ಮಂಗಳೂರು: ಭಾರತದ ಕೃಷಿ ವಲಯಕ್ಕೆ ಹೊಡೆತ ನೀಡಬಹುದಾಗಿದ್ದ ಬಹುಚರ್ಚಿತ ಆರ್.ಸಿ.ಇ.ಪಿ. ಒಪ್ಪಂದದಿಂದ ಭಾರತವು ಹೊರಗುಳಿದಿದ್ದು, ಕೇಂದ್ರ ಸರಕಾರವು ಮತ್ತೊಮ್ಮೆ ಕೃಷಿಕರ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಯಾಂಪ್ಕೊ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಕ್ಯಾಂಪ್ಕೋ ಪ್ರಕಟಣೆ ತಿಳಿಸಿದೆ.
ಭಾರತದ ಅಡಿಕೆ ಮತ್ತು ಕಾಳುಮೆಣಸು ಉತ್ಪಾದಕ ವಲಯದ ಪರವಾಗಿ ಪ್ರಧಾನಿ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಮತ್ತು ಕೇಂದ್ರ ಹಣಕಾಸು ಸಚಿವರುಗಳನ್ನು ಭೇಟಿ ಮಾಡಿ ಅಡಿಕೆ ಮತ್ತು ಕಾಳುಮೆಣಸನ್ನು ಆರ್.ಸಿ.ಇ.ಪಿ. ಒಪ್ಪಂದದಿಂದ ಹೊರತುಪಡಿಸುವಂತೆ ಕ್ಯಾಂಪ್ಕೊ ವಿನಂತಿಸಿತ್ತು. ದೇಶವು ಅಡಿಕೆ ಮತ್ತು ಕಾಳುಮೆಣಸು ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ.ಈಗಾಗಲೇ ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಮತ್ತು ಕಾಳುಮೆಣಸು ದೇಶದೊಳಕ್ಕೆ ಆಮದಾಗಿದ್ದು, ದೇಶೀಯ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದಲ್ಲದೆ ಕೃಷಿ ಆರ್ಥಿಕತೆಗೆ ಅಪಾಯವನ್ನುಂಟುಮಾಡಿದೆ. ಇಂತಹ ಸಂದರ್ಭದಲ್ಲಿ ಗೊಂದಲ ಮತ್ತು ಭೀತಿಯುಂಟುಮಾಡಿದ ಒಪ್ಪಂದದಿಂದ ದೇಶವನ್ನು ಹೊರತುಪಡಿಸಿ ಕೃಷಿಕರ ಬೆಂಬಲಕ್ಕೆ ನಿಂತಿದ್ದು ಸರಕಾರದ ಕೃಷಿಸ್ನೇಹಿ ನೀತಿಯನ್ನು ಎತ್ತಿತೋರಿಸುತ್ತದೆ ಎಂದು ಪ್ರಕಟಣೆಯಲ್ಲಿ ಕ್ಯಾಂಪ್ಕೋ ತಿಳಿಸಿದೆ.