ಅವಳು ಗೆಳತಿಯಲ್ಲ…

August 22, 2020
4:30 PM

ಸ್ನೇಹವೆಂಬುದು ಅಪೂರ್ವವಾದ ಬಂಧನ. ಮುಖವಾಡವಿಲ್ಲದ ಮೊಗ. ಸ್ವಾರ್ಥವಿಲ್ಲದ, ಎಲ್ಲಾ ಎಲ್ಲೆಯನ್ನು ಮೀರಿ ನಿಲ್ಲುವ ಸಂಬಂಧ‌. ಪ್ರೀತಿಗಿಂತ ಮೊದಲು ಆರಂಭವಾಗುವುದು ಈ ಸ್ನೇಹ. ಪ್ರೀತಿಯಲ್ಲಿ ಸ್ವಾರ್ಥದಿಂದ ಒಂದೊಮ್ಮೆ ವಿರಸ ಕಾಣುವುದು. ಆದರೆ ಸ್ನೇಹ ಸಮರಸಕ್ಕೆ ಸಾಕ್ಷಿ. ಪ್ರತಿ ವ್ಯಕ್ತಿಯ ಬದುಕಿನಲ್ಲಿ ಈ ಸ್ನೇಹದ ಪ್ರಪಂಚ ಆಗಸದಷ್ಟೇ ವಿಸ್ತಾರವಾದುದು.
ಸ್ನೇಹ ಬದುಕಿಗೊಂದು ಸುಂದರ ಅರ್ಥವನ್ನು ಕೊಡುತ್ತದೆ. ಕೆಲವೊಮ್ಮೆ ಹಳಿ ತಪ್ಪಿದ ಬದುಕನ್ನು ಸರಿದಾರಿಗೆ ತರುತ್ತದೆ. ಈ ಜೀವನದ ಪ್ರಯಾಣದಲ್ಲಿ ನಮ್ಮೊಂದಿಗೆ ಪಯಣಿಸುವವರು ಹಲವು ಮಂದಿ. ಈ ಸುಂದರ ಪಯಣದಲ್ಲಿ ನಾವು ಯಾರಿಗೆ ಋಣಿಯಾಗಿರಬೇಕೋ ಅವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಸ್ನೇಹಿತರೇ ಆಗಿರುವರು.

Advertisement
Advertisement

ಸ್ನೇಹದಲ್ಲಿ ಬೇಧ ಭಾವವಿಲ್ಲ. ಜಾತಿ ಧರ್ಮದ ತಡೆಗೋಡೆಗಳಿಲ್ಲ. ಎಂದೂ ಒಬ್ಬರ ಬಗ್ಗೆ ಇನ್ನೊಬ್ಬರು ತೀರ್ಮಾನ ತೆಗೆದುಕೊಳ್ಳುವುದಿಲ್ಲ.ನಿಬಂಧನೆಗಳನ್ನು ಹೇರುವುದಿಲ್ಲ. ಎಲ್ಲಾ ರಹಸ್ಯವನ್ನು ಅರಿತಿದ್ದರೂ ಇನ್ನೊಬ್ಬರ ಮುಂದೆ ಬಿಟ್ಟು ಕೊಡುವುದಿಲ್ಲ.ಕಷ್ಟ ದಲ್ಲಿ ಹೆಗಲಾಗಿರುತ್ತಾರೆ.ಯಶಸ್ಸನ್ನು ಸಂಭ್ರಮಿಸುವ ಮೊದಲ ವ್ಯಕ್ತಿಯಾಗಿರುತ್ತಾರೆ.
ಸ್ನೇಹವೆಂದರೆ ಹಾಗೆಯೇ, ಮಧುರವಾದ ಸಂಬಂಧವನ್ನು ಏರ್ಪಡಿಸುತ್ತದೆ. ಎಂತಹ ಕಾಲದಲ್ಲಿಯೂ ಜೊತೆ ನಿಲ್ಲುತ್ತದೆ. ಮುಕ್ತ ಮನಸ್ಸಿನಿಂದ ಅನಿಸಿಕೆ ಹಂಚಿಕೊಳ್ಳಲು ವೇದಿಕೆ ನಿರ್ಮಿಸಿ ಕೊಡುತ್ತದೆ.

