ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹರಿಯುವ ಎರಡು ಪ್ರಮುಖ ಪುಣ್ಯ ನದಿಗಳ ಸ್ವಚ್ಛತಾ ಕಾರ್ಯವನ್ನು ಯುವ ಬ್ರಿಗೇಡ್ ಕಾರ್ಯಕರ್ತರು ಶನಿವಾರ #ಕುಮಾರ_ಸಂಸ್ಕಾರ ದ ಮೂಲಕ ನದಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಯವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ 200ಕ್ಕೂ ಅಧಿಕ ಮಂದಿ ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಆರಂಭಿಸಿದರು. ಆರಂಭದಲ್ಲಿ ದೇವಸ್ಥಾನ ಸಮೀಪದ ದರ್ಪಣ ತೀರ್ಥ ನದಿಯಲ್ಲಿ ಸ್ವಚ್ಛತಾ ಕಾರ್ಯ ಆರಂಭಗೊಂಡಿತು. ಸರ್ಪದೋಷ ಪರಿಹಾರಕ್ಕೆ ಸರ್ಪಸಂಸ್ಕಾರ ಮಾಡುವಂತೆ ನದಿ ಹಾಳು ಮಾಡಿದ ದೋಷ ಪರಿಹಾರಕ್ಕಾಗಿ #ಕುಮಾರ_ಸಂಸ್ಕಾರ ಎಂಬ ಸಂಕಲ್ಪದೊಂದಿದೆ ನದಿ ಸ್ವಚ್ಚತಾ ಕಾರ್ಯವನ್ನು ಯುವ ಬ್ರಿಗೇಡ್ ನಡೆಸಿದೆ. ಆದಿತ್ಯವಾರ ಕೂಡಾ ನದಿ ಸ್ವಚ್ಛತೆ ನಡೆಯಲಿದೆ.
ಶನಿವಾರದಂದು ಸ್ವಚ್ಛತೆಯ ವೇಳೆ ಸುಮಾರು 5 ರಿಂದ 6 ಟನ್ ನಷ್ಟು ತ್ಯಾಜ್ಯ ದೊರಕಿದೆ. ಕುಮಾರಧಾರ ನದಿಯ ಸ್ನಾನಘಟ್ಟ ಹಾಗೂ ಅದರ ಮೇಲ್ಭಾಗದಲ್ಲಿ ಕೂಡಾ ನದಿ ಸ್ವಚ್ಛಗೊಳಿಸಲಾಯಿತು. ಯಾತ್ರಾರ್ಥಿಗಳು ಪುಣ್ಯ ಸ್ನಾನದ ವೇಳೆ ನೀರಿನಲ್ಲಿ ಬಿಡಲಾಗಿದ್ದ ಬಟ್ಟೆ, ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳನ್ನು ನದಿ ನೀರಿನಿಂದ ಹೊರತೆಗೆಯಲಾಯಿತು.
ಬೆಳಗ್ಗೆ ಆರಂಭಗೊಂಡ ತ್ಯಾಜ್ಯ ಹೆಕ್ಕುವ ಕಾರ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಹಾಗೂ ರಾಜ್ಯ ಯುವಬ್ರಿಗೇಡ್ ಸ್ವಯಂ ಸೇವಕರು, ಕಾರ್ಯಕರ್ತರು ಪಾಲ್ಗೊಂಡರು. ಚಕ್ರವರ್ತಿ ಸೂಲಿಬೆಲೆ ಅವರು ನೀರಿಗೆ ಇಳಿದು ತ್ಯಾಜ್ಯ ಹೆಕ್ಕುವ ಮೂಲಕ ಸ್ವಚ್ಚತೆಯಲ್ಲಿ ತೊಡಗಿಸಿಕೊಂಡರು. ಯುವ ಬ್ರಿಗೇಡ್ ಜೊತೆ ಸೋದರಿ ನಿವೇದಿತಾ ಪ್ರತಿಷ್ಠಾನದ ಮಹಿಳಾ ಕಾರ್ಯಕರ್ತರು ಕೈ ಜೋಡಿಸಿದರು. ನಮ್ಮ ಸುಬ್ರಹ್ಮಣ್ಯ ಯುವ ಘಟಕದ ಸದಸ್ಯರು ಪೂರ್ಣ ಸಹಕಾರ ನೀಡಿದರು.
