕಿಗಳು ಖುಷಿಯಲ್ಲಿವೆ. ಈ ಆನಂದ ಎಲ್ಲಿ ಸಿಗಬಹುದು? ಇಂತಹ ದಟ್ಟ ಹಸುರು ನಗರದಲ್ಲಿ ತುಂಬುವ ದಿನಗಳು ಬಂದಾವೇ?” ಪ್ರಶ್ನೆಯೊಂದಿಗೆ ಮಾತು ಮೌನವಾಯಿತು.

Advertisement
Advertisement

ಜೀತ್ ಅಪ್ಪಟ ಪ್ರಕೃತಿ ಪ್ರೇಮಿ. ಹಸುರಿನ ಸುತ್ತ ಮನಸ್ಸು ಕಟ್ಟಿಕೊಳ್ಳುವ ಬದುಕು. ಕೃಷಿ ಕುಟುಂಬದ ಹಿನ್ನೆಲೆ. ಕೈತುಂಬುವ ವೃತ್ತಿಯಿದ್ದರೂ ಸಮಾಜಮುಖಿ ಚಿಂತನೆ. ಮಂಗಳೂರಿನ ಮೋರ್ಗನ್‍ಗೇಟಿನಲ್ಲಿ ವಾಸ. ಸುಮಾರು ಎರಡು ದಶಕಗಳ ಹಿಂದೆ ಹಿಂದೆ ಮನೆಯ ಸನಿಹ ಗಿಡಗಳನ್ನು ಬೆಳೆಸಿದರು. ಅದರಿಂದ ಸಿಕ್ಕ ಹಸಿರಿನ ಆನಂದದಿಂದ ಪ್ರಚೋದಿತರಾದರು. ಈ ಸುಖ ನನಗೆ ಮಾತ್ರವಲ್ಲ, ಎಲ್ಲರಿಗೂ ಸಿಗುವಂತಾಗಬೇಕು – ರಸ್ತೆಯ ಇಕ್ಕೆಡೆ ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪ.

Advertisement

ನರ್ಸರಿ, ಅರಣ್ಯ ಇಲಾಖೆಗಳಿಂದ ಗಿಡಗಳ ಖರೀದಿ. ರಸ್ತೆಬದಿಗಳಲ್ಲಿ ಗಿಡ ನೆಡುವ ಕಾಯಕ. ಬೇಸಿಗೆಯಲ್ಲಿ ನೀರುಣಿಸಿ ಆರೈಕೆ. ದಶಕಗಳ ಕಾಲ ಕಿಸೆಯಿಂದ ವೆಚ್ಚ ಮಾಡಿ ಒಂದೂವರೆ ಸಾವಿರ ಗಿಡಗಳನ್ನು ರಸ್ತೆಗಳ ಎರಡೂ ಬದಿಗಳಲ್ಲಿ ನೆಟ್ಟು ನಿಜವಾದ ವನಮಹೋತ್ಸವಕ್ಕೆ ಮುನ್ನುಡಿಯಿಟ್ಟರು. ಹಲವರ ಗೇಲಿಯ ಮಾತುಗಳಿಗೆ ಕಿವಿಯಾದರು. ‘ಲಾಭವಿಲ್ಲದೆ ಯಾಕೆ ಮಾಡ್ತಾರೆ?’ ಎನ್ನುವ ಕಟಕಿಯನ್ನೂ ಕೇಳಿದ್ದರು.

ದಶಕದ ಹಿಂದೆ, ಕ್ಲಿಫೊರ್ಡ್ ಲೋಬೊ ಅರಣ್ಯ ಅಧಿಕಾರಿಯಾಗಿ ಬಂದಂದಿನಿಂದ ಜೀತ್ ಯೋಜನೆ, ಯೋಚನೆಗಳು ಹೊಸ ದಿಕ್ಕಿನತ್ತ ವಾಲಿದುವು. ಇಲಾಖೆಯೊಂದಿಗೆ ತನ್ನ ಕಾರ್ಯಸೂಚಿಯನ್ನು ಮಿಳಿತಗೊಳಿಸಿದರು. ಜೂನ್ ತಿಂಗಳಲ್ಲಿ ನೀಲನಕ್ಷೆಯನ್ನು ಸಿದ್ಧಪಡಿಸಿ ಲೋಬೋ ಮುಂದಿರಿಸಿದರು. ಈ ಕಾಯಕಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಇಲಾಖೆ ನೀಡಿತು.

