ಕರಾವಳಿಯ ಕೃಷಿಕರು ಯಾವತ್ತೂ ಒಂದು ಬೆಳೆಯನ್ನು ನಂಬಿಕೊಂಡು ಇರುವವರಲ್ಲ. ಅದು ಹಿಂದಿನ ಕಾಲದಿಂದೀಚೆ ಇಲ್ಲಿಯ ನೆಲದ ಜಾಯಮಾನವಾಗಿ ಬೆಳೆದು ಬಂದಿದೆ. ನಮ್ಮ ಹಿರಿಯರೂ ಕೇವಲ ಅಡಿಕೆ ತೋಟದೊಳಗೆ ಅಡಿಕೆಯನ್ನು ಮಾತ್ರ ಬೆಳೆದವರಲ್ಲ. ಒಂದು ಉತ್ಪನ್ನದಿಂದ ಬರುವ ಆದಾಯ ಯಾವ್ಯಾವುದೋ ಕಾರಣಗಳಿಂದ ಕಡಿಮೆಯಾದರೆ ಪ್ರಧಾನ ಬೆಳೆಯ ಜೊತೆಗೆ ಬೆಳೆದ ಉಪಬೆಳೆಗಳು ಒಟ್ಟು ಜೀವನಕ್ಕೆ ಬೇಕಾದ ಆದಾಯವನ್ನು ಜೋಡಿಸಿಕೊಡುತ್ತವೆ ಎಂಬುದನ್ನು ಕಂಡುಕೊಂಡಿದ್ದರು. ಇಲ್ಲಿನ ಉಪಬೆಳೆಗಳು ಕೇವಲ ಮಾರಾಟದ ಉದ್ದೇಸದವುಗಳಲ್ಲ. ಅದು ನಿತ್ಯದ ಬದುಕಿಗೆ ಬಟ್ಟಲಿಗೂ ಬೀಳಬೇಕು. ನಾಳೆಯ ಬದುಕಿಗೆ ಉಳಿತಾಯಕ್ಕೂ ಸಲ್ಲಬೇಕು ಎಂಬ ಮಹದುದ್ದೇಶ ಅವರಲ್ಲಿತ್ತು. ಅಡಿಕೆ ತೋಟದೊಳಗೆ ತೆಂಗು, ಬಾಳೆ, ಕಾಳುಮೆಣಸು, ಏಲಕ್ಕಿ, ಕಾಫಿ ಮುಂತಾದ ಆಹಾರ ಮತ್ತು ಸಂಬಾರ ಬೆಳೆಗಳನ್ನು ಬೆಳೆಯುತ್ತಿದ್ದರು. ಯಾವ ಉಪಬೆಳೆಗಳು ಕೂಡ ಪ್ರಧಾನ ಬೆಳೆಗೆ ತೊಡಕು ತರುವಂತಿರಲಿಲ್ಲ. ಕಾಲಕ್ರಮೇಣ ಕರಾವಳಿ ಜಿಲ್ಲೆಗಳಿಂದ ಕಾಫಿ ಮತ್ತು ಏಲಕ್ಕಿ ಉಪಬೆಳೆಯಾಗಿ ಬೆಳೆಯುವುದು ಬಹಳ ಕಡಿಮೆಯಾಯಿತು. ಆ ಜಾಗದಲ್ಲಿ ಕೊಕ್ಕೊ, ಜಾಯಿಕಾಯಿ ಮತ್ತು ಲವಂಗಗಳು ಬಂದವು. 1980ರ ನಂತರ ಅಡಿಕೆ ಬೆಳೆಗಾರ ಕೊಕ್ಕೊವನ್ನು ಉಪಬೆಳೆಯಾಗಿ ಬಹುತೇಕ ತೋಟಗಳಲ್ಲಿ ಅಂಗೀಕರಿಸಿದ್ದಾನೆ.
ಆರಂಭದಿಂದಲೂ ಹಾಗೆಯೇ ಕೊಕ್ಕೊದ ಧಾರಣೆಯಲ್ಲಿ ಏರಿಳಿತಗಳಾಗುತ್ತಿದ್ದವು. ಕೃಷಿಕರೂ ಹಾಗೆಯೇ ಕೃಷಿಯನ್ನು ಋಷಿ ಸದೃಶವಾಗಿ, ಖುಷಿಯಾಗಿ ಅನುಸರಿಸಿಕೊಂಡವರು ಕೊಕ್ಕೊದ ಧಾರಣೆಯ ಏಳುಬೀಳುಗಳಲ್ಲಿ ಕೊಕ್ಕೊವನ್ನು ಎಲ್ಲೂ ಕೈಬಿಡದೆ ಉಳಿಸಿಕೊಂಡು ಬಂದಿದ್ದಾರೆ. ಆದರೆ ಕೆಲವರು ಅದನ್ನು ಒಂದು ಋಣಾತ್ಮಕ ದೃಷ್ಟಿಕೋನದಿಂದ ಮತ್ತು ಅಡಿಕೆ ಧಾರಣೆಯ ಸಂಪನ್ನತೆಯ ಧಿಮಾಕಿನಿಂದ ಸಾಕಷ್ಟು ಅಂತರ ಕಾಯ್ದುಕೊಂಡು ಬಂದಿದ್ದಾರೆ. ಮೊನ್ನೆ ಒಂದು ಸಾಮಾಜಿಕ ಜಾಲತಾಣದಲ್ಲಿ ಕೊಕ್ಕೊ ಉಪಬೆಳೆಯಾಗಿ ಮುಖ್ಯವಾಗಿದೆ ಎಂಬ ವಿಷಯಕ್ಕೆ ದೊಡ್ಡ ಚರ್ಚೆಯಾಯಿತು. ಸುಮಾರು ಎರಡೂವರೆ ಶತಕ ಜನರಿರುವ ಅ ಜಾಲತಾಣದಲ್ಲಿ ಹತ್ತಾರು ಮಂದಿ ತೀರಾ ಋಣಾತ್ಮಕವಾಗಿ ಕೊಕ್ಕೊವನ್ನು ಪಟ್ಟಿಮಾಡಿದರು. ಅವರಲ್ಲಿ ಕೆಲವರಿಗೆ ಕೊಕ್ಕೊವನ್ನು ಕಂಡರಾಗದಷ್ಟು ಅಲರ್ಜಿ ಇತ್ತು. ಕೆಲವರು ಕೊಕ್ಕೊ ಕೊಳೆದು ಕೊಳೆರೋಗ ಹರಡುತ್ತದೆ ಎಂದರು. ಕೆಲವರು ಅಡಿಕೆ ಫಸಲಿಗೆ ತೊಂದರೆ ಎಂದರು. ಇನ್ನು ಕೆಲವರು ಅದನ್ನು ಕೊಯ್ದು ತಂದು ಬೀಜ ಬೇರ್ಪಡಿಸಿದರೆ ಕಾರ್ಮಿಕರ ಸಂಬಳ ಬರಲೊಲ್ಲದು ಎಂದು ಅವಲತ್ತುಕೊಂಡರು. ಕೆಲವರು ಕ್ಯಾಂಪ್ಕೋ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು. ಅವರಿಗೆ ಕೊಕ್ಕೊದ ಬಗ್ಗೆ ಕ್ಯಾಂಪ್ಕೋ ಏನು ಮಾಡಿದೆ ಎಂಬ ಅರಿವಿದ್ದರೂ ಈ ಅಸಹನೆ ಬಂದಿತ್ತು. 2017ರ ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಕೊಕ್ಕೊ ಫಸಲು ಅದ್ಭುತವಾಗಿತ್ತು. ಮಾರುಕಟ್ಟೆಗೆ ಕೊಕ್ಕೊ ಬೀಜ ಸುನಾಮಿ ಅಪ್ಪಳಿಸಿದಂತೆ ಬಂದಿತ್ತು. ಬಹುರಾಷ್ಟ್ರೀಯ ಕಂಪೆನಿಗಳು, ಖಾಸಗಿಯವರು ಶಟರ್ ಎಳೆದು ಹೋಗಿದ್ದರು. ಕೃಷಿಕರು ಬೆಳೆದ ಎಲ್ಲ ಕೊಕ್ಕೊ ಹಸಿ ಬೀಜಗಳನ್ನು ಖರೀದಿ ಮಾಡಿದ್ದು ಕ್ಯಾಂಪ್ಕೋ ಮಾತ್ರ. ಇವತ್ತು ಪುತ್ತೂರಿನಲ್ಲಿ ಕ್ಯಾಂಪ್ಕೋದ ಬೃಹತ್ ಚಾಕೊಲೇಟ್ ಫ್ಯಾಕ್ಟರಿ ಇಲ್ಲದಿರುತ್ತಿದ್ದರೆ ಕೊಕ್ಕೊ ಬೆಳೆಯನ್ನು ಖಂಡಿತ ಕೇಳುವವರಿರುತ್ತಿರಲಿಲ್ಲ. ಅಡಿಕೆಯ ಮಾರುಕಟ್ಟೆಯಲ್ಲಿ ಕ್ಯಾಂಪ್ಕೋ ಹೇಗೆಯೋ ಕೊಕ್ಕೊ ಮಾರುಕಟ್ಟೆಯಲ್ಲಿಯೂ ಕ್ಯಾಂಪ್ಕೋವೆ ಧಾರಣೆಯ ಸ್ಥಿರತೆಗೆ ಕಾರಣ.
ಸರಿಯಾದ ಕೃಷಿ ಕಾರ್ಯಗಳನ್ನು ಮಾಡಿಕೊಂಡು ಬರುವವರು ಇಂದೂ ಕೊಕ್ಕೊವನ್ನು ಬೆಳೆಯುತ್ತಾರೆ, ಪ್ರೀತಿಸುತ್ತಾರೆ. ಹತ್ತು ಮೂವತ್ತು ಕಾರ್ಮಿಕರನ್ನು ದುಡಿಸುವ ಎರಡು ದೊಡ್ಡ ಕೃಷಿಕರು ಕೊಕ್ಕೊದ ಸೀಸನಿನಲ್ಲಿ ನಮಗೆ ಕಾರ್ಮಿಕರ ಸಂಬಳ ಕೊಕ್ಕೊದಿಂದಲೇ ಬರುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅವರಲ್ಲಿ ಕೊಕ್ಕೊದ ಬಗ್ಗೆ ಋಣಾತ್ಮಕ ಅಂಶಗಳಿರದೆ ಧನಾತ್ಮಕ ಪ್ರಶಂಸೆ ಇತ್ತು. ಸರಿಯಾದ ಸಮಯಕ್ಕೆ ಕೊಕ್ಕೊ ಗೆಲ್ಲುಗಳನ್ನು ಸವರುವುದು, ಪ್ರತ್ಯೇಕ ಗೊಬ್ಬರ ಕೊಡುವುದು, ಕೊಕ್ಕೊ ಸೀಸನಿನಲ್ಲಿ ನಿತ್ಯ ಮರಗಳನ್ನು ಗಮನಿಸಿ ಹಣ್ಣುಗಳನ್ನು ಕೊಯ್ದು ಸಂಗ್ರಹಿಸುವುದು ಮುಂತಾದ ಕೆಲಸಗಳನ್ನು ಪ್ರೀತಿಯಿಂದ ಮಾಡುವವರಿಗೆ ಯಾವ ಕೃಷಿಯೂ ಹೊರೆಯೆನಿಸುವುದಿಲ್ಲ. ನಮ್ಮ ಅನೇಕ ಅಡಿಕೆ ಕೃಷಿಕರಿಗೆ ಅಡಿಕೆಯ ಧಾರಣೆಯ ನಡುವೆ ಉಪಬೆಳೆಗಳ ಉಪ ಆದಾಯ ಕಣ್ಣಿಗೇ ಕಾಣುವುದಿಲ್ಲ. ಅದೆಲ್ಲ ಅವರಿಗೆ ತೋಟದೊಳಗಿನ ಕಸಕ್ಕೆ ಸಮನಾದುದು ದುರಂತ. ನಾಳೆ ಯಾವ ಬೆಳೆಯ ಭವಿಷ್ಯ ಏನಾಗುತ್ತದೆ ಎಂಬುದು ಅದರ ಬಳೆಕೆಯ ಮೇಲೆ ನಿರ್ಣಯವಾಗುತ್ತದೆಯೇ ಹೊರತು ಅದರ ಧಾರಣೆಯ ಮೇಲೆ ಅಲ್ಲ.
