ಆಟೋಗ್ರಾಫ್ ಪ್ಲೀಸ್…..

March 3, 2020
9:49 AM

ಮಗನ ಶಾಲೆಯಲ್ಲಿ ಬೇಸಿಗೆ ಶಿಬಿರ ಆರಂಭವಾಗಿತ್ತು. ಅಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಲವು ವಿಷಯಗಳಲ್ಲಿ ಸಾಧನೆ ಮಾಡಿದವರು‌ ಭಾಗವಹಿಸುವವರಿದ್ದರು. ಆ ಹೆಸರುಗಳನ್ನು ನೋಡುವಾಗ ಬಾಲ್ಯದ ದಿನಗಳು ಕಣ್ಣಮುಂದೆ ಬಂತು. ಬೇಸಿಗೆ ಶಿಬಿರದಲ್ಲಿ ನಮಗೆ ಮಾರ್ಗದರ್ಶನ ಮಾಡಿದವರಲ್ಲಿ ಗೋಪಾಡ್ಕರ್ ಅವರು ಒಬ್ಬರು. ಮಗನ ಶಾಲೆಯ ಶಿಬಿರದಲ್ಲಿ ಅವರು ಪಾಲ್ಗೊಳ್ಳಲಿದ್ದರು. ಎಲ್ಲಾ ಸಂಪನ್ಮೂಲ ವ್ಯಕ್ತಿಗಳಲ್ಲಿ ಆಟೋಗ್ರಾಫ್ ತೆಗೆದುಕೊಳ್ಳುವ ಅಭ್ಯಾಸ ನಮಗಿತ್ತು. ಸುಮಾರು 24 ವರುಷಗಳ ಹಿಂದಿನ ಶಿಬಿರದಲ್ಲಿ ‌ಗೋಪಾಡ್ಕರ್ ಅವರು ಬರೆದ ಆಟೋಗ್ರಾಫ್ ಜೋಪಾನವಾಗಿ ನನ್ನ ಬಳಿ ಇತ್ತು . ಮಗನಲ್ಲೂ ತಗೋಳ್ಳಲು ಹೇಳಿದೆ. ಆ ಬರಹಗಳೆರಡೂ ಇಂದು ಕೈಗೆ ಸಿಕ್ಕಿತು. ಹಾಗೇ ಆಟೋಗ್ರಾಫ್  ಪುಸ್ತಕದೊಂದಿಗಿನ ಒಂದೊಂದೇ ನೆನಪುಗಳು ಬಿಚ್ಚಿಕೊಳ್ಳತೊಡಗಿದವು.

Advertisement
Advertisement
Advertisement

ಹೊಸವರುಷದ ಶುಭಾಶಯ ವಿನಿಮಯದೊಂದಿಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಕೈಯಲ್ಲಿ ಕಾಣುವ ಒಂದು ಅಮೂಲ್ಯ ಪುಸ್ತಕವೇ ನೆನಪಿನ ಹೊತ್ತಗೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ ತೆರಳುವ ವಿದ್ಯಾರ್ಥಿಗಳು ತಮ್ಮೊಂದಿಗೆ ಶಾಲಾ ದಿನಗಳ ನೆನಪುಗಳನ್ನು ತಮ್ಮ ಜೊತೆಗೊಯ್ಯಲು ಇಚ್ಚಿಸುತ್ತಾರೆ. ಹಾಗಾಗಿ ಆ ನೆನಪುಗಳ ಮುದ್ರಣ ಮಾಧ್ಯಮವಾಗಿ ಜೊತೆಗಿರುವ ಪುಸ್ತಕಗಳೇ ಆಟೋಗ್ರಾಫ್ . ಇಂದಿನ ಮಕ್ಕಳಿಗೆ ಇದರ ಪ್ರಸ್ತುತೆ ಎಷ್ಟು ‌ಅರ್ಥವಾಗುತ್ತದೋ ತಿಳಿಯದು. ನಮ್ಮ ಶಾಲಾ ದಿನಗಳಲ್ಲಿ ಸಂಪರ್ಕ ಸೇತುವಾಗಿರುತ್ತಿದ್ದ ಕಾಗದ ಪತ್ರಗಳು ಇಂದು ಇಲ್ಲವೇ ಇಲ್ಲವೆನ್ನಬಹುದು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಗಳು ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ . 10 ವರುಷಗಳ ದೀರ್ಘಾವಧಿಯ ಈ ಸಮಯದಲ್ಲಿ ಜೊತೆಗಿರುವ ಮಕ್ಕಳಲ್ಲಿ ಆತ್ಮೀಯತೆ ಮೂಡಿರುತ್ತದೆ. ಆಮೇಲಿನ ಶಿಕ್ಷಣ ಅವರವರ ಆದ್ಯತೆಯ ಮೇರೆಗೆ ಬೇರೆ ಬೇರೆ ಕಡೆಗಳಿಗೆ ಶಿಕ್ಷಣಕ್ಕಾಗಿ ತೆರಳುತ್ತಾರೆ. ಅಷ್ಟರವರೆಗೆ ಒಂದೇ ಶಾಲೆಯಲ್ಲಿ, ತರಗತಿಯಲ್ಲಿ ಒಟ್ಟಿಗೆ ಕುಳಿತು ಕಲಿತವರು ಅಗಲುವ ಸಮಯದಲ್ಲಿ ತಮ್ಮ ಸವಿನೆನಪುಗಳನ್ನು ಬರೆದು ಭಾವನೆಗಳನ್ನು ವ್ಯಕ್ತಪಡಿಸುವ ಪುಸ್ತಕ ವೇ ಆಟೋಗ್ರಾಫ್.