Advertisement

ಒಮ್ಮೆ ಗಿಡ ನೆಟ್ಟರೆ ಜೀತ್ ಅದರ ಪೂರ್ತಿ ಹೊಣೆಯನ್ನು ಹೊತ್ತುಕೊಳ್ಳುತ್ತಾರೆ. ಒಂದು ವರುಷಗಳ ಕಾಲ ನೀರುಣಿಸಿ ಆರೈಕೆ ಮಾಡುತ್ತಾರೆ. ಗಿಡಗಳ ಬೆಳವಣಿಗೆಯನ್ನು ಗಮನಿಸುತ್ತಾರೆ. ರಕ್ಷಣೆಗೆ ಇಲಾಖೆಯ ನೆರವಿದೆ. ಗಿಡಗಳನ್ನು ನೆಡುವ ಕೆಲಸಗಳಿಗೆ ಶ್ರಮಿಕರು, ವಾಹನ ಒದಗಣೆ, ಸಾರಿಗೆ ವೆಚ್ಚ, ನೀರಿನ ವ್ಯವಸ್ಥೆ ಮಾಡುವ ಹಸುರು ಪ್ರಿಯರ ಹೆಗಲೆಣೆಯಿದೆ. “ನನಗೆ ಹಣ ಬೇಡ. ಜನರ ಮನ ಬೇಕು, ಸಹಕಾರ ಬೇಕು. ಜನಸಹಭಾಗಿತ್ವದಲ್ಲಿ ಹಸುರೆಬ್ಬಿಸುವ ಕೆಲಸವಾಗಬೇಕು,” ಎನ್ನುವ ಆಶೆಯನ್ನು ಹೊಂದಿದ್ದಾರೆ.

ನಂದಿಗುಡ್ಡ ಸುತ್ತುಮುತ್ತ ರಸ್ತೆಗಳಿಗೆ ಕಾಂಕ್ರಿಟೀಕರಣದ ಸಂದರ್ಭ. ಹಲವಾರು ಗಿಡಗಳು ನೆಲಕ್ಕುರುಳಿದಾಗ ಮರುಗಿದರು. “ಕಡಿಯುವವರಿಗೆ ನೆಟ್ಟವರಲ್ಲಿ ಒಂದು ಮಾತು ಕೇಳುವ ಸೌಜನ್ಯ ಇಲ್ಲ. ಒಳ್ಳೊಳ್ಳೆಯ ಗಿಡಗಳು ನಾಶವಾದುವು. ಬೇಸರ ಬಂತು. ಅನಾವಶ್ಯಕವಾಗಿ ಮನುಷ್ಯ ಪ್ರವೇಶ ಮಾಡದ ಸ್ಮಶಾನದ ಆವರಣವನ್ನು ಹಸುರು ಮಾಡಲು ನಿಶ್ಚಯಮಾಡಿದೆ. ನಂದಿಗುಡ್ಡದ ಐದು ಸ್ಮಶಾನವನ್ನು ಆರಿಸಿಕೊಂಡೆ. ಎಲ್ಲರ ಬೆಂಬಲ ಸಿಕ್ಕಿತು,” ಎನ್ನುವ ಜೀತ್ ಒಂದು ಕಹಿ ಘಟನೆಯನ್ನು ಹೇಳಿದರು, “ಒಂದೆರಡು ಸಲ ಸ್ಮಶಾನದೊಳಗೆ ಬೆಂಕಿಯಿಂದಾಗಿ ಕೆಲವು ಗಿಡಗಳು ನಾಶವಾಗಿತ್ತು. ಹಕ್ಕುಗಳ ಬಗ್ಗೆ ಹೋರಾಡುತ್ತೇವೆ, ಪ್ರತಿಭಟನೆ ಮಾಡುತ್ತೇವೆ. ಆದರೆ ನಮ್ಮ ಜವಾಬ್ದಾರಿಗಳು ನಮಗೆ ತಿಳಿಯದಿರುವುದು ದುರಂತ”.