ಕೊಕ್ಕೊದ ಧಾರಣೆ ನಿರ್ಣಯವಾಗುವುದು ಅದರ ಗುಣಮಟ್ಟದಿಂದ. ಮಳೆಗಾಲ ಕಳೆದು ಸಿಗುವ ಬೀಜಗಳ ಗುಣಮಟ್ಟ ನೀರಿನಂಶಗಳು ಕಡಿಮೆಯಾಗಿ ಒಳ್ಳೆಯದಿರುತ್ತದೆ. ಆಗ ಧಾರಣೆಯೂ ಹೆಚ್ಚಿರುತ್ತದೆ. ಕೊಕ್ಕೊದ ಧಾರಣೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಭಿಸಿರುವುದರಿಂದ ಸಣ್ಣ ಮಟ್ಟಿಗೆ ಏರುಪೇರು ಸಹಜ. ಮಳೆಗಾಲದ ಕೊಕ್ಕೊ ಬೀಜದಲ್ಲಿ ನೀರಿನಂಶ ಹೆಚ್ಚು. ಕೋಡುಗಳು ಹೊರಗಿನಿಂದ ಹಣ್ಣಾದಂತೆ ಕಂಡರೂ ಒಳಗೆ ಬೀಜಗಳು ಬೆಳೆತಿರುವುದಿಲ್ಲ ಮತ್ತು ಪಸ್ರ್ಪರ ಬೇರ್ಪಡದೆ ಇರುತ್ತವೆ. ಜಳ್ಳು ಬೀಜಗಳ ಸಂಖ್ಯೆಯೂ ಕಡಿಮೆಯಿರುವುದರಿಂದ ಮಳೆಗಾಲದ ಕೊಕ್ಕೊಗೆ ಧಾರಣೆ ಕಡಿಮೆ. ಮಳೆಗಾಲದಲ್ಲಿ ಗುಣಮಟ್ಟ ತೀರಾ ಕಡಿಮೆಯಿರುವುದರಿಂದಾಗಿಯೇ ಧಾರಣೆ ಕುಸಿತ ಹೊರತು ಅಂಡಮಾನಿಗೆ ಮಳೆ ಬಂತು ಇಲ್ಲಿಗೂ ಬರುತ್ತದೆಯೆಂದು ಕಡಿಮೆಮಾಡುವುದೆಂದು ಕೆಲವರು ಊಹಿಸುವುದು ತಪ್ಪು. ಇಂತಹ ಬೀಜಗಳನ್ನು ಖರೀದಿ ಮಾಡಿದರೆ ನೂರಕ್ಕೆ ಇಪ್ಪತ್ತರಷ್ಟೆ ಬೀಜಗಳು ಚಾಕಲೇಟ್ ಫ್ಯಾಕ್ಟರಿಯ ಉಪಯೋಗಕ್ಕೆ ದೊರಕುತ್ತವೆ. ತೀರಾ ಕೆಲವು ಕೃಷಿಕರು ಕೋಡುಗಳ ತುಂಡುಗಳನ್ನು, ಕೊಳೆತ ಕೋಡುಗಳ ಬಲಿಯದ ಬೀಜಗಳನ್ನು ಮಿಶ್ರಮಾಡಿ ತರುತ್ತಾರೆ. ಒಟ್ಟು ಮಾರುಕಟ್ಟೆಯ ಮೇಲೆ ಇದು ದುಷ್ಪರಿಣಾಮ ಬೀರುವುದು ಅವರ ಅರಿವಿಗೆ ಬರುವುದಿಲ್ಲ.
ಕೊಕ್ಕೊ ಕೃಷಿಕೆ ಕಾರ್ಮಿಕರ ಅವಲಂಬನೆ ಕಡಿಮೆ ಮಾಡಲು ಬಹಳಷ್ಟು ಸಾಧ್ಯವಿದೆ. ಈಗ ಕೋಡುಗಳನ್ನು ಒಡೆಯುವ ಸಾಧನಗಳೂ ಬಂದಿವೆ. ಗೆಲ್ಲು ಸವರುವಿಕೆಯಿಂದ ಹಿಡಿದು ಒಟ್ಟಾಗಿ ವೈಜ್ಞಾನಿಕ ಕೃಷಿ ಕ್ರಮಗಳನ್ನು ಅಳವಡಿಸಿಕೊಂಡರೆ ನೆಲದಿಂದಲೇ ಕೃಷಿಕ ಕೋಡುಗಳನ್ನು ಕೊಯ್ದು ಸಂಗ್ರಹಿಸಬಹುದು. ಕೃಷಿಯೆಂದರೆ ಕೇವಲ ಆದಾಯಗಳ ಗಂಟಲ್ಲ. ಅದರಲ್ಲಿ ಪರಿಶ್ರಮ ಮತ್ತು ಪ್ರೀತಿ ಬೇಕು. ತೋಟಕ್ಕಿಳಿದು ಎಲ್ಲವನ್ನೂ ಗಮನಿಸುವ ಜಾಯಮಾನ ಬೇಕು. ಮನೆ ಮಂದಿಯನ್ನು ಕೃಷಿಯ ಅನ್ಯಾನ್ಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಜಾಣ್ಮೆಯೂ ಬೇಕು. ಅದು ಹೊರತು ಅಡಿಕೆಯೊಂದೆ ಉಳಿದವೆಲ್ಲ ಏನೂ ಅಲ್ಲ ಎಂಬ ಮನಸ್ಸಿನೊಳಗಿನ ಹುಳುಕು ನಮ್ಮಿಂದ ದೂರವಾಗಬೇಕು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…