ಪುತ್ತೂರು: ಹಿರಿಯ ಸಾಹಿತಿ, ಯಕ್ಷಗಾನ ಅರ್ಥದಾರಿ ಅಂಬಾತನಯ ಮುದ್ರಾಡಿಯವರು ‘ಬೋಳಂತಕೋಡಿ ಕನ್ನಡ ಪ್ರಶಸ್ತಿ’ಗೆ ಆಯ್ಕೆಯಾಗಿದ್ದು ಜ.21 ರಂದು ಸಂಜೆ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಪುತ್ತೂರಿನ ‘ಬೋಳಂತಕೋಡಿ ಅಭಿಮಾನಿ ಬಳಗ’ವು ಆಯೋಜಿಸುವ ಸಮಾರಂಭದಲ್ಲಿ ಪುತ್ತೂರು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಬೋಳಂತಕೋಡಿ ಈಶ್ವರ ಭಟ್ಟರ ಸಂಸ್ಮರಣೆ ನಡೆಯಲಿದೆ ಎಂದು ಸಂಘಟಕರಾದ ಕೆ.ಆರ್.ಆಚಾರ್ಯ ಹಾಗೂ ಪ್ರಕಾಶ್‍ಕುಮಾರ್ ಕೊಡೆಂಕಿರಿ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎ.ಪಿ.ಮಾಲತಿಯವರು ವಹಿಸಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತಕುಮಾರ್ ಅವರು ಬೋಳಂತಕೋಡಿಯವರ ಸ್ಮೃತಿ ನಮನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತ ಅಂಬಾತನಯರ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪುತ್ತೂರಿನ ರಾಜೇಶ್ ಪವರ್ ಪ್ರೆಸ್ಸಿನ ಎಂ.ಎಸ್.ರಘುನಾಥ ರಾವ್ ಶುಭಾಶಂಸನೆ ಮಾಡಲಿದ್ದಾರೆ.
ಸಮಾರಂಭದ ಬಳಿಕ ಸಂಸ್ಕಾರ ಭಾರತಿ ಪುತ್ತೂರು ಹಾಗೂ ಕಾವ್ಯವಾಹಿನಿ ವಾಟ್ಸಾಪ್ ಬಳಗ ಇವರಿಂದ ‘ಕನ್ನಡ ಗಝಲ್ ಕವಿಗೋಷ್ಠಿ’ ನಡೆಯಲಿದೆ. ಈ ಕವಿಗೋಷ್ಠಿಯು ಗಣೇಶ ಪ್ರಸಾದ್ ಪಾಂಡೇಲು ಅವರ ನಿರ್ದೇಶನದಲ್ಲಿ ಜರುಗಲಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು – ಡಾ.ಸುರೇಶ್ ನೆಗಳಗುಳಿ, ಶ್ಯಾಮಪ್ರಸಾದ್ ಭಟ್ ಕಾರ್ಕಳ, ಗೋಪಾಲಕೃಷ್ಣ ಭಟ್ ಮನವಳಿಕೆ-ಪೆರುವಾಜೆ, ಪದ್ಮಾ ಆಚಾರ್ ಪುತ್ತೂರು, ಭಾರತೀ ಕೊಲ್ಲರಮಜಲು, ಗೀತಾ ರಾವ್ ಕೆದಿಲ.
ಬೋಳಂತಕೋಡಿ ಕನ್ನಡ ಪ್ರಶಸ್ತಿಯನ್ನು ಈ ಹಿಂದಿನ ವರುಷಗಳಲ್ಲಿ ಪಳಕಳ ಸೀತಾರಾಮ ಭಟ್, ಸಿದ್ಧಮೂಲೆ ಶಂಕರನಾರಾಯಣ ಭಟ್ (ದಿ.), ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ(ದಿ.) ಹರೇಕಳ ಹಾಜಬ್ಬ, ಕುಂಞಹಿತ್ಲು ಸೂರ್ಯನಾರಾಯಣ ಭಟ್, ಕವಯಿತ್ರಿ ನಿರ್ಮಲಾ ಸುರತ್ಕಲ್, ಕು.ಗೋ.ಉಡುಪಿ ಮತ್ತು ಬಿ.ಶ್ರೀನಿವಾಸ ರಾವ್-ಸಾವಿತ್ರೀ ಎಸ್.ರಾವ್ ಇವರಿಗೆ ಪ್ರದಾನಿಸಲಾಗಿದೆ.
ಪುಸ್ತಕ ಹಬ್ಬ :
ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜನವರಿ 18ರಿಂದ 21ರ ತನಕ ದಿನಪೂರ್ತಿ ‘ಪುಸ್ತಕ ಹಬ್ಬ’ ನಡೆಯುತ್ತಿದೆ. ಪುಸ್ತಕ ಪ್ರದರ್ಶನ-ಮಾರಾಟ ವ್ಯವಸ್ಥೆಯಿದೆ. ಪುಸ್ತಕಾಸಕ್ತರಿಗಿದು ಅಪೂರ್ವ ಅವಕಾಶ.
Advertisement
ಪ್ರಶಸ್ತಿ ಪುರಸ್ಕೃತರ ಪರಿಚಯ :
ಅಂಬಾತನಯ ಮುದ್ರಾಡಿಯವರು ಓರ್ವ ಅಧ್ಯಯನಶೀಲ ಸಾಹಿತಿ. ಕವಿ, ನಾಟಕಕಾರ, ವಚನಕಾರ, ಯಕ್ಷಗಾನ ಪ್ರಸಂಗಕರ್ತ, ಅರ್ಥದಾರಿ, ಹರಿದಾಸ, ವಾಗ್ಮಿ, ಚಿಂತಕ, ಅಂಕಣಕಾರ, ಶೈಕ್ಷಣಿಕ ವಲಯದ ಸಂಪನ್ಮೂಲ ವ್ಯಕ್ತಿ… ಹೀಗೆ ಸಾಹಿತ್ಯದ ಅನ್ಯಾನ್ಯ ವಿಭಾಗಗಳಲ್ಲಿ ಗುರುತರ ಕಾಯಕ. ಶಿಕ್ಷಕ ಸಂಘಟನೆಗಳ ಪದಾಧಿಕಾರಿಯಾಗಿ ಸೇವೆ. ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯ. ಅಧ್ಯಾಪನದ ಜತೆಯಲ್ಲಿ ಸಾಹಿತ್ಯ ಸಾಧನೆ. ಇಪ್ಪತ್ತೆಂಟು ಪ್ರಕಟಿತ ಕೃತಿಗಳು. ಅಪ್ರಕಟಿತ ಸಾಹಿತ್ಯ, ಯಕ್ಷಗಾನ ಕೃತಿಗಳು ಹಲವು. ನಲವತ್ತು ವರುಷ ಹರಿದಾಸರಾಗಿ ಸೇವೆ. ಧಾರ್ಮಿಕ ಉಪನ್ಯಾಸಗಳು. ಸಾಹಿತ್ಯ ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ. ವಿವಿಧ ಅಷ್ಟಾವಧಾನಗಳಲ್ಲಿ ಪೃಚ್ಛಕನಾಗಿ ಭಾಗಿ. ಇವರ ಕುರಿತು ‘ಸುಮನಸ’ ಅಭಿನಂದನಾ ಕೃತಿ ಪ್ರಕಟ.