ಇಂದು ನವರಾತ್ರಿ ಆರಂಭ. ಸಮಸ್ತರಿಗೂ ಶುಭಾಶಯ.
ಈ ಶುಭ ಸಂದರ್ಭದಲ್ಲಿ ಸುಳ್ಯನ್ಯೂಸ್.ಕಾಂ ಹೊಸದೊಂದು ಹೆಜ್ಜೆ ಇರಿಸಿದೆ. ಹೊಸಪ್ರಯೋಗವೂ ಹೌದು. ಯಾವುದೇ ಟೀಕೆ, ಟಿಪ್ಪಣಿಗಳು ಇಲ್ಲದೆಯೇ ಈಗ ನೀವೆಲ್ಲಾ ಓದುವ ಮಾದರಿಯಲ್ಲಿಯೇ ಸಂಜೆಯ ವೇಳೆ ಒಂದೇ ಪುಟದಲ್ಲಿ ಇದೆಲ್ಲಾ ಸುದ್ದಿಗಳು ಲಭ್ಯವಾಗುವಂತೆ ಮಾಡುವ ಪ್ರಯತ್ನ ಇದು.
ಕಳೆದ 6 ತಿಂಗಳಿನಿಂದ ನಿಮ್ಮೆಲ್ಲರ ಪ್ರೋತ್ಸಾಹ , ಸಹಕಾರ ನಮ್ಮ ಉತ್ಸಾಹವನ್ನೂ ಇಮ್ಮಡಿಗೊಳಿಸಿದೆ. ಈ ಕಾರಣದಿಂದಲೇ ಈಗ ಹೊಸ ಹೆಜ್ಜೆ ಇರಿಸಿದ್ದೇವೆ. ಈಗ ಓದುತ್ತಿರುವ ವೆಬ್ ಮಾದರಿಯಲ್ಲಿಯೇ ಇದೊಂದು ಹೊಸ ಪ್ರಯತ್ನದೊಂದಿಗೆ ನಿಮ್ಮ ಮುಂದೆ. ಆದರೆ ಇದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಮಾರಾಟವೂ ಇಲ್ಲ. ನಿಮ್ಮ ಅನುಕೂಲಕ್ಕಾಗಿ ನಮ್ಮ ಹೊಸ ಹೆಜ್ಜೆಯಷ್ಟೇ. ಇಲ್ಲಿ ರಚನಾತ್ಮಕ, ಪಾಸಿಟಿವ್ ಸಂಗತಿಗಳು ಇರಲಿದೆ.
ಇದರ ಜೊತೆಗೆ ನಮ್ಮ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ. ಆರಂಭದಿಂದಲೇ ನಾವು ಹೇಳಿರುವುವಂತೆಯೇ, ನಾವು ಯಾರೊಂದಿಗೂ ಪೈಪೋಟಿಗಿಲ್ಲ್ಲ ಎಂಬ ದೃಢ ನಿಲುವನ್ನು ತಳೆದೇ ಆರಂಭ ಮಾಡಿದ ಕೆಲಸಗಳು ಯಶಸ್ಸಿನ ಮೆಟ್ಟಿಲಾಯಿತು. ಅದರ ಜೊತೆಗೆ ಯಾರೇ ನಮ್ಮನ್ನು ತೆಗಳಲಿ, ನಮ್ಮ ಬಗ್ಗೆ ನೆಗೆಟಿವ್ ಆಗಿ ಮಾತಾಡಲಿ ಅದಕ್ಕೆ ನಾವು ಮರುತ್ತರ ನೀಡುವುದಿಲ್ಲ, ಕೆಲಸಗಳೇ ಅದಕ್ಕೆಲ್ಲಾ ಉತ್ತರ ನೀಡುತ್ತವೆ ಎಂದು ನಂಬಿದ್ದೇವೆ. ಆದರೆ ಯಾವತ್ತೂ ರಚನಾತ್ಮಕವಾಗಿ ಕೆಲಸ ಮಾಡುತ್ತೇವೆ. ಮೂಲಭೂತ ಅಭಿವೃದ್ಧಿಗಾಗಿ ನಾವೂ ಜವಾಬ್ದಾರರು ಎಂಬುದನ್ನು ಅರಿತಿದ್ದೇವೆ. ಇದರಲ್ಲಿ ಯಾವತ್ತೂ ರಾಜಿ ಇಲ್ಲ. ಈ ಕಾರಣದಿಂದಲೇ ಅತೀ ಕಡಿಮೆ ಅವಧಿಯಲ್ಲಿ ನಿಮ್ಮ ಸಹಕಾರ , ಪ್ರೋತ್ಸಾಹ ನಮಗೆ ಲಭ್ಯವಾಯಿತು ಎಂದು ಅಂದುಕೊಂಡಿದ್ದೇವೆ.