Advertisement

ಮಾವು, ಹಲಸು, ಬಸವನಪಾದ, ಚೆರ್ರಿ, ಶ್ರೀಗಂಧ, ರೆಂಜ, ಹೊನ್ನೆ, ಮಹಾಗನಿ, ಟೀಕ್, ಬಾದಾಮಿ, ಕೋಕಂ.. ಮೊದಲಾದ ಗಿಡಗಳನ್ನು ಆಯಾಯ ಜಾಗಕ್ಕೆ ಸೂಕ್ತವಾಗುವಂತೆ ನಾಟಿ. “ಸಿಟಿ ಗ್ರೀನರಿಗೆ ಆಯ್ಕೆ ಮಾಡುವ ಗಿಡಗಳಲ್ಲಿ ಕೆಲವೊಂದು ಮಾನದಂಡಗಳಿವೆ. ಉದಾ: ಧಾರ್ಮಿಕ ಕೇಂದ್ರಗಳಿರುವಲ್ಲಿ ಹೂ ಬಿಡುವ ಗಿಡಗಳಿದ್ದರೆ ಒಳ್ಳೆಯದು. ಶಾಲಾ ಸನಿಹ ಹಣ್ಣುಗಳ ಗಿಡಗಳಿದ್ದರೆ ಒಳಿತು,” ಎನ್ನುತ್ತಾರೆ. ವಿಶೇಷ ಆರ್ಥಿಕ ವಲಯದ ಸರಹದ್ದಿನಲ್ಲಿ ಸಾರ್ವಜನಿಕ ರಸ್ತೆಯಿಕ್ಕೆಡೆ ಗಿಡಗಳು ದೊಡ್ಡದಾದಾಗ ರಸ್ತೆಗೆ ತೊಂದರೆಯಾಗಬಹುದು ಎನ್ನುವ ಆಕ್ಷೇಪ ಬಂದಿತ್ತು. ಅದಕ್ಕಾಗಿ ಹೆಚ್ಚು ಎತ್ತರ ಬೆಳೆಯದ ಪುನರ್ಪುಳಿ ಯಾ ಕೋಕಂ ಗಿಡಗಳನ್ನು ನೆಡಲಾಗಿದೆ.

ಜೀತ್ ಕಣ್ಗಾವಲಲ್ಲಿ ಈ ವರೆಗೆ ಐವತ್ತು ಸಾವಿರಕ್ಕೂ ಮಿಕ್ಕಿ ಗಿಡಗಳು ನಗರದಲ್ಲಿ ತಲೆಯೆತ್ತಿವೆ. ತಾನು ಕಾರು ಚಾಲನೆಯಲ್ಲಿದ್ದಾಗಲೂ ದೃಷ್ಟಿ ಮಾತ್ರ ಗಿಡಗಳತ್ತ. ಒಂದು ಗಿಡ ವಾಲಿದರೂ ನೆಟ್ಟಗೆ ಮಾಡಿಯೇ ಪ್ರಯಾಣ ಮುಂದುವರಿಯುತ್ತದೆ. ರಸ್ತೆಯುದ್ದಕ್ಕೂ ಗಿಡಗಳನ್ನೇನೋ ಬೆಳೆಸಿದ್ದೀರಿ. ದನಗಳು ತಿಂದು ಹಾಳು ಮಾಡುವುದಿಲ್ಲವೇ? “ನನಗೆ ದನಗಳ ಭಯವಿಲ್ಲ. ಜನಗಳ ಅಂಜಿಕೆಯಿದೆ. ನಗರದಲ್ಲಿ ದನಗಳು ಎಲ್ಲಿವೆ ಸಾರ್. ದಾರಿ ಪಕ್ಕ ಇದ್ದ ಗಿಡಗಳನ್ನು ಸಾಕುವುದು ಬೇಡ, ಅದನ್ನು ಮುರಿದು, ಚಿಗುರನ್ನು ಚಿವುಟಿ ಹಾಳು ಮಾಡುತ್ತಾರೆ?”

