ಕಳೆದ ಬೇಸಿಗೆ ಅಡಿಕೆ ಬೆಳೆಗಾರರಿಗೆ ಒಂದು ಸರಿಯಾದ ಪಾಠ ಕಲಿಸಿದೆ. ಕರಾವಳಿ ಜಿಲ್ಲೆಗಳ ಯಾವ ಕಡೆ ಅಡಿಕೆ ತೋಟವಿದೆಯೊ ಅಲ್ಲೆಲ್ಲ ಹೋದರೆ ಕಾಣುವುದು ಬೇಸಿಗೆಯ ಬಿಸಿಲ ತಾಪಕ್ಕೆ ಸಿಲುಕಿ ನಲುಗಿದ ಅಡಿಕೆ ಮರಗಳು. ಕೆಲವೊಂದು ತೋಟಗಳು ಅಳಿದುಳಿದ ಮರಗಳನ್ನು ಕಡಿದು ಮತ್ತೆ ಹೊಸ ತೋಟ ಎಬ್ಬಿಸುವಷ್ಟು ನಾಶ ಹೊಂದಿವೆ. ಇನ್ನು ಹಲವು ತೋಟಗಳ ಅಡಿಕೆ ಮರಗಳಲ್ಲಿ ಬಹುಪಾಲು ಮರಗಳು ಸೋಗೆಗಳನ್ನು ಬಾಗಿಸಿ ನಿಂತಿದ್ದು ಅವುಗಳಲ್ಲಿ ಫಸಲು ಬರಬೇಕಾದರೆ ಇನ್ನು ಮೂರು ನಾಲ್ಕು ವರ್ಷ ಅವುಗಳ ಆರೈಕೆ ಮಾಡಬೇಕು. ಅದರ ಎಡೆಯಲ್ಲಿ ಮತ್ತೆ ಬರದ ಛಾಯೆ ಬಂದರೆ ಪರಿಸ್ಥಿತಿ ಶೋಚನೀಯ.
ಇವುಗಳನ್ನೆಲ್ಲ ಗಮನಿಸುವಾಗ ನಮ್ಮ ಕರಾವಳಿಯಲ್ಲಿ ಪೂರ್ವಜರಿಂದ ಬಳುವಳಿಯಾಗಿ ಬಂದ ಅಡಿಕೆ ಕೃಷಿ ಇನ್ನು ಕಷ್ಟವಾಗಬಹುದೇನೊ ಅಂತ ಒಮ್ಮೊಮ್ಮೆ ಅನ್ನಿಸಿಸುವುದುಂಟು. ಯಾಕೆಂದರೆ ನಲುವತ್ತು ಡಿಗ್ರಿಯಷ್ಟು ಬಿಸಿಯ ಬಿಸಿಲಿನ ತಾಪಮಾನದಿಂದ ಹಿಂಗಾರಗಳು ಒಣಗಿ ನಳ್ಳಿಗಳು ಉದುರಿ ಸಾಕಿ ಸಲಹಿದ ಕೃಷಿಕನಿಗೆ ಸಿಗುವುದು ಕಷ್ಟಪರಂಪರೆ ಮಾತ್ರ. ಮೊದಲ ಹಿಂಗಾರಗಳು ಮತ್ತು ಕೊನೆಯ ಹಿಂಗಾರಗಳು ಒಣಗಿ ಹಾಳಾದ ಮೇಲೆ ಉಳಿಯುವ ಒಂದೆರಡು ಹಿಂಗಾರಗಳಲ್ಲಿ ಅಡಿಕೆಯಾಗುವ ನಳ್ಳಿಗಳು ಅತ್ಯಲ್ಪ. ಇಡೀ ವರ್ಷ ಬೆವರು ಸುರಿಸಿ, ಹಣ ಖರ್ಚು ಮಾಡಿ ಸುಸ್ತಾದವನಿಗೆ ಸಿಗುವುದು ಆತಂಕಗಳ ಹೊರೆ.
ನಾವು ಈ ಅಡಿಕೆಗೆ ಬೇಕಾಗಿ ಏನೆಲ್ಲ ಕಷ್ಟ ಬಂದೆವು. ಕೈಕೆಸರಾದರೆ ಬಾಯಿ ಮೊಸರಾಗುವ ಭೂಮಿಗೆ ನೀರಿಂಗಿಸುವ ಬತ್ತದ ಗದ್ದೆಗಳಲ್ಲಿ ಅಡಿಕೆ ಗಿಡ ನೆಟ್ಟು ತೋಟ ಎಬ್ಬಿಸಿದೆವು. ಉಜಿರು ಕಣಿ ಮಾಡಿ ನೀರನ್ನೆಲ್ಲ ಹೊರಬಿಟ್ಟೆವು. ಸರಕಾರ ವಿದ್ಯುತ್ ಉಚಿತ ನೀಡುತ್ತದೆ ಎಂದು ನಾವೇ ಹಣ ಖರ್ಚು ಮಾಡಿ ಕೊರೆಯಿಸಿದ ನಮ್ಮದೇ ಕೊಳವೆಬಾವಿಯಿಂದ ತೋಟಕ್ಕೆ ಬೇಕಾಗಲಿ ಬೇಡವಾಗಲಿ ನಿರಂತರ ನೀರೆತ್ತಿ ತೋಟ ತೇವವಾಗಿಸಿದೆವು. ಹತ್ತಿರದ ಮನೆಯವನ ತೋಟದ ವಿಸ್ತರಣೆ ಗುಡ್ಡೆಗೂ ಹೋದಾಗ ಅವನಿಗಿಂತ ನಾವು ಕಡಿಮೆಯಾಗಬಾರದೆಂದು ಹಿಟಾಚಿ ತರಿಸಿ ನಾವೂ ಅಡಿಕೆ ತೋಟ ಒಂದಷ್ಟು ಹೆಚ್ಚು ವಿಸ್ತಾರಕ್ಕೆ ಮಾಡಿಸಿದೆವು. ಇಷ್ಟೊಂದು ತೋಟಕ್ಕೆ ನೀರು ಸಾಲದು. ಎಲ್ಲಿಯಾದರೂ ಒಂದು ಕೊಳವೆಬಾವಿಯ ಪಂಪು ಹಾಳಾದರೆ ವಾರಪೂರ್ತಿ ನೀರಿಲ್ಲದಾದೀತೆಂದು ಮತ್ತೊಂದೆರಡು ಕೊಳವೆಬಾವಿ ಕೊರೆಯಿಸಿದೆವು. ಅಂತರ್ಜಲಕ್ಕೆ ನೀರುಣಿಸದೆ ಎಲ್ಲ ಅಂತರ್ಜಲಕ್ಕೆ ಕನ್ನ ಹೊಡೆಯುವ ಕೈಂಕರ್ಯ ಮಾಡಿ ನೆಲದೊಡಲಿನ ನೀರೆಲ್ಲ ಆಪೋಶನಗೈದೆವು. ಈಗ ಪಶ್ಚಾತ್ತಾಪ ಪಡುವ ಕಾಲ ಬಂದಿದೆ. ಕರಾವಳಿಯ ಅಡಿಕೆ ಕೃಷಿಕರಿಗೆ ಮೊದಲ ಬಾರಿಗೆ ನೀರಕೊರತೆಯ ಬಿಸಿತಟ್ಟಿದೆ. ಸ್ವಯಂಕೃತಾಪರಾಧದಿಂದ ಪರಿತಪಿಸುವ ಕರ್ಮ ಬಂದಿದೆ. ಇಷ್ಟೆಲ್ಲ ಆಗಿಯೂ ತೋಟ ವಿಸ್ತರಣೆಯ ಹುಚ್ಚು ಕಡಿಮೆಯೇನೂ ಆಗಿಲ್ಲ. ಲೀಸಿಗೆ ಕೊಟ್ಟ ರಬ್ಬರ್ ಮರಗಳನ್ನು ಕಡಿದು ಎರಡೂವರೆ ಸಾವಿರ ಶತಮಂಗಳ ಅಡಿಕೆ ಗಿಡಕ್ಕಾಗಿ ಮೊನ್ನೆ ಒಬ್ಬ ಕೃಷಿಕರು ವಿಟ್ಲ ಸಿಪಿಸಿಆರ್‍ಐಗೆ ದುಂಬಾಲು ಬೀಳುತ್ತಿದ್ದರು!
ನಾವು ಕೃಷಿಗಾಗಿ ನೀರನ್ನು ಹುಡುಕುತ್ತೇವೆ. ಆದರೆ ಮಳೆಗಾಲದಲ್ಲಿ ನೀರಿನ ಮರುಪೂರಣಕ್ಕೆ ಗಮನ ಕೊಡುವುದಿಲ್ಲ. ಬಾವಿಗಳು, ಕೊಳಗಳು, ಮದಕಗಳು ನಮ್ಮ ಸುತ್ತ ಮುತ್ತ ಎಷ್ಟಿಲ್ಲ? ಅವುಗಳ ಬಗ್ಗೆ ಗಮನ ಕೊಟ್ಟು ಹೂಳೆತ್ತಿ ಮಳೆಗಾಲದಲ್ಲಿ ನೀರು ತುಂಬುವಂತೆ ಮಾಡಿದರೆ ನಮ್ಮ ನೆಲದ ಅಂತರ್ಜಲ ಮಟ್ಟ ಉತ್ತಮಗೊಳ್ಳದೆ? ನಮ್ಮ ನಾಳೆಗಳು ಒಳ್ಳೆಯದಾಗಲು ನಾವಿಂದು ಕಷ್ಟಗಳಿಗೆ ಹೆಗಲು ಕೊಡುವುದು ಅನಿವಾರ್ಯ.
