ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಕೆ ಹಳದಿ ಎಲೆ ಬಾದಿತ ಪ್ರದೇಶಗಳ ವ್ಯಾಪ್ತಿ ಹಾಗು ತೀವ್ರತೆಗಳ ಅಂಕಿ ಅಂಶಗಳನ್ನು ನಿಖರವಾಗಿ ತಿಳಿಯಲು ಸಮಗ್ರ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು ಡಿ. 30 ರಿಂದ ಸಮೀಕ್ಷಾ ಕಾರ್ಯ ಆರಂಭಗೊಳ್ಳಲಿದೆ. ಸಮೀಕ್ಷಾ ತಂಡ ರಚಿಸಲಾಗಿದ್ದು ತಂಡಕ್ಕೆ ತರಬೇತಿ ನೀಡಲಾಗಿದೆ.
ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಿಟ್ಲ ಸಿಪಿಸಿಆರ್‍ಐನ ವಿಜ್ಞಾನಿಗಳು ತಂಡಕ್ಕೆ ಸಮೀಕ್ಷೆ ನಡೆಸುವ ಬಗ್ಗೆ ತರಬೇತಿ ನೀಡಿದರು. ಸುಳ್ಯ ತಾಲೂಕಿನ 10 ಮತ್ತು ಪುತ್ತೂರು ತಾಲೂಕಿನ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಯಲಿದೆ. ಕಂದಾಯ, ಪಂಚಾಯತ್ ರಾಜ್ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳನ್ನೊಳಗೊಂಡ ಸಮೀಕ್ಷಾ ತಂಡವನ್ನು ರಚಿಸಲಾಗಿದೆ. ಒಟ್ಟು 30 ಮಂದಿಯನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ.
ಸಮೀಕ್ಷೆ ಹೇಗೆ: ಹಳದಿ ಎಲೆ ಪೀಡಿತ ಗ್ರಾಮದ ರೈತರ ಅಡಕೆ ತೋಟಗಳಿಗೆ ತಂಡ ಭೇಟಿ ನೀಡಿ ಸಮಗ್ರ ಸಮೀಕ್ಷೆ ನಡೆಸಲಿದೆ. ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ತಾಂತ್ರಿಕ ಅಂಶಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಲು ಸೂಚಿಸಲಾಗಿದೆ. ಅಡಕೆ ತೋಟದ ವಿಸ್ತೀರ್ಣ, ನೀರಾವರಿ ವಿಧಾನ, ತೋಟದ ನಿರ್ವಹಣೆ, ಒಟ್ಟು ಅಡಕೆ ತೋಟದಲ್ಲಿ ಫಸಲು ನೀಡುವ ಮತ್ತು ಫಸಲು ನೀಡದ ಮರಗಳು, ವಾರ್ಷಿಕ ಇಳುವರಿ, ಹಳದಿ ರೋಗ ಪೀಡಿತ ಮರಗಳ ಸಂಖ್ಯೆ, ಹಳದಿ ರೋಗದ ತೀವ್ರತೆಯ ಶೇಖಡಾವಾರು, ಹಳದಿ ಎಲೆ ಪೀಡಿತ ತೋಟದಲ್ಲಿ ರೈತರು ಮುಂದೆ ಬೆಳೆಯಲು ಇಚ್ಚಿಸುವ ಬದಲಿ ಕೃಷಿ ಮತ್ತಿತರ ವಿವರಗಳನ್ನು ತಂಡ ಸಂಗ್ರಹಿಸಲಿದೆ. ಸಮೀಕ್ಷೆ ನಡೆಸಿ ನಿಗದಿತ ನಮೂನೆಯಲ್ಲಿ ಸಮೀಕ್ಷಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಸಮೀಕ್ಷೆಯ ವಿವರಗಳನ್ನು ಕ್ರೂಡಕರಿಸಿ ಜಿಲ್ಲೆಯಲ್ಲಿ ಅಡಕೆ ಹಳದಿ ಎಲೆ ರೋಗ ಬಾದಿತ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆಯ ಬಗ್ಗೆ ನಿಖರ ಅಂಕಿ ಅಂಶಗಳನ್ನು ಪಡೆಯಲಾಗುವುದು. ಈ ಸಮೀಕ್ಷಾ ವರದಿಯ ಆಧಾರದಲ್ಲಿ ಹಳದಿ ಎಲೆ ರೋಗ ಪೀಡಿತ ಪ್ರದೇಶದ ರೈತರ ಸಮಸ್ಯೆ ಪರಿಹಾರಕ್ಕೆ ವಿಸ್ತೃತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.
