ಸುಳ್ಯ: ಸಮೃದ್ಧ ಭಾಷೆಯಾದ ಅರೆಭಾಷೆಯಲ್ಲಿ ಸೃಷ್ಠಿಯಾಗುವ ನಾಟಕಗಳು ತನ್ನ ಆಕರ್ಷಕ ಅಭಿನಯ, ಮನೋಜ್ಞ ಭಾಷಾ ಪ್ರಯೋಗದ ಮೂಲಕ ಗಮನ ಸೆಳೆಯುತ್ತವೆ.
ರಂಗಭೂಮಿಯಲ್ಲಿ ಅರೆಭಾಷಾ ಪ್ರಯೋಗಗಳು ವಿರಳವಾದರೂ ಬಂದಿರುವ ನಾಟಕಗಳು ಬದುಕಿಗೆ ಆಪ್ತವಾಗಿ ಜನ ಮನ ಗೆಲ್ಲುತ್ತದೆ. ಇದಕ್ಕೆ ಒಂದು ಸೇರ್ಪಡೆ ರಂಗಭೂಮಿಯ ಭರವಸೆಯ ಕಲಾವಿದ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೊಕೇಶ್ ಊರುಬೈಲು ನಿರ್ದೇಶನದ ‘ಎಮ್ಮ ಮನೆಯಂಗಳದಿ’ ಅರೆಭಾಷೆ, ಸಂಸ್ಕೃತಿ ಪ್ರತಿಬಿಂಬಿಸುವ ನಾಟಕ
ಗ್ರಾಮೀಣ ಜನಪದ ಕಥಾಹಂದರದಲ್ಲಿ ರಚಿತವಾದ ರಂಗ ಪ್ರಯೋಗ. ಬೇಸಾಯ, ಬಿಸುಕಾಣಿಕೆ, ಬೇಟೆ, ಮಾಗಣೆ ಪಟೇಲರು ಮತ್ತು ಸಾಮಾನ್ಯ ರೈತರ ಬಾಂಧವ್ಯ ಜೊತೆಗೆ ಜಾತಿ,ಧರ್ಮ, ಆಸ್ತಿ ,ಅಂತಸ್ತು ಮೀರಿದ ಪ್ರೇಮ, ಹಿರಿಯರ ಸಮ್ಮುಖದ ವಿವಾಹ , ಮದುವೆಯ ಸಂಭ್ರಮದ ಜೊತೆಗೆ ಅರೆಭಾಷಿಕ ಸಂಪ್ರದಾಯದ ಸೋಬಾನೆ ಹಾಡಿನ ನವೀರಾದ ಸಂಗೀತದ ಜೊತೆಗೆ ಕಚಗುಳಿಯಿಡುವ ಸಂಭಾಷಣೆಗಳಿಗೆ ಅದ್ಭುತವಾಗಿ ರಂಗದ ಮೇಲೆ ಜೀವ ತುಂಬುವ ಕಲಾವಿದರು. ಸುಮಾರು ಒಂದು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟು ರಂಜಿಸುವ ,”ಎಮ್ಮ ಮನೆಯಂಗಳದಿ”ನಾಟಕಕ್ಕೆ ಸಾಕ್ಷಿಯಾಗಿದ್ದು ಪಂಜದ ಶ್ರೀ ಪಂಚಲಿಂಗೇಶ್ವರ ಸಭಾಂಗಣ.
ರಂಗದಲ್ಲಿ ಭವಾನಿ ಶಂಕರ್ ಅಡ್ತಲೆ, ಶಿವಪ್ರಸಾದ್ ಆಲೆಟ್ಟಿ, ದೇವಿಪ್ರಸಾದ್ ಕಾಯರ್ತೋಡಿ, ಪುಷ್ಪರಾಜ್ ಗೋಳಿತೊಟ್ಟು,ಸಂಪ್ರೀತಾ ರೈ ಕಾಯರ್ತೋಡಿ,ಶಶಿಕಾಂತ್ ಮಿತ್ತೂರು, ಶ್ವೇತಾ ಕೇರ್ಪಳ, ರಕ್ಷಿತ್ ಉಬರಡ್ಕ, ಗಾನ, ಅಶ್ವಿನಿ ಪೇರಾಲು, ಮೋಕ್ಷಿತ್ ಕನಕಮಜಲು, ಜವಾಹರ್ ಕೊಯಿಂಗಾಜೆ,ಜೈದಿಪ್, ಕೇಶವ ಪ್ರಸನ್ನ ಮನೋಜ್ಞ ಅಭಿನಯ ಪ್ರದರ್ಶಿಸಿದರು. ನೇಪಥ್ಯದಲ್ಲಿ ಶುಭದಾ .ಆರ್. ಪ್ರಕಾಶ್, ಮೇಘಕೃಷ್ಣ ಕಾಯರ್ತೋಡಿ, ಲೋಹಿತಾಶ್ವ ಪರಮಂಡಲ, ಕಮಲಾಕ್ಷ ಆಚಾರ್ಯ, ವಿಜಯಕುಮಾರ್ ಮಯೂರಿ
ಸಹಕರಿಸಿದರು.
ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮತ್ತು ಜೇಸಿಐ ಪಂಜ ಕಾರ್ಯಕ್ರಮ ಪ್ರಾಯೋಜಿಸಿದ್ದರು. ಲೋಕೇಶ್ ಊರುಬೈಲು ನಿರ್ದೇಶನದ ಅರೆಭಾಷೆ ನಾಟಕ ‘ಮಾಯಕ’ ವು ಹತ್ತಾರು ಪ್ರದರ್ಶನ ಕಂಡು ಜನ ಮನ ಗೆದ್ದಿತ್ತು.