ಬೆಂಗಳೂರು: ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಸದಸ್ಯರು ಹಿರಿಯ ಸಾಹಿತಿ ಹಾಗು ಚಿಂತಕ ಚಿದಾನಂದ ಮೂರ್ತಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಸಾಹಿತಿ ದೊಡ್ಡರಂಗೇಗೌಡರು ಹಿಂದಿನ ಸರಕಾರ ಜಾರಿ ಮಾಡಿದ ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾದ್ಯಮ ಶಿಕ್ಷಣ ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಇಂಗ್ಲೀಷ್ ಮಾಧ್ಯಮದಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ. ಹಾಗಾಗಿ ಕೂಡಲೇ ಹಿಂದಿನ ಸರಕಾರದ ನಿರ್ಧಾರವನ್ನು ಹಿಂದಕ್ಕೆ ಪಡೆದು ಕನ್ನಡ ಉಳಿಸಬೇಕು ಅಂತ ಒತ್ತಾಯ ಮಾಡಿದರು. ನಾವು ಯಾರು ಇಂಗ್ಲಿಷ್ ಭಾಷೆಯ ವಿರೋಧಿಗಳಲ್ಲ ಆದರೆ ಒಂದು ಶಿಕ್ಷಣ ಮಾದ್ಯಮವಾಗಿ ಕಲಿಯಲು ನಮ್ಮ ವಿರೋಧವಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಹಾಗೂ ಚಿಂತಕರಾದ ಚಿದಾನಂದ ಮೂರ್ತಿ ಅವರು ಮಾತನಾಡಿ. ಸಂಖ್ಯೆ ದೃಷ್ಟಿಯಲ್ಲಿ ಖಾಸಗಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಗಿಂತ ಸರಕಾರಿ ಶಾಲೆಗಳಿಗೆ ಹೋಗುವವರ ವಿದ್ಯಾರ್ಥಿಗಳ ಸಂಖ್ಯೆ ತುಂಬ ಕಡಿಮೆ ಇದೆ ಹಾಗಾಗಿ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಮಾಡುವತ್ತ ಸರಕಾರ ಗಮನ ಹರಿಸಬೇಕು ಅಂತ ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿದರು.
ಸಾಹಿತಿ ಗೋ ರು ಚನ್ನಬಸಪ್ಪ ಅವರು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ರೀತಿಯ ಪ್ರಯೋಗಗಳನ್ನು ಮಾಡದೆ ಒಂದನೇ ತರಗತಿಯಿಂದ 7 ನೇ ತರಗತಿವರೆಗೆ ಯಾವುದೇ ರೀತಿಯ ಭಾಷೆ ಬದಲಾವಣೆ ಆಗದಂತೆ ಹೊಸ ಕಾನೂನು ರಚನೆ ಮಾಡಬೇಕು ಎಂದು ತಿಳಿಸಿದರು.
ಸಾಹಿತಿಗಳ ಅಭಿಪ್ರಾಯಗಳನ್ನು ಆಲಿಸಿದ ಮುಖ್ಯಮಂತ್ರಿಗಳು ಶೀಘ್ರವೇ ಶಿಕ್ಷಣ ತಜ್ಞರು, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಚಿದಾನಂದ ಮೂರ್ತಿ ದೊಡ್ಡ ರಂಗೇಗೌಡ ಗೋರು ಚನ್ನಬಸಪ್ಪ ಎಂಎಲ್ ಸಿ ಅಶ್ವಥನಾರಾಯಣ್ ಸೇರಿದಂತೆ ಹಲವು ಕನ್ನಡ ಹೋರಾಟಗಾರರು ಹಾಗು ಸಾಹಿತಿಗಳು ಸಭೆಯಲ್ಲಿ ಭಾಗವಹಿಸಿದ್ದರು