ಸ್ಥಳಿಯ ಗ್ರಾ.ಪಂ ಸಂಪೂರ್ಣ ಸಹಕಾರ ನೀಡಿದೆ. ಪಂಚಾಯತ್ ಪಿಡಿಒ ಮುತ್ತಪ್ಪ, ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ ಸಂಗ್ರಹಿಸಿದ ತ್ಯಾಜ್ಯ ವಿಲೆವಾರಿಗೆ ವ್ಯವಸ್ಥೆ ಮಾಡಿದರು. ಸಂಗ್ರಹಿಸಿದ ಟನ್ ಗಟ್ಟಲೆ ತ್ಯಾಜ್ಯವನ್ನು ಪಂಚಾಯತ್‍ನ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಸುರಿಯಲಾಗಿದೆ.
ಭಾನುವಾರ ನಡೆಯುವ ಸ್ವಚ್ಛತಾ ಕಾರ್ಯದಲ್ಲಿ ಸಾವಿರಕ್ಕೂ ಅಧಿಕ ಮಂದಿ ಸ್ವಯಂ ಸೇವಕರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ, ಯುವ ಬ್ರಿಗೇಡ್ ಇದುವರೆಗೆ ಕಾವೇರಿ, ಭೀಮ, ಧರ್ಮಸ್ಥಳದ ನೇತ್ರಾವತಿ ಸಹಿತ ಏಳು ಪ್ರಮುಖ ನದಿ ಹಾಗೂ 150ಕ್ಕೂ ಹೆಚ್ಚು ಕಲ್ಯಾಣಿಗಳ ಸ್ವಚ್ಛತಾ ಕಾರ್ಯ ನಡೆಸಿದೆ. ಜೊತೆಗೆ ನದಿಗಳ ಸ್ವಚ್ಛತೆಯ ಕುರಿತು ಜನತೆಯಲ್ಲಿ ಜಾಗೃತಿ ಕೂಡ ನಡೆಸಲಾಗಿದೆ ಎಂದು ಯುವಬ್ರಿಗೇಡ್ ತಂಡದ ಮನಿಷ್ ಗೂನಡ್ಕ ಮಾಹಿತಿ ನೀಡಿದರು.
ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ ಬೆಂಗಳೂರು, ಜಿಲ್ಲಾ ಸಂಚಾಲಕ ತಿಲಕ್ ಶಿಶಿಲ,ತಾಲೂಕು ಸಂಚಾಲಕ ಶರತ್ ಹಾಗೂ ರಾಜ್ಯದ ವಿವಿದೆಡೆಯ ಯುವ ಬ್ರಿಗೇಡ್ ಸ್ವಯಂ ಸೇವಕರು, ಕಾರ್ಯಕರ್ತರು, ಸುಳ್ಯ, ಸುಬ್ರಹ್ಮಣ್ಯ ಯುವ ಬ್ರಿಗೇಡ್ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರಮುಖವಾಗಿ ಯುವ ಬ್ರಿಗೇಡ್ ಪ್ರಮುಖ್ ಚಕ್ರವರ್ತಿ ಸೂಲಿಬೆಲೆ, ಸುಬ್ರಹ್ಮಣ್ಯ ಗ್ರಾ.ಪಂ.ಪಿಡಿಓ ಮುತ್ತಪ್ಪ, ಕಾರ್ಯದರ್ಶಿ ಮೋನಪ್ಪ.ಡಿ, ಸುಬ್ರಹ್ಮಣ್ಯ ಐನೆಕಿದು ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ, ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ವಿಶ್ವನಾಥ ನಡುತೋಟ, ಯುವ ಬ್ರಿಗೇಡ್ ಸುಬ್ರಹ್ಮಣ್ಯ ಘಟಕದ ಶ್ರೀಕುಮಾರ್ ನಾಯರ್ ಬಿಲದ್ವಾರ, ನಮ್ಮ ಸುಬ್ರಹ್ಮಣ್ಯ ತಂಡದ ರಮೇಶ್ ಭಟ್, ಸೂರ್ಯ ಭಟ್, ಅನಂತ ಸೇರಿದಂತೆ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.