ಸುಳ್ಯ:ಸುಳ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನ ನಿರ್ಮಾಣ ವಿಳಂಬವಗುತ್ತಿರವ ಬಗ್ಗೆ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಗರಂ ಆಗಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ನ್ನು ತರಾಟೆಗೆತ್ತಿಕೊಂಡ ಘಟನೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕುಂದು ಕೊರತೆ ಸಭೆಯಲ್ಲಿ ನಡಯಿತು.
ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ವಿಳಂಬ ತೀವ್ರ ಚರ್ಚೆಗೆ ಕಾರಣವಾಯಿತು. ಅಂಬೇಡ್ಕರ್ ಭವನ ಕೂಡಲೇ ಪೂರ್ತಿ ಮಾಡಬೇಕು. ಮುಂದಿನ ಅಂಬೇಡ್ಕರ್ ಜಯಂತಿ ಹೊಸ ಅಂಬೇಡ್ಕರ್ ಭವನದಲ್ಲಿ ನಡೆಯಬೇಕು ಎಂದರು. ಈ ಸಂದರ್ಭದಲ್ಲಿ ಕಾಮಗಾರಿಗೆ ಬಿಡುಗಡೆಯಾದ 75 ಲಕ್ಷ ಅನುದಾನದಲ್ಲಿ ಸಮರ್ಪಕ ಕೆಲಸ ಆಗಿಲ್ಲ ಇದರಲ್ಲಿ ಗೋಲ್ ಮಾಲ್ ನಡೆದಿದೆ ಈ ಕುರಿತು ತನಿಖೆ ನಡೆಸಬೇಕು ಎಂದು ಆನಂದ ಬೆಳ್ಳಾರೆ ಮತ್ತಿತರರು ಹೇಳಿದರು. ಈ ಕುರಿತು ತಹಶೀಲ್ದಾರ್ ತನಿಖೆ ನಡೆಸಬೇಕು ಎಂದು ಸಭೆಯಲ್ಲಿ ಒಕ್ಕೊರಲ ಆಗ್ರಹ ವ್ಕಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಈ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದರು. ಅಂಬೇಡ್ಕರ್ ಭವನದ ದಾಖಲಾತಿ, ಅನುದಾನ ಬಿಡುಗಡೆ ಮತ್ತು ಕಾಮಗಾರಿ ನಡೆಸಿದ ವಿವರದ ಕುರಿತು ವಿಸ್ತೃತವಾದ ವರದಿಯನ್ನು ನೀಡುವಂತೆ ನಿರ್ಮಿತಿ ಕೇಂದ್ರದ ಇಂಜಿನಿಯರ್ ರಿಗೆ ಆದೇಶ ನೀಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಭವಾನಿಶಂಕರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಲಕ್ಷ್ಮೀದೇವಿ ಉಪಸ್ಥಿತರಿದ್ದರು.