ಸುಳ್ಯ: ಪೈಚಾರು ಶಾಂತಿನಗರ ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ 7 ನೇ ವರ್ಷದ ವಾರ್ಷಿಕೋತ್ಸವದ ಸಲುವಾಗಿ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಹಾಗೂ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಇದರ ಸಹಯೋಗದೊಂದಿಗೆ ಅ.6 ರಂದು ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ಜರಗಲಿರುವುದು ಎಂದು ದೀಪಾಂಜಲಿ ಮಹಿಳಾ ಮಂಡಲದ ಅಧ್ಯಕ್ಷೆ ಹರ್ಷ ಕರುಣಾಕರ ಸೇರ್ಕಜೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೀತಾರಾಮ ಕಲ್ಯಾಣೋತ್ಸವವು ಶ್ರೀ ಶಂಕರ ಭಕ್ತಿ ಚಾನೆಲ್ ನ ಭಜನಾ ಸಾಮ್ರಾಟ್ ನಿರ್ಣಾಯಕರಾದ ಹ.ರಾ.ನಾಗರಾಜಾಚಾರ್ಯ ಬೆಂಗಳೂರು ಇವರ ಉಪಸ್ಥಿತಿಯಲ್ಲಿ ನಡೆಯಲಿರುವುದು. ಕಾರ್ಯಕ್ರಮವು ಸಂಜೆ 5 ಗಂಟೆಗೆ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಮತ್ತು ಕನಕದಾಸ ಮಕ್ಕಳ ಭಜನಾ ಮಂಡಳಿ ಕನಕಮಜಲು ಇದರ ಸದಸ್ಯರಿಂದ ಭಜನೆಯ ಮೂಲಕ ಆರಂಭವಾಗಲಿದೆ. ನಂತರ ಗಂಟೆ 5.30 ರಿಂದ 6.30 ರ ತನಕ ಸಭಾ ಕಾರ್ಯಕ್ರಮ ನಡೆಯಲಿದ್ದು ಹ.ರಾ.ನಾಗರಾಜಾಚಾರ್ಯ ದ್ವೀಪ ಪ್ರಜ್ವಲನೆ ಮಾಡುವರು. ಸುಳ್ಯ ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ದಾಸ ಸಂಕೀರ್ತನಕಾರರಾದ ರಾಮಕೃಷ್ಣ ಕಾಟುಕುಕ್ಕೆ ಯವರಿಗೆ ಗುರುವಂದನೆ ಸಲ್ಲಿಸಲಾಗುವುದು. ಅತಿಥಿಗಳಾಗಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಸುಳ್ಯ ತಾಲೂಕು ಭಾರತೀಯ ಮಜ್ದೂರು ಸಂಘ ಅಧ್ಯಕ್ಷ ಗೋಪಾಲಕೃಷ್ಣ ಭಟ್, ದ.ಕ.ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮತ್ತು ದೀಪಾಂಜಲಿ ಭಜನಾ ಮಂಡಳಿಯ ಗೌರವ ಸಲಹೆಗಾರರಾದ ಸುಮಾ ಸುಬ್ಬಾರಾವ್, ಶ್ರೀ ಶಾರದಾಂಬಾ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್ ಉಪಸ್ಥಿತರಿರುತ್ತಾರೆ.
ನಿರಂತರ ನಾಲ್ಕು ಗಂಟೆಗಳ ಕಾಲ ಸೀತಾರಾಮ ಕಲ್ಯಾಣೋತ್ಸವದ ಪೂಜಾ ಕೈಂಕರ್ಯವು ನಡೆಯಲಿರುವುದು. ಈ ಸಂದರ್ಭದಲ್ಲಿ ಭಜನಾ ಸೇವೆಯು ನಡೆಯಲಿರುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗೋಪಾಲಕೃಷ್ಣ ಭಟ್, ಭಜನಾ ಮಂಡಳಿಯ ಪದಾಧಿಕಾರಿಗಳಾದ ಹೇಮಲತಾ ದೇಂಗೋಡಿ, ಕುಸುಮಾ ಮೋಂಟಡ್ಕ ಉಪಸ್ಥಿತರಿದ್ದರು.