ಮಡಿಕೇರಿ: ಆದಿವಾಸಿಗಳನ್ನು ಅರಣ್ಯ ಪ್ರದೇಶದಿಂದ ಹೊರ ಹಾಕಲು ಸರಕಾರದಿಂದ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿ ನಾಗರಹೊಳೆ, ವಿರಾಜಪೇಟೆ ತಾಲೂಕಿನ ಬುಡಕಟ್ಟು ಕೃಷಿಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಫೀ.ಮಾ.ಕಾರ್ಯಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಸರಕಾರ ಮತ್ತು ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆದಿವಾಸಿಗಳು ವಾಸಿಸುವ ಹಾಡಿಗಳಲ್ಲಿ ಹಾಗೂ ಗ್ರಾಮಗಳಲ್ಲಿ ಅವರ ಸಾಂಪ್ರದಾಯಿಕ ಗಡಿಗನುಸಾರ ಗ್ರಾಮಸಭೆಯ ನಿರ್ಣಯದ ಪ್ರಕಾರ ಸರ್ವೇ ನಡೆಸಿ ಸಮುದಾಯದ ಹಕ್ಕನ್ನು ಡಿ. 31 ರೊಳಗೆ ನೀಡಬೇಕು ಹಾಗೂ ವೈಯುಕ್ತಿಕ ಹಕ್ಕುಗಳನ್ನು ಕೂಡ ನೀಡಬೇಕು. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಮನ್ನಣೆಯಾದ ಹಕ್ಕು ಪ್ರದೇಶಗಳನ್ನು ತಕ್ಷಣ ರೆವಿನ್ಯು ಗ್ರಾಮಗಳಾಗಿ ಪರಿವರ್ತಿಸಬೇಕು. ಸರಕಾರಿ ಬ್ಯಾಂಕ್, ಸಹಕಾರಿ ಸಂಘಗಳು, ಬೇರೆ ಬೇರೆ ಇಲಾಖೆಗಳ ಸೌಲಭ್ಯವನ್ನು ಪಡೆಯಲು ಆರ್.ಟಿ.ಸಿ ಒದಗಿಸಿಕೊಡಬೇಕು. ಭಾರತ ಅರಣ್ಯ ಕಾಯ್ದೆ 1972 ನ್ನು ಸಂಪೂರ್ಣ ರದ್ದುಗೊಳಿಸಬೇಕು. ಅರಣ್ಯ ವಾಸಿಗಳಿರುವ ಹಾಡಿಗಳಲ್ಲಿ, ಗ್ರಾಮಗಳಲ್ಲಿ ಮನುಷ್ಯರಿಗೂ, ಪ್ರಾಣಿಗಳಿಗೂ ಅನುಕೂಲವಾಗುವ ಗಿಡಮರಗಳನ್ನು ನೆಟ್ಟು ಬೆಳೆಸಬೇಕು. ಬೆಟ್ಟ ಕುರುಬ ಸಮುದಾಯಕ್ಕೆ ಬೆಟ್ಟ ಕುರುಬ ಎಂಬ ಜಾತಿ ಪ್ರಮಾಣ ಪತ್ರ ನೀಡಬೇಕು. ಹುಲಿ ಸಂರಕ್ಷಣಾ ಪ್ರದೇಶ, ಆನೆ ಕಾರಿಡಾರ್ ಎಂದು ಹೇಳಿ ಬುಡಕಟ್ಟು ಸಮುದಾಯವನ್ನು ಎತ್ತಂಗಡಿ ಮಾಡುವ ಪ್ರಯತ್ನಗಳನ್ನು ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸೋಮವಾರಪೇಟೆ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು, ಆದಿವಾಸಿಗಳನ್ನು ಅರಣ್ಯದಿಂದ ಹೊರದಬ್ಬುವ ಪ್ರಯತ್ನ ನಡೆಯುತ್ತಿದೆ. ನಾವು ಹೊರದೇಶದಿಂದ ಬಂದವರಲ್ಲ, ನೂರಾರು ವರ್ಷದಿಂದ ಅರಣ್ಯದಲ್ಲಿಯೇ ಹುಟ್ಟಿ ಬೆಳೆದು ಜೀವನ ಸಾಗಿಸುತ್ತಿದ್ದು ನಮ್ಮನ್ನು ಎತ್ತಂಗಡಿ ಮಾಡಲು ಪ್ರಯತ್ನಿಸಿರುವುದು ಸರಿಯಲ್ಲ. ನಮಗೆ ಅರಣ್ಯದಲ್ಲಿಯೇ ವಾಸಿಸಲು ಸರ್ಕಾರ ಅನುವು ಮಾಡಿಕೊಡಬೇಕು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದರು. ಸಂಘದ ಪದಾಧಿಕಾರಿಗಳಾದ ಸೋಮಯ್ಯ, ಪ್ರಕಾಶ್, ಜೆ.ಕೆ.ತಿಮ್ಮ, ರಾಮು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…