Advertisement

ಸ್ನೇಹವೆಂಬುದು ಮಧುವಿಗಿಂತ ಮಧುರ. ಅಷ್ಟೇ ಅಲ್ಲ ಅದು ಅಮರವೂ ಹೌದು!. ಸ್ನೇಹವನ್ನು ಅಕ್ಷರಗಳಿಂದ ಕಟ್ಟಿಕೊಡಲು ಸಾಧ್ಯವಿಲ್ಲ.. ಅದು ಹೃದಯ ಹೃದಯಗಳ ಅನುಬಂಧ… ಸ್ನೇಹದಿಂದ ಒಂದು ಹಿಡಿ ಅವಲಕ್ಕಿಯೂ ಮೃಷ್ಟಾನ್ನವಾಗುವುದು ಆ ಶಕ್ತಿ ಸ್ನೇಹಕ್ಕಿದೆ…..ನಾನು ಹೇಳೋಕೆ ಹೊರಟಿರುವುದು ಅಂಥದ್ದೇ ಒಂದು ಸುಂದರ ಸ್ನೇಹದ ಕಥೆ. ನನ್ನ ಮತ್ತು ಅವಳ ಸುಂದರ ಸ್ನೇಹದ ಕಥೆ.

ವ್ಯಾಸಂಗ ಮುಗಿಸಿ ಉದ್ಯೋಗ ಅರಸಿ ಹೊರಟ ಹೊತ್ತದು. ಓದು , ಮೋಜು, ಸುತ್ತಾಟ ಎಲ್ಲವನ್ನು ಬಿಟ್ಟು ಹೊಸ ಜಗತ್ತಿಗೆ ಹೊಂದಿಕೊಳ್ಳಲು ಅನುವಾದ ಹೊತ್ತು. ಮನದಲ್ಲಿ ಒಂದಷ್ಟು ಭಯ , ಆತಂಕ ಸಹಜವಾಗಿಯೇ ಮನೆ ಮಾಡಿತ್ತು. ಸಂಸ್ಥೆಯೊಂದರಿಂದ ಇಂಟರ್ವ್ಯೂ ಗೆ ಕರೆ ಬಂದಾಗ ಸಂತೋಷದ ಜೊತೆಗೆ ಭಯವೂ ಆಗಿತ್ತು. ಅಲ್ಲಿಯ ಜನ ಹೇಗೋ.. ?ಆಯ್ಕೆ ಹೇಗೋ ..? ಕೆಲಸದ ಆರಂಭ ಹೇಗಿರುವುದೋ ..? ಹಲವಾರು ಪ್ರಶ್ನೆಗಳು ಮನಸ್ಸನ್ನು ಕಾಡಿತು.. ಒಳ್ಳೆಯ ಮನಸ್ಸು ಗಳ ಪರಿಚಯ ಆಗುವುದರ ಜೊತೆಗೆ ಜೀವನೋಪಾಯಕ್ಕೆ ದಾರಿಯು ಸಿಕ್ಕಿತು.