ಅಡಕೆ ಹಳದಿ ರೋಗದಿಂದ ತತ್ತರಿಸಿದ ರೈತರಿಗೆ ಪರಿಹಾರ ದೊರಕಿಸಬೇಕು ಎಂಬ ನಿಟ್ಟಿನಲ್ಲಿ ನವೆಂಬರ್ ತಿಂಗಳಲ್ಲಿ ಅರಂತೋಡಿನಲ್ಲಿ ಶಾಸಕ ಎಸ್.ಅಂಗಾರ ಉಪಸ್ಥಿತಿಯಲ್ಲಿ ದ.ಕ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಸೆಲ್ವಮಣಿ ನೇತೃತ್ವದಲ್ಲಿ ಹಳದಿ ಎಲೆ ರೋಗ ಬಾದಿತ ಪ್ರದೇಶಗಳ ರೈತರ ಸಭೆ ನಡೆದಿತ್ತು. ರೈತರಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಹಳದಿ ರೋಗ ಪೀಡಿತ ಪ್ರದೇಶಗಳ ಸಮಗ್ರ ಸಮೀಕ್ಷೆ ನಡೆಸಲು ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಹಳದಿ ಎಲೆ ರೋಗದಿಂದ ತತ್ತರಿಸಿದ ಸುಳ್ಯ ಮತ್ತು ಪುತ್ತೂರು ತಾಲೂಕಿನ ಆಯ್ದ ಗ್ರಾಮಗಳ ಸಮೀಕ್ಷೆ ಕೈಗೊಳ್ಳಲಾಗುತಿದೆ. 15 ದಿನದಲ್ಲಿ ಸಮೀಕ್ಷೆ ಮುಕ್ತಾಯಗೊಳಿಸಿ ಒಂದು ತಿಂಗಳ ಒಳಗೆ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಸಮೀಕ್ಷಾ ವರದಿಯನ್ನು ನಿಗದಿತ ನಮೂನೆಯಲ್ಲಿ ಫಲಾನುಭವಿವಾರು ಸಲ್ಲಿಸಲು ತಿಳಿಸಲಾಗಿದೆ.
ಯಾವ ಗ್ರಾಮದಲ್ಲಿ ಸಮೀಕ್ಷೆ: ಅಡಕೆ ಹಳದಿ ಎಲೆ ರೋಗಕ್ಕೆ ತುತ್ತಾದ ಸುಳ್ಯ ಮತ್ತು ಪುತ್ತೂರು ತಾಲೂಕಿನ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಸುಳ್ಯ ತಾಲೂಕಿನ ಹತ್ತು ಮತ್ತು ಪುತ್ತೂರು ತಾಲೂಕಿನ ಒಂದು ಗ್ರಾಮದಲ್ಲಿ ಸಮೀಕ್ಷಾ ಕಾರ್ಯ ನಡೆಯಲಿದೆ. ಸುಳ್ಯ ತಾಲೂಕಿನ ಸಂಪಾಜೆ, ಅತಂತೋಡು(ಅರಂತೋಡು ಮತ್ತು ತೊಡಿಕಾನ), ಆಲೆಟ್ಟಿ, ಕೊಡಿಯಾಲ, ಉಬರಡ್ಕ ಮಿತ್ತೂರು, ಮರ್ಕಂಜ, ಮಡಪ್ಪಾಡಿ, ಕೊಲ್ಲಮೊಗ್ರ(ಕೊಲ್ಲಮೊಗ್ರ ಮತ್ತು ಕಲ್ಮಕ್ಕಾರು), ನೆಲ್ಲೂರು ಕೆಮ್ರಾಜೆ, ಹರಿಹರ ಪಳ್ಳತ್ತಡ್ಕ ಮತ್ತು ಪುತ್ತೂರು ತಾಲೂಕಿನ ಕಾಣಿಯೂರು ಗ್ರಾಮದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ.
ಸಮೀಕ್ಷಾ ತಂಡಕ್ಕೆ ತರಬೇತಿ: ಅಡಕೆ ಹಳದಿ ಎಲೆ ರೋಗ ಪೀಡಿತ ಪ್ರದೇಶದ ಸಮೀಕ್ಷೆಗೆ ನೇಮಕವಾದ ತಂಡಕ್ಕೆ ತರಬೇತಿ ಕಾರ್ಯಕ್ರಮ ಶುಕ್ರವಾರ ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಹೆಚ್.ಆರ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮೀಕ್ಷೆ ನಡೆಸಬೇಕಾದ ವಿಧಾನದ ಬಗ್ಗೆ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಪ್ರವೀಣ್ ಮತ್ತು ಅಡಕೆ ಹಳದಿ ಎಲೆ ರೋಗದ ಬಗ್ಗೆ, ರೋಗದ ಲಕ್ಷಣಗಳು ಮತ್ತು ಅಡಕೆ ಹಳದಿ ಎಲೆ ರೋಗ ಗುರುತಿಸುವ ಬಗ್ಗೆ ವಿಟ್ಲ ಸಿಪಿಸಿಆರ್‍ಐನ ವಿಜ್ಞಾನಿ ವಿನಾಯಕ ಹೆಗಡೆ ತರಬೇತಿ ನೀಡಿದರು. ಸುಳ್ಯ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ, ಸುಳ್ಯ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸುಹಾನ, ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಅರಬನ ಪೂಜೇರಿ, ದರ್ಶನ್ ಉಪಸ್ಥಿತರಿದ್ದರು.