ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕಾಲೇಜಿನ ಮುಂಭಾಗದ ಗ್ರಾ.ಪಂ.ನ ಬಸ್ ನಿಲ್ದಾಣದಲ್ಲಿ ಸುಮಾರು 70 ವರ್ಷದ ಕಾಸರಗೋಡಿನ ಮಣಿ ಎಂಬ ವೃದ್ಧರು ಕಳೆದ ಕೆಲವು ಸಮಯದಿಂದ ವಾಸ್ತವ್ಯ ಹೂಡಿದ್ದರು.
ಕಳೆದ 15 ದಿನಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದರು.ಅಲ್ಲದೆ ಇವರ ಕಾಲು, ಕೈ ಇತ್ಯಾದಿ ಕಡೆಗಳಲ್ಲಿ ಗಾಯವಾಗಿ ಕೀವು ತುಂಬಿಕೊಂಡಿತ್ತು.ಇದನ್ನು ಗಮನಿಸಿದ ಸುಬ್ರಹ್ಮಣ್ಯದ ಸಮಾಜ ಸೇವಕ ರವಿಕಕ್ಕೆಪದವು ಅನಾರೋಗ್ಯ ಪೀಡಿತರಾಗಿದ್ದ ವೃದ್ಧ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಿದರು.ಈ ಉತ್ತಮ ಕಾರ್ಯಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್, ಗ್ರಾ.ಪಂ.ಸುಬ್ರಹ್ಮಣ್ಯ ಮತ್ತು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಪೂರ್ಣ ಸಹಕಾರ ನೀಡಲಾಗಿತ್ತು. ಈ ಕಾರ್ಯವು ಇದೀಗ ಸರ್ವರ ಪ್ರಂಶಸೆಗೆ ಪಾತ್ರವಾಗಿದೆ.
ರವಿ ಕಕ್ಕೆಪದವು ಅವರ ನೇತೃತ್ವದಲ್ಲಿ 108 ಆಂಬ್ಯುಲೆನ್ಸ್ ನಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ವೃದ್ಧರನ್ನು ಸಾಗಿಸಲಾಯಿತು.ಆರಂಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ ಸುಬ್ರಹ್ಮಣ್ಯದ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಪ್ರಥಮ ಚಿಕಿತ್ಸೆ ನೀಡಿದರು.ಬಳಿಕ ಅವರನ್ನು ಮಂಗಳೂರಿಗೆ ಕರೆದೊಯ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ.ಪಿಡಿಓ ಮುತ್ತಪ್ಪ, ಕಾರ್ಯದರ್ಶಿ ಮೋನಪ್ಪ.ಡಿ, ರೋಟರಿ ಅಧ್ಯಕ್ಷ ಭರತ್ ನೆಕ್ರಾಜೆ, ನಿರ್ದೇಶಕ ಗೋಪಾಲ್ ಎಣ್ಣೆಮಜಲು, ಜೇಸಿಸ್ ನಿರ್ದೇಶಕ ಮಣಿಕಂಠ ಉಪಸ್ಥಿತರಿದ್ದರು.ಈ ಹಿಂದೆ ಅನಾರೋಗ್ಯ ಪೀಡಿತ ಮಹಿಳೆಯೋರ್ವರನ್ನು ರವಿ ಕಕ್ಕೆಪದವು ಅವರು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದರು.