ಪುತ್ತೂರು: ಇಲ್ಲಿನ ನೆಹರೂ ನಗರದ ವಿವೇಕಾನಂದ ಕಾಲೇಜಿನಲ್ಲಿ ಮಾನವಿಕ ವಿಭಾಗಗಳು, ಐಕ್ಯುಎಸಿ ಘಟಕ, ಕನ್ನಡ ಸಂಘ, ನೇಚರ್ ಕ್ಲಬ್ ಹಾಗೂ ಸ್ನಾತಕೋತ್ತರ ವಿಭಾಗಗಳ ಸಹಯೋಗದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಬರೆದ ‘ಕಲ್ಪಲತಾ’ ಸಾಂಪ್ರದಾಯಿಕ ಔಷಧಗಳ ಕೃತಿ ಲೋಕಾರ್ಪಣಾ ಸಮಾರಂಭ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಅ.1ರಂದು ನಡೆಯಲಿದೆ.
ಅಪರಾಹ್ನ 2ಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ.ಜಯರಾಮ ಭಟ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವಿ.ಬಿ. ಅರ್ತಿಕಜೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಡಬದ ಆಯುರ್ವೇದ ವೈದ್ಯ ಡಾ. ಸುರೇಶ್ ಕೂಡೂರು ಕೃತಿ ಪರಿಚಯ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಡಾ.ಪೀಟರ್ ವಿಲ್ಸನ್ ಪ್ರಭಾಕರ್:
ಸುಮಾರು ನಾನ್ನೂರೈವತ್ತಕ್ಕೂ ಅಧಿಕ ಲೇಖನಗಳು, ಅಸಂಖ್ಯ ಸಂಶೋಧನಾ ಬರಹಗಳು ರಾಜ್ಯ ರಾಷ್ಟ್ರದ ಪತ್ರಿಕೆಗಳಲ್ಲಿ ಹಾಗೂ ಸಂಶೋಧನಾ ಗ್ರಂಥಗಳಲ್ಲಿ ಪ್ರಕಟಗೊಂಡಿವೆ. ಜತೆಗೆ ಹಂಪಿ ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿರುವ ಪಿಎಚ್.ಡಿ. ಹಾಗೂ ಎಂ.ಫಿಲ್. ಸಂಶೋಧನಾ ಮಾರ್ಗದರ್ಶಕರಾಗಿಯೂ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ಶಿಕ್ಷಣ ಕ್ಷೇತ್ರದಲ್ಲೂ ತಜ್ಞತೆಯನ್ನು ಹೊಂದಿರುತ್ತಾರೆ. 1983ರಿಂದಲೇ ಬರವಣಿಗೆಯತ್ತ ಆಸಕ್ತಿ ತಾಳಿ, ಅಂಕಣಕಾರನಾಗಿ, ಲೇಖಕನಾಗಿ ಬೆಳೆದುಬಂದಿರುತ್ತಾರೆ. ಬಾಸೆಲ್ ಮಿಷನ್ ಇನ್ ಸೌತ್ ಕೆನರಾ ಎಂಬ ವಿಷಯದ ಬಗೆಗೆ ಸಂಶೋಧನೆ ನಡೆಸಿ 1988ರಲ್ಲಿ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಮಾತ್ರವಲ್ಲದೆ 2018ರ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದ ಸಾಧಕ ಎಂಬ ಪುರಸ್ಕಾರವೂ ದೊರೆತಿದೆ.
ಸುಮಾರು ಇಪ್ಪತ್ತಕ್ಕಿಂತಲೂ ಅಧಿಕ ಕೃತಿಗಳನ್ನು ಪ್ರಕಟಿಸಿರುವ ಡಾ.ಪೀಟರ್ ಅವರ ವಿಟ್ಲದ ಕ್ರಾಂತಿ, ಪುತ್ತೂರು ತಾಲೂಕು ಇತಿಹಾಸ ದರ್ಪಣ, ಸತ್ಯಮಿತ್ರ ಬಂಗೇರ, ಕರಾವಳಿ ಕರ್ನಾಟಕದಲ್ಲಿ ಬಾಸೆಲ್ ಮಿಷನ್, ಚೌಟ ಅರಸುಮನೆತನ, ದ.ಕ.ದಲ್ಲಿ ಸ್ವಾತಂತ್ರ್ಯ ಹೋರಾಟ, ದಕ್ಷಿಣ ಕನ್ನಡದ ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರ ಪಾತ್ರ, ಮಂಗಳೂರು ಹಂಚುಗಳು, ದಕ್ಷಿಣ ಕನ್ನಡದಲ್ಲಿ ಬಾಸೆಲ್ ಮಿಷನ್ ಇವೇ ಮೊದಲಾದ ಕನ್ನಡ ಕೃತಿಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ ಹಾಗೂ ವಾರ್ಸ್, ಪ್ರಾಕ್ಸಿ ವಾರ್ಸ್ ಅಂಡ್ ಟೆರರಿಸಮ್ – ಪೋಸ್ಟ್ ಇಂಡೆಪೆಂಡೆಂಟ್ ಇಂಡಿಯ ಎಂಬ ಇಂಗ್ಲಿಷ್ ಕೃತಿ ಅಪಾರ ಮನ್ನಣೆ ಪಡೆದಿವೆ. ಮಾತ್ರವಲ್ಲದೆ ಈ ಗ್ರಂಥ ಸುಮಾರು 170ಕ್ಕೂ ಅಧಿಕ ದೇಶಗಳ ಆನ್ ಲೈನ್ ಗ್ರಂಥಾಲಯಗಳಲ್ಲಿ ಲಭ್ಯವಿದೆ. ಅಲ್ಲದೆ ಅನೇಕ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ಈ ಕೃತಿಯನ್ನು ಪರಾಮರ್ಶನ ಗ್ರಂಥವಾಗಿ ಗುರುತಿಸಿವೆ. ಅಂತೆಯೇ ಗೂಗಲ್ ವೆಬ್‍ಸೈಟ್ ಈ ಕೃತಿಯನ್ನು ಪ್ರಪಂಚದ ‘ಇಪ್ಪತ್ತೆಂಟು ವಿದ್ವತ್ಪೂರ್ಣ ಕೃತಿಗಳಲ್ಲೊಂದು’ ಎಂದು ಗುರುತಿಸಿರುವುದು ಹಾಗೂ ಡಾ.ಪೀಟರ್ ಅವರನ್ನು ಗೂಗಲ್ ಸ್ಕಾಲರ್ ಎಂದು ಪರಿಗಣಿಸಿರುವುದು ಮಹತ್ವಪೂರ್ಣ ಸಂಗತಿ.