ಸುಳ್ಯ: ಶಾಸಕ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಸುಳ್ಯ ಬಿಜೆಪಿ ಘೋಷಿಸಿರುವ ಅಸಹಕಾರ ಚಳವಳಿಯ ಕಾರಣದಿಂದ ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ವೇದಿಕೆ ಮಾತ್ರ ಖಾಲಿ ಖಾಲಿಯಾಗಿತ್ತು. ಅಸಹಕಾರ ಚಳವಳಿ ಘೋಷಿಸಿದ ಬಳಿಕ ಬಿಜೆಪಿ ನಾಯಕರು, ಕೆಲವು ಜನಪ್ರತಿನಿಧಿಗಳು ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ ತಾಲೂಕಿನಲ್ಲಿ ಜನಪ್ರತಿನಿಧಿಗಳ ಅಸಹಾಕಾರ ಮುಂದುವರಿದಿದೆ.
ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಬೇಕಿದ್ದ ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಆಶಾ ತಿಮ್ಮಪ್ಪ, ಪುಷ್ಪಾವತಿ ಬಾಳಿಲ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಸಮಾರಂಭಕ್ಕೆ ಪ್ರತಿ ಬಾರಿ ಆಗಮಿಸುತ್ತಿದ್ದ ಇತರ ಬಿಜೆಪಿ ಜನಪ್ರತಿನಿಧಿಗಳು ಕೂಡ ಭಾಗವಹಿಸಲಿಲ್ಲ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಶಾಸಕ ಎಸ್.ಅಂಗಾರ ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿ ಉದ್ಘಾಟನೆ ನೆರವೇರಿಸಿ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿ ತೆರಳಿದರು.
ಕಾರಣಗಳು ಯಾವುದೇ ಇರಬಹುದು, ಕಾರಣಗಳು ನೂರು ಇರಬಹುದು ಆದರೆ ಶಿಕ್ಷಕರ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಈ ರೀತಿ ಸಾಮೂಹಿಕವಾಗಿ ಗೈರು ಹಾಜರಾಗಿರುವುದು ಮಾತ್ರ ಒಪ್ಪುವಂತದಲ್ಲ ಎಂಬ ಅಭಿಪ್ರಾಯ ವೇದಿಕೆಯಿಂದ ಮತ್ತು ಸಭಾಂಗಣದಿಂದ ಕೇಳಿ ಬಂತು.
“ಕಾರಣ ಏನೇ ಇದ್ದರೂ, ಶಿಕ್ಷಕರನ್ನು ಗೌರವಿಸುವ ರೀತಿ ಇದಲ್ಲ” ಎಂಬ ಅಭಿಪ್ರಾಯವನ್ನು ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ಮಾಡಿದ ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ವ್ಯಕ್ತಪಡಿಸಿದರು.
ಸತ್ಯಕ್ಕೆ, ಪ್ರಮಾಣಿಕತೆಗೆ ಬೆಲೆ ಇದೆ ಎಂದು ನಂಬಿದ್ದೇನೆ – ಅಂಗಾರ
ಸಚಿವ ಸ್ಥಾನ ತಪ್ಪಿದ ಮತ್ತು ಬಳಿಕದ ರಾಜಕೀಯ ಬೆಳವಣಿಗೆಯ ನಂತರ ಸುಳ್ಯದಲ್ಲಿ ನಡೆದ ಪ್ರಮುಖ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ ಶಾಸಕ ಅಂಗಾರರು ಸಚಿವ ಸ್ಥಾನ ತಪ್ಪಿ ಹೋಗಿರುವ ಬಗ್ಗೆ ನೇರವಾಗಿ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಸತ್ಯಕ್ಕೆ, ಪ್ರಾಮಾಣಿಕತೆಗೆ ಒಂದಲ್ಲಾ ಒಂದು ದಿನ ಬೆಲೆ ಸಿಕ್ಕಿಯೇ ಸಿಗುತ್ತದೆ ಎಂಬ ನಂಬಿಕೆವಿದೆ. ಆ ನಂಬಿಕೆಯ ಆಧಾರದಲ್ಲಿಯೇ ಕೆಲಸ ಮಾಡಿದ್ದೇನೆ. ಮುಂದೆಯೂ ಆ ನಂಬಿಕೆಯ ಆಧಾರದಲ್ಲಿಯೇ ಕೆಲಸವನ್ನು ಮುಂದುವರಿಸುತ್ತೇನೆ ಎಂದಷ್ಟೇ ತಮ್ಮ ಭಾಷಣದಲ್ಲಿ ಹೇಳಿದರು.