Advertisement

ಒಂದು ಹಂತದ ಶಿಕ್ಷಣ ಮುಗಿದು ಮುಂದಿನ ಹಂತಕ್ಕೆ ತೆರಳುವಾಗ ಬೇರೆ ಬೇರೆಯಾಗುವ ಕ್ಲಾಸ್ ಮೇಟ್ ಗಳು ಭವಿಷ್ಯದಲ್ಲಿ ಭೇಟಿಯಾಗುವ ಸಂಧರ್ಭ ತುಂಬಾ ಕಡಿಮೆ. ಒಂದೇ ಊರಿನವರಾಗಿದ್ದರೆ, ಸಂಬಂಧಿಗಳಾಗಿದ್ದರೆ, ಒಂದೇ ಉದ್ಯೋಗದವರಾಗಿದ್ದರೆ ಭೇಟಿಯಾಗಬಹುದೇನೋ. ಇದರ ಹೊರತಾಗಿ ಸಂಪರ್ಕವಿಟ್ಟುಕೊಳ್ಳಲು ಟೆಲಿಫೋನ್, ಕಾಗದಪತ್ರಗಳೇ ಆಗಬೇಕಿತ್ತು. ಹಾಗಾಗಿ ವಿಳಾಸ, ಫೋನ್ ನಂಬರ್ ಗಳ ವಿನಿಮಯದಲ್ಲಿ ಅಟೋಗ್ರಾಫ್ ಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ತರಗತಿಯ ಕೊನೆಯ ಹಂತದ ಚಟುವಟಿಕೆಗಳು ನಡೆಯುತ್ತಿರುತ್ತವೆ.‌ ಒಂದೆಡೆಯಲ್ಲಿ ಸಿಲೆಬಸ್ ಮುಗಿಸುವ ಉಪನ್ಯಾಸಕರ ಧಾವಂತ, ಅದರ ಜೊತೆಗೆ ಅಪೂರ್ಣ ನೋಟ್ಸ್ ಗಳನ್ನು ಬರೆದುಕೊಳ್ಳುವ ಗಡಿಬಿಡಿ . ಹಾಜರಾತಿ, ಇಂಟರ್ನಲ್ಸ್ ಗಳ ಗೊಂದಲಗಳ ತಲೆಬಿಸಿ, ಓಹ್ ಇದರ ನಡುವೆ ಅಟೋ ಗ್ರಾಫ್‌ ಸಂಗ್ರಹ ದ ಸಂತಸದ ಕೆಲಸ! ಹೌದು ಮತ್ತೆ . ಇಷ್ಟು ದಿನ ಓದಲಿಲ್ಲವಾ, 4 ದಿನ ಜೊತೆಗಿರೋದು ಇನ್ನೂ ಮುಂದೆ ಸಿಗುತ್ತೇವೋ ಇಲ್ಲವಾ ಎಂಬ ಬೇಸರದಲ್ಲಿ ಪರೀಕ್ಷೆಯ ನಿರೀಕ್ಷೆಯಲ್ಲಿ ಸಮಯ ಕಳೆದುದೇ ಗೊತ್ತಾಗದು. ಎಲ್ಲರಿಗೂ ಬರೆಯಲು ಕೊಡುತ್ತಾ ,ನಾವು ಬರೆಯುತ್ತಾ , ಪರೀಕ್ಷೆಗೆ ತಯಾರಾಗುತ್ತಾ ಸಮಯ ಕಳೆಯುವುದೇ ಗೊತ್ತಾಗದು. ಯಾರು ಏನು ಬರೆದರೆಂದು ಓದುವುದು ಪರೀಕ್ಷೆ ಗಳು ಕಳೆದ ಮೇಲೆ ಎಂದುಕೊಂಡರೂ ಓದಿನ ನಡುವೆ ಇಣುಕಿ ನೋಡುವುದೂ ಖುಷಿಯೇ.

ಕೆಲವರು ಶಾಲಾ ಕಾಲೇಜುಗಳಲ್ಲಿ ಹಲವು ಕಾರಣಗಳಿಂದ ಪ್ರಸಿದ್ಧರಾಗಿರುತ್ತಾರೆ. ಅವರ ಬಳಿ ಅಟೋಗ್ರಾಪ್ ಗಾಗಿ ಎಲ್ಲರೂ ಮುಗಿಬೀಳುತ್ತಾರೆ. ಹತ್ತು ,ಇಪ್ಪತ್ತು ಪುಸ್ತಕಗಳು ಒಟ್ಟಿಗೆ ಸಿಕ್ಕಿದರೆ ಅವರು ತಾನೇ ಏನು ಮಾಡಿಯಾರು . ಹೋಲ್ ಸೇಲ್ ಆಲ್ ದಿ ಬೆಸ್ಟ್ ಬರೆದು ಗೀಚಿದ ಸಹಿ ಹಾಕಿ ಕೊಟ್ಟರೆ ಅದನ್ನೇ ಗ್ರೇಟ್ ಎಂದು ತಿಳಿಯುವವರಿದ್ದಾರೆ. ಇನ್ನೂ ಕೆಲವರಿದ್ದಾರೆ ಪರೀಕ್ಷೆಗಾದರು ಅಷ್ಟು ಶ್ರದ್ಧೆಯಿಂದ ಬರೆದಿರಲಿಕ್ಕಿಲ್ಲ , ಅಟೋ ಗ್ರಾಫ್‌ ಮಾತ್ರ ಮುತ್ತಿನಂತಹ ಬರಹದಲ್ಲಿ ರಾರಾಜಿಸಿರುತ್ತದೆ. ವ್ಯಾಕರಣ ದೋಷವಿಲ್ಲದೆ, ಪ್ರಾಸ ಬದ್ಧವಾದ ಹಾಡುಗಳನ್ನು ರಚಿಸುತ್ತಾ ಬರೆದ ಬರಹಗಳು ಎಂದು ಓದಿದರೂ ಮನತಟ್ಟುತ್ತವೆ. ಶಾಲಾ ದಿನಗಳಲ್ಲಿ ಓದುವಾಗ ಏನೂ ಅನ್ನಿಸಿರುವುದಿಲ್ಲ. ಈಗ ಅವುಗಳಲ್ಲಿ ಕೆಲವರು ಬರೆದ ವಾಕ್ಯಗಳು ಕಣ್ಣೀರು ತರಿಸುವಂತಿರುತ್ತವೆ. ಯಾಕೆ ಹೀಗೆ ಬರೆದರು ಎಂದು ಯೋಚಿಸಿದರೆ ಹೊಳೆಯುವುದಿಲ್ಲ. ಆದರೆ ಅವರಿಂದು ಜೀವಂತವಿಲ್ಲವೆಂದಾಗ ಮನಸು ಪಿಚ್ಚೆನಿಸುತ್ತದೆ.

Advertisement

ಇನ್ನೂ ಕೆಲವೊಮ್ಮೆ ಅಧಿಕ ಪ್ರಸಂಗ ಮಾಡಿ ,ಏನೆನೋ ಬರೆದು ಹೆಡ್ ಮಾಸ್ಟರ್ ಆಟೋಗ್ರಾಫ್ ಪುಸ್ತಕವನ್ನು ಸೀಜ್ ಮಾಡಿದ್ದೂ ಇದೆ.
ಇವೆಲ್ಲ ನಮ್ಮಂತಹ ಜನಸಾಮಾನ್ಯರ ಕಥೆಯಾದರೆ ಸೆಲೆಬ್ರಿಟಿಗಳ ಪಡಿಪಾಟಲು ಕೇಳಬೇಡಿ. ಹೋದಲ್ಲಿ ಬಂದಲ್ಲಿ ಮುತ್ತಿಕೊಳ್ಳುವ ಅಭಿಮಾನಿಗಳು ಹಿಂದೆ ಆಟೋಗ್ರಾಫ್ ಗೆ ಮುಗಿಬೀಳುತ್ತಿದ್ದರು.

ಇಂದು ಸೆಲ್ಫಿ ಯುಗವಲ್ಲವೇ , ಫೋಟೋ ತೆಗೆಸಿಕೊಳ್ಳಲೇ ಉಮ್ಮೇದು. ಕೆಲವರಂತು ಆಟೋ ಗ್ರಾಫ್ ಗೆ ಬೇಕಾಗಿ ಎನೆಲ್ಲಾ ಕಷ್ಟ ಪಟ್ಟಿದ್ದಾರೋ.‌ ಖ್ಯಾತ ಸಾಹಿತಿಗಳು , ಸಿನೆಮಾ ನಟರು, ಕ್ರಿಕೆಟ್ ಆಟಗಾರರು ಮೊದಲಾದವರ ಕೈ ಬರಹ, ಸಹಿಗಾಗಿ ಕಾಯುತ್ತಿದ್ದ ದೃಶ್ಯಗಳನ್ನು ಮಾದ್ಯಮಗಳಲ್ಲಿ ಕಂಡು ಆಶ್ಚರ್ಯಗೊಂಡದ್ದಿದೆ. ಒಬ್ಬ ಹುಚ್ವು ಅಭಿಮಾನಿ ಸೋನು ನಿಗಮ್ ನ ಅಟೋಗ್ರಾಪ್ ನ್ನು ತನ್ನ ಟೀ ಶರ್ಟ್ನಲ್ಲಿ ಬರೆಸಿಕೊಂಡು ಎಷ್ಟೋ ದಿನಗಳ‌ ಕಾಲ ಅದೇ ಬಟ್ಟೆ ಧರಿಸಿಕೊಂಡು ಓಡಾಡಿದ ವಿಷಯ ಪತ್ರಿಕೆಯಲ್ಲಿ ಓದಿದ ನೆನಪು. ನಾವು ಕಾಗದ ಬರೆದು ಕೇಳಿಕೊಂಡರೆ ಸ್ಟೆಫಿಗ್ರಾಫ್ ಅಟೋಗ್ರಾಪ್ ಕಳಿಸುತ್ತಾರೆ ಎಂದು ಯಾರೋ ಹೇಳಿದರೆಂದು ನಾನು ಬರೆದು ಅಂಚೆ ಮಾವನಲ್ಲಿ ತಿಂಗಳುಗಟ್ಟಲೆ ಕೇಳಿ ತಲೆ ತಿಂದದ್ದು ನೆನಪಿಗೆ ಬರುತ್ತಿದೆ. ಇಂದು ಸ್ಲಾಮ್ ಬುಕ್ ಎಂಬ ಹೊಸ ರೂಪದಲ್ಲಿ ಅಟೋಗ್ರಾಪ್ ಶಾಲಾ ಕಾಲೇಜುಗಳಲ್ಲಿ ಪರಿಚಿತವಾಗಿದೆ . ಹಳೆಯ ನೆನಪುಗಳ ಒಂದು ಕೀಲಿ ಕೈ ಈ ಆಟೋಗ್ರಾಫ್ ಎಂದರೆ ತಪ್ಪಾಗಲಾರದೇನೋ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು
January 23, 2025
11:24 AM
by: ಪ್ರಬಂಧ ಅಂಬುತೀರ್ಥ
ಮುಂಜಾನೆ ಏಳಬೇಕು, ಬೇಗನೇ ಏಳಬೇಕು
January 16, 2025
7:29 AM
by: ಡಾ.ಚಂದ್ರಶೇಖರ ದಾಮ್ಲೆ
ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ
January 9, 2025
10:49 AM
by: ಡಾ.ಚಂದ್ರಶೇಖರ ದಾಮ್ಲೆ
ಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕು
January 2, 2025
10:34 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror