ಮಡಿಕೇರಿ : ಕರ್ನಾಟಕದ ಮೂಲಕ ಆಂಧ್ರಪ್ರದೇಶಕ್ಕೆ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಕಾಸರಗೋಡು ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಸುಮಾರು 9 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚಂಗಲ ಗ್ರಾಮದ ದಿ. ಮಹಮ್ಮದ್ ಅವರ ಪುತ್ರರಾದ ಷರೀಫ್ ಹಾಗೂ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ ಒಟ್ಟು 10 ಚೀಲದಲ್ಲಿದ್ದ 175 ಕೆಜಿ ಶ್ರೀಗಂಧ ತುಂಡುಗಳು, ಎರಡು ಚಿಕ್ಕ ಡಿಜಿಟಲ್ ಸ್ಕೇಲ್ ಹಾಗೂ ಆಂಧ್ರಪ್ರದೇಶ ರಾಜ್ಯದ ನೋಂದಣಿ ಹೊಂದಿರುವ ಮಹೀಂದ್ರ ವೆರಿಟೊ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾಲಿನ ಒಟ್ಟು ಮೌಲ್ಯ ಸುಮಾರು 9 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಆರೋಪಿಗಳು ಸ್ವಲ್ಪಸ್ವಲ್ಪವೇ ಶ್ರೀಗಂಧ ತುಂಡುಗಳನ್ನು ಕಲೆಹಾಕಿ ಆಂಧ್ರಪ್ರದೇಶದ ಶ್ರೀಗಂಧದ ಎಣ್ಣೆ ತೆಗೆಯುವ ಫ್ಯಾಕ್ಟರಿಗೆ ಮಾರಾಟ ಮಾಡುವುದನ್ನು ರೂಢಿಗತ ಮಾಡಿಕೊಂಡಿದ್ದರೆಂದು ವಿಚಾರಣೆ ಸಂದರ್ಭ ಬೆಳಕಿಗೆ ಬಂದಿದೆ. ವಾಹನ ಪರಿಶೀಲನೆ ವೇಳೆ ಆರೋಪಿಗಳು ಕಾರಿನ ಹಿಂಬದಿಯ ಸೀಟಿನ ಹಿಂದೆ ಯಾರಿಗೂ ಕಾಣದ ರೀತಿಯಲ್ಲಿ ಶ್ರೀಗಂಧ ತುಂಡುಗಳನ್ನು ಶೇಖರಣೆ ಮಾಡುವ ಒಂದು ಡಬ್ಬವನ್ನು ನಿರ್ಮಿಸಿದ್ದು ಕಂಡು ಬಂದಿರುತ್ತದೆ.
ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಾ. ಸುಮನ್ ಡಿಪಿ ಹಾಗೂ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಪಿ.ಕೆ. ಮುರಳೀಧರ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್ ಪೆಕ್ಟರ್ ಎನ್ ಮಹೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಹಮೀದ್, ಯೋಗೇಶ್ ಕುಮಾರ್, ವೆಂಕಟೇಶ್, ಅನಿಲ್ ಕುಮಾರ್, ವಸಂತ, ಕುಶಾಲನಗರ ವೃತ್ತದ ಅಪರಾಧ ದಳದ ಸಿಬ್ಬಂದಿಗಳಾದ ಜೋಸೆಫ್, ಪ್ರಕಾಶ್, ಸಜಿ, ಸಂದೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.