ಪುತ್ತೂರು: ದೇಶದಾದ್ಯಂತ ಕೊರೊನಾ ಭೀತಿ ಎದುರಾಗಿದೆ. ಆರೋಗ್ಯ ತುರ್ತುಪರಿಸ್ಥಿತಿಗೆ ಸರಕಾರ ಕರೆ ನೀಡಿದೆ. ದೇಶದ ಎಲ್ಲರೂ ಸಹಕರಿಸಬೇಕಿದೆ. ಈ ಸಂದರ್ಭ ಅಡಿಕೆ ಮಾರುಕಟ್ಟೆ ಮೇಲೆ ಸಹಜವಾಗಿಯೇ ಸ್ವಲ್ಪ ಪ್ರಮಾಣದ ಪರಿಣಾಮ ಇರುತ್ತದೆ. ಬೆಳೆಗಾರರು ಈ ಸಂದರ್ಭದಲ್ಲೂ ಅಗತ್ಯವಾಗಿ ಸಹಕರಿಸಬೇಕಿದೆ. ಆದರೆ ಕೆಲವೇ ದಿನದಲ್ಲಿ ಮಾರುಕಟ್ಟೆ ಏರಿಕೆ ಕಾಣಲಿದೆ. ಬೆಳೆಗಾರರು ಧೈರ್ಯ ತಾಳಬೇಕಿದೆ, ಸರಕಾರದ ಜೊತೆ ಕೈಜೋಡಿಸಬೇಕಿದೆ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊರೊನಾ ಭೀತಿ ಸಮರ್ಥವಾಗಿ ಎದುರಿಸಲು ಸರಕಾರಗಳು ಈಗ ಸಮಾರೋಪಾದಿಯ ಕ್ರಮ ಕೈಗೊಂಡಿದೆ. ದೇಶದ ಜನರ ಆರೋಗ್ಯದ ಹಿತಕ್ಕಾಗಿ ಎಲ್ಲರೂ ಸರಕಾರದ ಜೊತೆ ಕೈ ಜೋಡಿಸಬೇಕಿದೆ. ಹೀಗಿರುವಾಗ ಸಹಜವಾಗಿಯೇ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಅಡಿಕೆ ಮಾರುಕಟ್ಟೆ ಮೇಲೂ ಸ್ವಲ್ಪ ಪರಿಣಾಮ ಬೀರಬಹುದು. ಧಾರಣೆಯಲ್ಲಿ ಏರಿಳಿತ ಕಾಣಬಹುದು. ಈ ಸಂದರ್ಭ ಬೆಳೆಗಾರರು ಭಯದಿಂದ ಅಡಿಕೆಯನ್ನು ಒಮ್ಮೆಲೇ ಮಾರುಕಟ್ಟೆಗೆ ಬಿಡುವ ಕಾರ್ಯ ಮಾಡದೆ ಅಗತ್ಯಕ್ಕೆ ತಕ್ಕಂತೆ ಮಾರುಕಟ್ಟೆಗೆ ನೀಡಿದರೆ ಧಾರಣೆಯಲ್ಲಿನ ಏರಿಳಿತ ತಡೆಯಬಹುದಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಸಹಜವಾಗಿಯೇ ಅಡಿಕೆ ಮಾರುಕಟ್ಟೆ ಇಳಿಕೆಯ ಹಾದಿಯಲ್ಲಿರುತ್ತದೆ. ಈಗ ಕೊರೊನಾ ಭೀತಿ ನಿವಾರಣೆಯ ಬಳಿಕ ಅಡಿಕೆ ಮಾರುಕಟ್ಟೆ ಏರಿಕೆ ಕಾಣಬಹುದಾಗಿದೆ. ಬೆಳೆಗಾರರು ಈಗ ಭಯ ಹಾಗೂ ಗೊಂದಲಗಳಿಂದ ಮುಕ್ತವಾಗಿ ಅಡಿಕೆ ಮಾರುಕಟ್ಟೆ ಸ್ಥಿರತೆಗೆ ಸಹಕರಿಸುವುದು ಹಾಗೂ ಕೊರೊನಾ ಭೀತಿ ನಿವಾರಣೆ ಜೊತೆಗೆ ಸರಕಾರದ ಜೊತೆ ಕೈಜೋಡಿಸಬೇಕಿದೆ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.