Advertisement

ನಗರದ ಬಹುಭಾಗ ಕಾಂಕ್ರಿಟ್ ಮನೆಗಳು. ಅಂಗಳವೂ ಕಾಂಕ್ರಿಟ್‍ಮಯ. ಒಂದು ಎಲೆ ಅಂಗಳದೊಳಗೆ ಬಿದ್ದರೂ ಗೊಣಗಾಟ. ಒಮ್ಮೆ ಹೀಗಾಯಿತು – ಗಿಡ ನೆಡುತ್ತಿದ್ದಾಗ, “ನಮ್ಮ ಮನೆಯ ಮುಂದೆ ಗಿಡ ನೆಡಬೇಡಿ, ಅದು ದೊಡ್ಡದಾದ ಮೇಲೆ ಎಲೆ ನಮ್ಮ ಅಂಗಳಕ್ಕೆ ಬೀಳುತ್ತದೆ. ಅದನ್ನು ತೆಗೆಯುವುದೇ ಮತ್ತೆ ಕೆಲಸವಾದೀತು” ಎಂದ ಶ್ರೀಮಂತ ಮನಸ್ಸುಗಳ ಹಸಿರುಪ್ರೀತಿಯನ್ನು ಜೀತ್ ಬಿಡಿಸುತ್ತಾರೆ.

 

Advertisement

ಅಭಿವೃದ್ಧಿಗೆ ಮೊದಲ ಬಲಿ ಗಿಡ-ಮರಗಳು. ಅಭಿವೃದ್ಧಿಯು ಹಸಿರನ್ನು ಸಹಿಸುವುದಿಲ್ಲ. ಕೊಡಲಿ ಹಿಡಿದ ಕೈಗಳಿಗೆ ನಾಳೆಗಳು ಬೇಕಾಗಿಲ್ಲ. ‘ಆಮ್ಲಜನಕ ಲ್ಯಾಬ್‍ನಲ್ಲಿದೆ. ಹಣ ನೀಡಿದರೆ ಕುಡಿನೀರು ಬಾಟಲಿಯಲ್ಲಿ ಸಿಗುತ್ತದೆ’ ಎಂಬ ದೊಡ್ಡಣ್ಣನ ಯಜಮಾನಿಕೆ. ಹಾಗೆಂತ ಮನೆ ಮುಂದೆ ಇಂತಹ ಗಿಡ ನೆಡಿ ಎಂದು ಬಿನ್ನವಿಸುವ ಅಮ್ಮಂದಿರಿದ್ದಾರೆ. ಜಾಗ ತೋರಿಸಿ, ಗಿಡ ನೆಟ್ಟು, ಸ್ವತಃ ನೀರೆರೆದು ಆರೈಕೆ ಮಾಡುವ ಕುಟುಂಬಗಳ ಸಸ್ಯ ಪ್ರೀತಿ ಅನನ್ಯ. ಜೀತ್ ಅವರೊಂದಿಗೆ ಮಡದಿ ಸೆಲ್ಮಾ ಮರಿಯಾ ಕೂಡಾ ಗಾಢವಾಗಿ ಹಸಿರನ್ನಂಟಿಸಿಕೊಂಡಿದ್ದಾರೆ.

Advertisement

ವಿದ್ಯುತ್ ಸರಬರಾಜು ತಂತಿಗಳಿಗೆ ಮರಗಳ ಗೆಲ್ಲುಗಳು ಶಾಶ್ವತವಾಗಿ ತಾಗಬಾರದೆಂದು ಮರಗಳ ಬುಡವನ್ನೇ ಕಡಿದ ದಿನಗಳ ಕಹಿಯನ್ನು ಹಂಚಿಕೊಳ್ಳುತ್ತಾರೆ. ಇಲಾಖೆಯು ಇಂತಹ ಕೆಲಸಗಳಿಗೆ ಹೊರಗುತ್ತಿಗೆ ಕೊಡುತ್ತಿರುವುದರಿಂದ ಅವರಿಗೆ ಯಾವ ಗಿಡವಾದರೇನು? “ನಾವು ಸಾಮಾನ್ಯವಾಗಿ ವಿದ್ಯುತ್ ತಂತಿಗಳು ಹೋದೆಡೆ ಹೆಚ್ಚು ಎತ್ತರಕ್ಕೆ ಬೆಳೆಯದ ಮರಗಳನ್ನು ಬೆಳೆಸುತ್ತೇವೆ. ಅದೆಂದೂ ತಂತಿಯನ್ನು ತಾಕಲಾರದು. ಹೀಗಿದ್ದರೂ ಗೆಲ್ಲು ಕಡಿಯುವ ಬದಲು ಮರದ ಬುಡವನ್ನೇ ಕಡಿದುಬಿಡುತ್ತಾರೆ.”