ನಮಗೆ ಈ ಕಷ್ಟಪರಂಪರೆಯ ನಡುವೆ ಅಡಿಕೆ ಕೃಷಿ ಮಾತ್ರ ಕಣ್ಣಿಗೆ ಕಾಣುವುದೊ ಹೇಗೆ? ಆಹಾರ ಬೆಳೆಗಳಾದ ತೆಂಗು ಇದೆ. ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ ತನ್ನ ಭವಿಷ್ಯದ ಯೊಜನೆಯಲ್ಲಿ ಬೃಹತ್ ತೆಂಗಿನಕಾಯಿ ಫ್ಯಾಕ್ಟರಿಯ ಯೋಚನೆ ಮಾಡುತ್ತಿದೆ. ಅದಕ್ಕೆ ಕೃಷಿಕರೂ ಈಗಲೇ ತಯಾರಾದರೆ ಒಳಿತಲ್ಲವೆ? ಯಾವತ್ತೂ ಸಮಗ್ರ ಕೃಷಿಗೆ ಒತ್ತು ಕೊಡುವುದು ಎಲ್ಲ ರೀತಿಯಿಂದಲೂ ಕ್ಷೇಮ. ಹಣ್ಣಿನ ಕೃಷಿಯಲ್ಲಿ ಅಪಾರ ಸಾಧ್ಯತೆಗಳಿವೆ. ಒಬ್ಬ ಮಾಡಿದ ಹಣ್ಣಿನ ಕೃಷಿಯನ್ನೇ ನಾವೂ ಮಾಡುವುದಲ್ಲ. ಮಾರುಕಟ್ಟೆಯಲ್ಲಿ ಕೊರತೆಯಿರುವ ಹಣ್ಣುಗಳನ್ನು ನಾವು ಬೆಳೆಯಲು ಪ್ರಯತ್ನಿಸುವುದು ಜಾಣತನ. ರಂಬುಟಾನ್ ಕೃಷಿಯನ್ನು ಹಲವರು ಬೆಳೆದು ಯಶಸ್ವಿಯಾದ ಉದಾಹರಣೆಗಳಿವೆ. ತೆಂಗಿನ ತೋಟದಲ್ಲೂ ರಂಬುಟಾನ್ ಬೆಳೆದು ಸೈ ಅನ್ನಿಸಿಕೊಂಡ ಉದಾಹರಣೆಗಳು ಸಿಗುತ್ತವೆ.
ಅಡಿಕೆ ತೋಟದಲ್ಲೂ ಬಾಳೆ, ಕಾಳುಮೆಣಸು, ಕೊಕ್ಕೊ, ಜಾಯಿಕಾಯಿಯಂತಹ ಕೃಷಿಯನ್ನು ಮಾಡಿ ಅದರಿಂದಲೂ ಆದಾಯದ ಒಂದಂಶ ಪಡೆಯುವ ನಮ್ಮ ಹುಮ್ಮಸ್ಸು ಕಡಿಮೆಯಾಗಬಾರದು. ಏನೇನೊ ನೆಪ ಹೇಳಿಕೊಂಡು ಕೆಲವು ಕೃಷಿಕರು ಇಂತಹ ಕೃಷಿಯಲ್ಲಿ ಉದಾಸೀನ ಮಾಡುವುದು ಈಗ ಹೆಚ್ಚಾಗುತ್ತಿದೆ. ನೀರಿನ ಬಳಕೆ ಕಡಿಮೆ ಬೇಕಾದ ಕೃಷಿಗೆ ಮತ್ತು ನಲುವತ್ತು ಡಿಗ್ರಿ ತಾಪಮಾನದಲ್ಲೂ ದೊಡ್ಡ ಮಟ್ಟಿನ ನಷ್ಟ ತರದಿರುವ ಕೃಷಿಗೆ ಗಮನ ಕೊಡುವುದು ಒಳಿತು. ಹಾಗಾಗಿಯೇ ಈಗ ಗೇರು ಬೀಜದ ತೋಟಗಳು ರಬ್ಬರ್ ತೋಟಗಳಂತೆ ಅಲ್ಲಲ್ಲಿ ತಲೆಯೆತ್ತ ತೊಡಗಿವೆ. ಸ್ರೀಮಂತರ ತಟ್ಟೆಯಲ್ಲಿ ಗೋಚರಿಸುತ್ತಿದ್ದ ಗೇರುಬೀಜಗಳು ಈಗ ಮಧ್ಯಮವರ್ಗದವರ ಮನೆಯ ತಟ್ಟೆಗೂ ಬಂದಿರುವುದರಿಂದ ಗೇರುಬೀಜ ಕೃಷಿಗೆ ತುಂಬ ಉತ್ತಮ ಭವಿಷ್ಯವಿದೆ. ಈಗಾಗಲೆ ಅಖಿಲ ಭಾರತ ಗೇರು ಬೆಳೆಗಾರರ ಸಂಘ ಅಸ್ತಿತ್ವಕ್ಕೆ ಬರುತ್ತಿದ್ದು ಮುಂದೆ ಇದು ಬೆಳೆಗಾರರ ಹಿತಕ್ಕಾಗಿ ಕೆಲಸ ಮಾಡುವುದರಿಂದ ಅದು ಕೂಡ ಗೇರುಬೆಳೆಯುವವರಿಗೆ ಒಂದು ಪ್ರೋತ್ಸಾಹದಾಯಕ ಬೆಳವಣಿಗೆ.