ಅನೇಕ ಆನ್ ಲೈನ್ ಮಾಧ್ಯಮಗಳ ನಡುವೆ ಸುಳ್ಯನ್ಯೂಸ್.ಕಾಂ ವೆಬ್ ಸೈಟ್ ಸುಳ್ಯದಲ್ಲಿ ಹುಟ್ಟಿಕೊಂಡಿತು. ಸುಳ್ಯವನ್ನು ಕೇಂದ್ರೀಕರಿಸಿ ಜಿಲ್ಲೆ, ರಾಜ್ಯ, ರಾಷ್ಟ್ರದ ವಿದ್ಯಮಾನಗಳ ಕಡೆಗೂ ಬೆಳಕು ಹರಿಸಲಾಗಿದೆ. ಪಾಸಿಟಿವ್ ಆಗಿಯೇ ಯೋಚನೆ ಮಾಡುತ್ತಾ, ಅತೀ ಕಡಿಮೆ ಅಪರಾಧ ಸುದ್ದಿಗಳನ್ನು ಪ್ರಕಟ ಮಾಡಿ , ಇದುವರೆಗೆ ರಚನಾತ್ಮಕ ಸುದ್ದಿಗಳ ಕಡೆಗೆ ಗಮನ ನೀಡಿತು. ಆರಂಭದಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇಷ್ಟೂ ದಿನಗಳ ಕಾಲ ಎಲ್ಲಾ ಧರ್ಮ, ಜಾತಿ, ರಾಜಕೀಯ ಪಕ್ಷಗಳನ್ನು ಸಮಾನವಾಗಿ ಕಂಡಿದ್ದೇವೆ, ಸುದ್ದಿ ಮಾಡಿದ್ದೇವೆ. ಹೀಗಾಗಿ ಓದಿದ ಎಲ್ಲರೂ ಎಲ್ಲಾ ರಾಜಕೀಯ, ಧಾರ್ಮಿಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ. ಈ ನಂಬಿಕೆ ಉಳಿಸಿಕೊಳ್ಳುತ್ತೇವೆ. ಇದೇ ರೀತಿ ಮುಂದುವರಿಯುತ್ತದೆ.ನೆಗೆಟಿವ್ ಕಡೆಗೇ ಆದ್ಯತೆ ಇಲ್ಲ, ಒಳ್ಳೆಯ ಕಾರ್ಯಕ್ಕೆ ಬೆಂಬಲ ನೀಡುತ್ತೇವೆ, ವ್ಯಕ್ತಿ ನಿಂದನೆ, ವ್ಯಕ್ತಿಗಳ ವಿರುದ್ಧ ಹೋರಾಟವಿಲ್ಲ, ಪಾಸಿಟಿವ್ ಸುದ್ದಿಗಳನ್ನು ನೀಡುತ್ತಾ ವ್ಯಕ್ತಿ ನಿರ್ಮಾಣದ ಕಡೆಗೆ ಗಮನಹರಿಸುತ್ತೇವೆ.
ಹಾಗಂತ ತಪ್ಪುಗಳೇ ಆಗುವುದಿಲ್ಲ ಎಂದು ಹೇಳುವುದಿಲ್ಲ. ಮನುಷ್ಯ ಸಹಜವಾದ ತಪ್ಪುಗಳು ನಡೆದೀತು. ಅಂತಹದ್ದು ತಿಳಿದರೆ ತಕ್ಷಣವೇ ನಮ್ಮ ಗಮನಕ್ಕೆ ತನ್ನಿ. ಏಕೆಂದರೆ ನಾವೂ ಮನುಷ್ಯರೇ ಆಗಿರುವುದರಿಂದ ಸಹಜವಾದ ತಪ್ಪುಗಳ ನಡೆದೀತು. ಅದನ್ನು ಗಮನಕ್ಕೆ ತನ್ನಿ. ಬದಲಾವಣೆಗೆ, ಸರಿಪಡಿಸುವುದಕ್ಕೆ ಅದೂ ಕಾರಣವಾಗುತ್ತದೆ. ನಿಮ್ಮನ್ನು ಬೆಳೆಸುತ್ತೇವೆ… ನಾವೂ ಬೆಳೆಯುತ್ತೇವೆ. ನಿರಂತರವಾಗಿ ಎಲ್ಲಾ ರೀತಿಯ ಸಹಕಾರ ಇರಲಿ.
ಇದೀಗ ಓದುಗರ ಅನುಕೂಲಕ್ಕಾಗಿ ವೆಬ್ ಸೈಟ್ ನ ಎಲ್ಲಾ ಸುದ್ದಿಗಳು ಸಂಜೆಯ ವೇಳೆಗೆ ಒಂದೇ ಹಾಳೆಯಲ್ಲಿ ಸಿಗುವಂತೆ ಮಾಡುವುದು ನಮ್ಮ ಉದ್ದೇಶ.ಹೀಗಾಗಿ ಈ ಪ್ರತಿಗಳು ಮಾರಾಟಕ್ಕಿಲ್ಲ. ನಮ್ಮ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ. ಜೊತೆಗೆ ಆಸಕ್ತರಿಗೆ ವಾಟ್ಸಪ್ ಮೂಲಕ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತೇವೆ. ಈಗಾಗಲೇ ನಿಮಗೆ ಬರುತ್ತಿರುವ ನಮ್ಮ ನ್ಯೂಸ್ ಲಿಂಕ್ ಮಾದರಿಯಲ್ಲೇ ಇದೂ ಬರುತ್ತದೆ. ಪ್ರತೀ ದಿನ ಸಂಜೆ ಮೊಬೈಲ್ ನಲ್ಲಿ ನೀವು ಓದಬಹುದು, ನಿಮ್ಮ ಸಹಕಾರ ಇಲ್ಲೂ ಯಾಚಿಸುತ್ತೇವೆ. ನಮ್ಮ ಹೊಸ ಪ್ರಯೋಗ ಸಂಪೂರ್ಣ ಯಶಸ್ಸು ಕಂಡ ಬಳಿಕ ಮತ್ತೊಂದು ಹೊಸ ಹೆಜ್ಜೆಯ ಕಡೆಗೂ ಯೋಚನೆ ಮಾಡುತ್ತೇವೆ.
ಯಾವುದೇ ಮಾಧ್ಯಮ ಪ್ರಯತ್ನ ಮುಂದುವರಿಯಬೇಕಾದರೆ ಸಮಾಜದ ಪ್ರೋತ್ಸಾಹ, ಸಹಕಾರ ಬೇಕು. ಹೀಗಾಗಿ ಮುಂದೆ ಜಾಹೀರಾತು ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕು, ಬೆಂಬಲಿಸಬೇಕು ಎಂದು ಇದೇ ಸಂದರ್ಭ ಮನವಿ ಮಾಡುತ್ತೇವೆ.
- ಮಹೇಶ್ ಪುಚ್ಚಪ್ಪಾಡಿ , ಸಂಪಾದಕ, ಸುಳ್ಯನ್ಯೂಸ್.ಕಾಂ