Advertisement

ಅವಳು ಅಲ್ಲಿಯೇ ಸಿಕ್ಕವಳು.. ಪರಿಚಯವೇ ಇಲ್ಲದ ಹೊತ್ತಲ್ಲಿ ಪರಿಚಯ ಮಾಡಿಕೊಂಡವಳು. ಅವಳೇ ಮುದ್ದು ಮೊಗದ ಮುದ್ದು ಮನದ ಗೆಳತಿ ಪ್ರಣಮ್ಯ. ಅವಳು ಗೊಂದಲದ ಗೂಡಾದ ‌ಮನಕೆ ಸಾಂತ್ವಾನದ ಸ್ಪರ್ಶವಿತ್ತವಳು. ನಗುಮೊಗದ ಚೆಲುವೆ.. ಸದಾ ನಗುತಾ ಕೆಲಸ ಕಾರ್ಯಗಳಲ್ಲಿ ಸದಾ ಜೊತೆಗಿರುತ್ತಿದ್ದಳು. ನೀಳ ಕೂದಲಿನ ಸೆಳೆವ ಕಣ್ಣೋಟದ ಚೆಲುವೆ ನನ್ನ ಮನಸ್ಸನ್ನು ಕದ್ದವಳು. ಧೈರ್ಯಗೆಟ್ಟಾಗ ಧೈರ್ಯ ತುಂಬಿದವಳು. ಅವಳ ಪ್ರೀತಿ ಕಾಳಜಿಗೆ ಮನಸೋತವಳು ನಾನು. ಮೃದು ಮಾತಿನ ಮುದ್ದು ಅರಗಿಣಿಯ ಮಾತಿಲ್ಲದೆ ಒಂದು ದಿನವೂ ಕಳೆದ ನೆನೆಪಿಲ್ಲ. ನಿಜ! ಅವಳು ಸದಾ ಹೇಳುತ್ತಿದ್ದಳು ” ಅಪೂರ್ವ ನಾವಿಬ್ಬರೂ ಪ್ರೇಮಿಗಳು ಅಲ್ಲವೇ.”..? ಎಂದು. ಸ್ಕೂಟಿಯಲ್ಲಿ ಜೊತೆಯಲ್ಲಿ ಪಯಣಿಸಿದಾಗಲೆಲ್ಲಾ ಆ ಪಯಣಕ್ಕೆ ಜಾಲಿ ರೈಡ್ ನಾಮ ಫಲಕ ಕಟ್ಟಿ ಸುಂದರ ನೆನಪುಗಳನ್ನು ಕಟ್ಟಿ ಕೊಟ್ಟವಳು. ಅಪನಂಬಿಕೆಯಿಂದ ಸ್ನೇಹವೊಂದು ದೂರಾದಾಗ ಕಣ್ಣ ಹನಿ ಭುವಿಯನ್ನು ಸ್ಪರ್ಶಿಸದಂತೆ ಜೋಪಾನ ಮಾಡಿದವಳು ಅವಳು. ಯಾವುದೋ ಕಾರಣದಿಂದ ಸಂಸ್ಥೆಯನ್ನು ಬಿಟ್ಟು ಹೊರಟಾಗ ಒಲವಿನ ಓಲೆಯೊಂದನ್ನು ಕೈಗಿತ್ತು ನಮ್ಮ ಈ ಸ್ನೇಹದ ನೆನಪು ಅಮರ ಎಂದಾಗ ಅವಳ ಕಣ್ಣಂಚು ಒದ್ದೆಯಾಗಿತ್ತು. ಒಂದು ವರ್ಷದ ಆ ಸ್ನೇಹದ ನಂಟು ಬಿಡಿಸಲಾಗದ ನಂಟಾಗಿತ್ತು. ಕಾಳಜಿ ಮಾಡುವುದರಲ್ಲಿ ಅವಳು ಅಮ್ಮನಂತೆ. ಇಂದು ನಾವು ದೂರ ದೂರವಿದ್ದೇವೆ. ದಿನಕ್ಕೊಮ್ಮೆ ಫೋನಿಲ್ಲ.. ಆದರೆ ನೆನಪಾದಗಲೆಲ್ಲ ಫೋನ್ ಮಾಡುವ ಆಕೆ ಈಗಲು ಅದೇ ಕಾಳಜಿ ಅದೇ ಪ್ರೀತಿ. ಮನಕ್ಕೆಂದೂ ಅವಳಿಂದ ದೂರಾದ ಅನುಭವವಾಗಿಲ್ಲ. ಯಾಕೆಂದರೆ ಅವಳು ಇಂದೂ ನನ್ನ ಮನದಲ್ಲಿ ಇದ್ದಾಳೆ. ದಿನಕ್ಕೊಮ್ಮೆಯಾದರೂ ಮೌನವಾಗಿ ಅವಳೊಂದಿಗೆ ಮಾತನಾಡುತ್ತಿರುತ್ತೇನೆ. ಅವಳು ಬರೆದಿರುವ ಓಲೆಯನ್ನು ಜೋಪಾನವಾಗಿ ತೆಗೆದಿಟ್ಟಿರುವೆ. ಅದು ನನಗೆ ದೊರೆತ ಮೊದಲ ಪ್ರೇಮದೋಲೆ. ನಿಜ! ಅವಳು ಗೆಳತಿಯಲ್ಲ. ಗೆಳೆಯನಂತೆ.. ನನ್ನ ಮನಸ್ಸು ಸದಾ ಹೇಳುತ್ತಿರುವುದೊಂದೆ ಅವಳು ಗೆಳತಿಯಲ್ಲ , ಗೆಳೆಯನಾಗಿರಬೇಕಿತ್ತು.. ಸದಾ ಕಾಳಜಿ ವಹಿಸುವ ಆಕೆ ಸ್ನೇಹಿತೆಯಲ್ಲ ಪ್ರೇಮಿಯಾಗಿರಬೇಕಿತ್ತು. ಅವಳ ಭುಜದ ಮೇಲೆ ನನ್ನ ಶಿರವನ್ನಿಟ್ಟು ಅವಳ ಕೈಗಳ ಹಿಡಿದು ಒಲವಿನೋಲೆಯ ಹಾಡಬೇಕಿತ್ತು.. ಇದು ಮನಸ್ಸಿನ ಎಂದೂ ನನಸಾಗದ ಬಯಕೆ. ಅವಳ ಒಲವಿಗೆ ನಾ ಸದಾ ಋಣಿ. ಹೂ ಮನಸ್ಸಿನ ಹುಡುಗಿಯ ಸ್ನೇಹದ ನಂಟು, ನನ್ನ ಬಾಳಲ್ಲಿ ಮರೆಯಲಾಗದ ನೆನಪಿನ ಗಂಟು..

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror