ಸುಳ್ಯ: ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯ ಪಟ್ಟಿ ಹೊರ ಬೀಳುತ್ತಿದ್ದಂತೆ ಸುಳ್ಯ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.
ಪಕ್ಷದ ಗಮನಕ್ಕೆ ಬಾರದೇ ನೇಮಕಾತಿ ನಡೆದಿದೆ ಎಂಬುದು ಪಕ್ಷದ ಮುಖಂಡರ ಆಕ್ಷೇಪ. ಅರೆ ಭಾಷಿಕರಾದ ಗೌಡ ಸಮುದಾಯದ ಹಲವು ಮಂದಿ ನಾಯಕರು ಬಿಜೆಪಿಯಲ್ಲಿದ್ದಾರೆ. ಅವರಲ್ಲಿ ಕೆಲವರಿಗೆ ಅರೆಭಾಷೆ ಅಕಾಡೆಮಿ ಅಧ್ಯಕ್ಷತೆ, ಸದಸ್ಯತ್ವ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಪಕ್ಷದ ಸಕ್ರೀಯ ನಾಯಕರನ್ನು, ಸದಸ್ಯರನ್ನು ನೇಮಕಾತಿ ಸಂದರ್ಭ ಕಡೆಗಣಿಸಲಾಗಿದೆ ಎಂಬ ಆರೋಪ, ಆಕ್ರೋಶ ಇದೀಗ ಕೆಲವು ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಉಂಟಾಗಿದೆ.
ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗದ ಕಾರಣ ಸುಳ್ಯದಲ್ಲಿ ಭಾರೀ ಆಕ್ರೋಶ ಅಸಮಾಧಾನ ಉಂಟಾಗಿತ್ತು. ಅದು ಸ್ವಲ್ಪ ತಣ್ಣಗಾಗಿರುವ ಸಂದರ್ಭದಲ್ಲಿ ಅರೆಭಾಷೆ ಅಕಾಡೆಮಿ ನೇಮಕ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಕೆಲವು ಮಂದಿ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಮತ್ತು ಸದಸ್ಯತ್ವಕ್ಕೆ ತೆರೆಮರೆಯಲ್ಲಿ ಪ್ರಯತ್ನವೂ ನಡೆಸಿದ್ದರು. ಆದರೆ ಇದೀಗ ಹೊರ ಬಂದಿರುವ ಪಟ್ಟಿ ಸುಳ್ಯ ಬಿಜೆಪಿಗರಿಗೆ ಅಚ್ಚರಿ ಮೂಡಿಸಿದೆ.
ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆ, ಸುಳ್ಯ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ಸೇರಿದಂತೆ ಇದೀಗ ಅರೆಭಾಷೆ ಅಕಾಡೆಮಿ ಆಯ್ಕೆ ಕೂಡಾ ಅಸಮಾಧಾನಕ್ಕೆ ಕಾರಣವಾಗಿದೆ.
ಅರೆಭಾಷೆ ಅಕಾಡೆಮಿಯ ಅಧ್ಯಕ್ಷರ ಮತ್ತು ಸದಸ್ಯರ ನೇಮಕಾತಿಯ ಮೊದಲು ಮಂಡಲ ಸಮಿತಿಗೆ ತಿಳಿದಿರಲಿಲ್ಲ. ಇದೀಗ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿರುವುದು ಪಕ್ಷದ ಗಮನಕ್ಕೆ ಬಂದಿದೆ ಈ ಕುರಿತು ಪರಿಶೀಲಿಸಲಾಗುವುದು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸುಳ್ಯನ್ಯೂಸ್.ಕಾಂ ಗೆ ಪ್ರತಿಕ್ರಿಯಿಸಿದ್ದಾರೆ.