ಮಂಗಳೂರು: ಪತ್ರಕರ್ತರು ಎಷ್ಟೇ ಜಾಣರಿದ್ದರೂ ಓದುಗರು, ವೀಕ್ಷಕರು ಮತ್ತು ಕೇಳುಗರು ಪ್ರಚಂಡ ಜಾಣರಾಗಿರುವುದರಿಂದ ಪತ್ರಕರ್ತರಲ್ಲಿ ಆತ್ಮಾವಲೋಕನ, ವೃತ್ತಿಪರತೆ ಅತೀ ಮುಖ್ಯ ಎಂದು ಸಮ್ಮೇಳನದ ಸರ್ವಾಧ್ಯಕ್ಷ, ಹಿರಿಯ ಪತ್ರಕರ್ತ ಈಶ್ವರ್ ದೈತೋಟ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಸ್ಥಾನದಿಂದ ಮಾಡಿದರು.
ಪತ್ರಕರ್ತರು ಸತ್ಯಾನ್ವೇಷಕರಾದರೆ ಅವರ ಓದುಗರು, ವೀಕ್ಷಕರೊಂದಿಗೂ ಪ್ರಾಮಾಣಿಕರಾಗಿರಲು ಸಾಧ್ಯ. ತಮ್ಮ ವರದಿಗಳ ಬಗ್ಗೆ ಯಾವುದೇ ಗೊಂದಲವಿಲ್ಲದೆ ಸತ್ಯ ಸಂಗತಿಯನ್ನು ಸಮಾಜದ ಮುಂದಿಡಲು ಸಾಧ್ಯ. ಅಂತಹ ಗುಣಗಳನ್ನು ಇಂದಿನ ಪತ್ರಕರ್ತರು ಬೆಳೆಸಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಿಕಾ ರಂಗದಲ್ಲಿ ಮೂರು ದಶಕಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರನ್ನು, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪತ್ರಕರ್ತರ ಸಂಘದ ವತಿಯಿಂದ ಚೊಚ್ಚಲ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಮಹಮ್ಮದ್ ಆರಿಫ್ ಪಡುಬಿದ್ರೆ ಅವರಿಗೆ ಪ್ರದಾನ ಮಾಡಲಾಯಿತು.
ಹಂಪಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಬಿ.ವಿವೇಕ್ ರೈ ಅಧ್ಯಕ್ಷತೆ ವಹಿಸಿದ್ದರು. ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿಯತ್ತಾಯ, ಜಿಲ್ಲಾ ವರ್ತಾಧಿಕಾರಿ ಖಾದರ್ ಷಾ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ್ ರೈ ಕಟ್ಟ ಸನ್ಮಾನಿತರ ಪರಿಚಯ ನೀಡಿದರು . ಉಪಾಧ್ಯಕ್ಷ ಅನ್ಸಾರ್ ಇನೋಳಿ ಬಹುಮಾನಿತರ ವಿವರ ನೀಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಸತ್ಯ ಕೆ. ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪತ್ರ ವಾಚಿಸಿದರು, ಲೋಕೇಶ್ ಪೆರ್ಲಂಪಾಡಿ ವಂದಿಸಿದರು. ಮಾಜಿ ಅಧ್ಯಕ್ಷ ಪಿ.ಬಿ. ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.