ಪುತ್ತೂರು: ಅಖಿಲ ಭಾರತ ಗೇರು ಬೆಳೆಗಾರರ ಸಂಘ ಇದೀಗ ಅಸ್ತಿತ್ವಕ್ಕೆ ಬಂದಿದೆ. ವಿವಿಧೆಡೆಗಳಿಂದ ಬಂದ ಕೃಷಿಕರು ಹಾಗೂ ಕ್ಯಾಂಪ್ಕೋ ಅಧ್ಯಕ್ಷರಾದ ಸತೀಶ್ಚಂದ್ರ ಅವರ ಸಮ್ಮುಖದಲ್ಲಿ ಅಖಿಲ ಭಾರತ ಗೇರು ಬೆಳೆಗಾರರ ಸಂಘ ಅಸ್ತಿತ್ವಕ್ಕೆ ಬಂದಿದೆ. ಪುತ್ತೂರಿನಲ್ಲಿ ರಾಷ್ಟ್ರಮಟ್ಟದ ಗೇರು ಕೃಷಿಕರ ಸಂಘಟನೆ ಆರಂಭವಾಗಿರುವುದು ಇದೀಗ ಬೆಳೆಗಾರರಿಗೆ ಉಪಯುಕ್ತವಾಗಿದೆ.
ರಾಷ್ಟ್ರದ ಗೇರು ಕೃಷಿಕರ ನಡುವೆ ಸಂವಹನ ಹೆಚ್ಚಿಸುವುದು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಟ್ಟದಲ್ಲಿ ಗೇರು ಬೆಳೆಗಾರರಿಗೆ ಧ್ವನಿ ನೀಡುವುದು, ವಿವಿಧ ಸಂಘ ಸಂಸ್ಥೆ ಹಾಗೂ ಇಲಾಖೆಗಳ ನಡುವಿನ ಸಂವಹನಕ್ಕೆ ಅನುವಾಗುವುದು, ವೈಜ್ಞಾನಿಕ ಗೇರು ಕೃಷಿ ಹಾಗೂ ಸಂಸ್ಕರಣಾ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಗೇರಿನಲ್ಲಿ ರೈತ ಉತ್ಪಾದಕ ಕಂಪನಿಗಳನ್ನು ಉತ್ತೇಜಿಸುವುದು, ಗೇರಿನ ಮಾರುಕಟ್ಟೆಗೆ ಉತ್ತೇಜನ ಹಾಗೂ ಗೇರು ಬೆಳೆಯ ಬಗ್ಗೆ ಮೇಳಗಳನ್ನು ಹಮ್ಮಿಕೊಳ್ಳುವುದು ಈ ಸಂಘಟನೆಯ ಮುಖ್ಯ ಉದ್ದೇಶಗಳಾಗಿವೆ.
ಸಂಘಟನೆಯ ಅಧ್ಯಕ್ಷರಾಗಿ ಪುತ್ತೂರಿನ ಪ್ರಗತಿಪರ ಗೇರು ಬೆಳೆಗಾರ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನನ್ಯ ಅಚ್ಯುತ ಮೂಡತ್ತಾಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಾಸರಗೋಡು ಪ್ರ್ಯಾಂತ್ಯದ ಗೇರು ಬೆಳೆಗಾರ ಶಂಕರನಾರಾಯಣ ಭಟ್ ಖಂಡಿಗೆ, ಕಾರ್ಯದರ್ಶಿಯಾಗಿ ಯುವ ಮುಂದಾಳು ದಕ್ಷಿಣ ಕನ್ನಡ ಜಿಲ್ಲೆಯ ಪುಣಚದ ದೇವಿಪ್ರಸಾದ್ ಕಲ್ಲಾಜೆ, ಜಂಟಿ ಕಾರ್ಯದರ್ಶಿಯಾಗಿ ಮಹಾರಾಷ್ಟ್ರದ ವಿಲಾಸ್ ಅನಂತರಾವ್ ಠಾಕೂರ್, ಖಜಾಂಚಿಯಾಗಿ ದಕ್ಷಿಣ ಕನ್ನಡದ ಪ್ರಗತಿಪರ ಗೇರು ಕೃಷಿಕ ಸುಭಾಸ್ ರೈ ಕಡಮಜಲು ಆಯ್ಕೆಯಾಗಿದ್ದಾರೆ.
ಸಂಘಟನೆಯ ಟ್ರಸ್ಟಿಗಳನ್ನಾಗಿ ಬಂಟ್ವಾಳದ ಶಾಸಕ ಹಾಗೂ ಕೃಷಿಕರಾದ ಉಳಿಪಾಡಿಗುತ್ತು ರಾಜೇಶ್ ನಾಯಕ್, ಗೇರು ಬೆಳೆಗಾರರಾದ ಕೇರಳದ ವಾಸವನ್, ಆಂಧ್ರಪ್ರದೇಶದ ಸೊಮೇಶ್ವರ ರಾವ್, ಗದಗದ ಗುರುನಾಥ ಓದುಗೌಡರ್, ದಕ್ಷಿಣ ಕನ್ನಡದ ಕಾಶ್ಮೀರ್ ಕುಟಿನೋ, ಉಡುಪಿಯ ಚಂದ್ರಶೇಖರ ಉಡುಪ, ಈಶ್ವರ ಮಂಗಲದ ನಟೇಶ್ ಮೂಡಾಯೂರು, ಬೆಳ್ತಂಗಡಿಯ ಸುಕನ್ಯಾ, ಸಾಗರದ ಉಳ್ಳೂರು ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗೇರು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಎಂ.ಜಿ. ನಾಯಕ್ ಮತ್ತು ಹಿರಿಯ ವಿಜ್ಞಾನಿ ಡಾ. ಮೋಹನ್ ಉಪಸ್ಥಿತರಿದ್ದರು.