 

Advertisement

ಮಹಾನಗರ ಪಾಲಿಕೆಯಲ್ಲಿ ‘ಗ್ರೀನ್ ಸೆಸ್’ ಅಂತ ತೆರಿಗೆಯನ್ನು ವಸೂಲಿ ಮಾಡುತ್ತಾರೆ. ಈ ಮೊತ್ತ ಎಲ್ಲಿ ವಿನಿಯೋಗವಾಗುತ್ತದೆ. ನಗರ ಎಷ್ಟು ಹಸಿರಾಗಿದೆ. ವರ್ಷಕ್ಕೊಮ್ಮೆ ನಗರದ ಹಸುರೀಕರಣಕ್ಕಾಗಿ ಸರಕಾರದ ವತಿಯಿಂದ ಭರ್ಜರಿ ವೆಚ್ಚದಲ್ಲಿ ಮೀಟಿಂಗ್ ಆಗುತ್ತದೆ. ಭೋಜನದೊಂದಿಗೆ ಹಸುರೀಕರಣದ ಕಲಾಪವೂ ಮುಗಿಯುತ್ತದೆ! ಜೀತ್ ಆಡಳಿತದ ಒಂದು ಮುಖದತ್ತ ಬೆರಳು ತೋರುತ್ತಾರೆ.

Advertisement

 

Advertisement

ಮಗುವನ್ನು ಬೆಳೆಸಲು ಎಷ್ಟು ಶ್ರಮವಿದೆಯೋ ಅಷ್ಟೇ ಶ್ರಮ ಮರವೊಂದನ್ನು ಬೆಳೆಸಲು ಬೇಕು.ಜೀತ್ ಅವರಂತೆ ನಗರದಲ್ಲಿ ಡ್ಯಾನಿಯಲ್, ಕಾರ್ತಿಕ್ ಸುವರ್ಣ, ಮೈನಾ ಶೇಟ್, ಸುಭಾಸ್ ಆಳ್ವ, ಮಧು, ಹಸನಬ್ಬ… ಮೊದಲಾದ ಏಕವ್ಯಕ್ತಿ ಹಸುರು ಸೈನ್ಯವು ನಗರದ ಹಸುರೀಕರಣದಲ್ಲಿ ತೊಡಗಿಸಿಕೊಂಡಿದೆ. ಈ ಸೈನ್ಯಗಳನ್ನು ಗಟ್ಟಿಗೊಳಿಸುವ ಮನಸ್ಸುಗಳು ಬೇಕಾಗಿವೆ. 

ಆರ್ಥಿಕ ಶ್ರೀಮಂತಿಕೆ ಕಾಲಬುಡದಲ್ಲಿ ಬಿದ್ದಿದೆ ಎಂದು ನಾವೆಲ್ಲ ಭ್ರಮಿಸಿದ್ದೇವೆ. ಆದರೆ ಉಸಿರಿಗೆ ಶಕ್ತಿ ನೀಡುವ ಶ್ರೀಮಂತಿಕೆ ಹಸುರಿನಲ್ಲಿದೆ ಎನ್ನುವ ಜಾಣ ಮರೆವಿಗೆ ಚಿಕಿತ್ಸೆ ಬೇಕಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

ಇದನ್ನೂ ಓದಿ

ಮಕ್ಕಳಿಗೆ ಬೇಕು ಪರಿಸರದ ಸ್ಪರ್ಶ
October 2, 2024
11:27 PM
by: ಡಾ.ಚಂದ್ರಶೇಖರ ದಾಮ್ಲೆ
ಡಿಜಿಟಲೀಕರಣದತ್ತ ಶಿಕ್ಷಣದ ಧುೃವೀಕರಣ
September 26, 2024
2:32 PM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆ ಮಾರುಕಟ್ಟೆ ಏನಾಗುತ್ತದೆ…? | ಯಾರಿಗಾದರೂ ಮಾಹಿತಿ ಇದೆಯೇ..? |
September 25, 2024
12:41 PM
by: ಪ್ರಬಂಧ ಅಂಬುತೀರ್ಥ
ತೆಂಗಿನ ಮೊಳಕೆ | “ಕೊಕೋನಟ್‌ ಆಪಲ್” ಉದ್ಯಮವಾಗಿಸಿದ ಯುವಕ | ಮೊಳಕೆಯ ಒಂದು ಹೂವಿಗೆ 120…!
September 24, 2024
12:18 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror