ಆಹಾರಕ್ಕೊಂದು ನೀತಿ….

March 31, 2020
11:16 PM
ಆಹಾರ ನಮ್ಮ ಪ್ರಾಥಮಿಕ ಅವಶ್ಯಕತೆ.  ಆಹಾರ‌ ಸೇವನೆಯು ಒಂದು ಯಜ್ಞಕ್ಕೆ ಸಮ. ಪ್ರತಿಯೊಂದು ತುತ್ತನ್ನು ತೆಗೆದುಕೊಳ್ಳುವಾಗಲೂ ನಾವು ಕೃತಜ್ಞತಾ ಭಾವವಿರಬೇಕು . ನಾವು ಸ್ವೀಕರಿಸುವ ಆಹಾರ ದೇವರ ಪ್ರಸಾದ.
“ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್,
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ”
“ಅಹಂ ವೈಶ್ವಾನರೋ ಭೂತ್ವ ಪ್ರಾಣಿನಾಮ್ ದೇಹ ಮಾಶ್ರಿತಹಃ
ಪ್ರಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್”
ಭಗವದ್ಗೀತೆಯ ಈ ಶ್ಲೋಕಗಳನ್ನು ಹೇಳುತ್ತಾ ನಾವು ನಿತ್ಯವೂ ತಯಾರಿಸಿದ ಆಹಾರವನ್ನು ದೇವರಿಗೆ ಸಮರ್ಪಿಸಿ ನಾವು ಸೇವಿಸುವುದು  ಭಾರತೀಯ ಪದ್ದತಿ.  ಹೀಗೆ ‌ಮಾಡುವುದರಿಂದ ಆಹಾರ ಪ್ರಸಾದವಾಗುತ್ತದೆ  ಎಂಬ ಬಲವಾದ ನಂಬಿಕೆ ನಮ್ಮ ದೇಶದಲ್ಲಿ ಇದೆ. ಆಹಾರವನ್ನು ಸ್ವೀಕರಿಸುವಾಗ ನಾವು ಮಾನಸಿಕವಾಗಿ ಶಾರೀರಿಕವಾಗಿ ಶುದ್ದವಾಗಿರ ಬೇಕೆಂದು ಹಿರಿಯರು ಯಾವಾಗಲೂ ಹೇಳುತ್ತಾರೆ. ಆದುದರಿಂದ ಮೊದಲು ದೇವರಿಗೆ ಆಹಾರವನ್ನು ಪ್ರಶಾಂತ ಮನಸ್ಸಿನಿಂದ ಸಮರ್ಪಿಸಿ ಆಮೇಲೆ ನಾವು ಆಹಾರ ಸೇವಿಸುವ ಅಭ್ಯಾಸ ರೂಢಿಯಲ್ಲಿದೆ.
ಇಂದು ನಮ್ಮ ಪರಿಸರವು ತೀವ್ರವಾಗಿ ಕಲುಷಿತ ಗೊಂಡಿದೆ. ನಾವು ಮಾಡುತ್ತಿರುವ ವಿಪರೀತ ಅಭಿವೃದ್ಧಿ ಕಾರ್ಯಗಳ ನೇರ ಪರಿಣಾಮ ಪ್ರಕೃತಿಯ ಮೇಲಾಗುತ್ತಿದೆ.‌ ಗಾಳಿ , ನೀರು, ಮಣ್ಣು ಎಲ್ಲವೂ ಕಲುಷಿತಗೊಂಡಿವೆ. ಇದರಿಂದಾಗಿ ನಮ್ಮ ಆಹಾರವೂ ಕಲ್ಮಶಗಳಿಂದ ಕೂಡಿವೆ. ನಾವು ಮೂರು ರೀತಿಯ ಕಲ್ಮಶವನ್ನು ಕಾಣಬಹುದು. ತರಕಾರಿ ಹಾಗೂ ಇತರ ವಸ್ತುಗಳಲ್ಲಿ ಇರುವ ಹೊಲಸು, ಪಾತ್ರೆಗಳಲ್ಲಿ ಇರಬಹುದಾದ ಕೊಳಕು, ಮತ್ತು ಅಡುಗೆತಯಾರಿಸುವ ವಿಧಾನ ಹಾಗೂ ಸಿದ್ಧ ಪಡಿಸುವವನ ಮನಸ್ಥಿತಿ. ಎಲ್ಲಾ ಸರಿಯಾಗಿದ್ದು ಅಡುಗೆ ಮಾಡುವವನು ಪ್ರೀತಿಯಿಂದ ಮಾಡದಿದ್ದರೆ ಎಲ್ಲಾ ಹಾಳಾಗುತ್ತದೆ. ದೇವರು ಎಲ್ಲಾವನ್ನು ಶುದ್ಧೀಕರಣ ಮಾಡುತ್ತಾನೆ . ಹಾಗಾಗಿ ಭಗವಂತನಿಗೆ ಪ್ರಾರ್ಥಿಸಿ  ಸಮರ್ಪಿಸಿದ ಆಹಾರ ಯಾವಾಗಲೂ ಶುದ್ಧವಾಗಿರುತ್ತದೆ.
ನಾವು ಭಾರತೀಯರು, ಆಹಾರ ಪದ್ಧತಿಯ ಬಗ್ಗೆ ವಿಶೇಷ ವಾದ ಕಾಳಜಿಯನ್ನು ಹೊಂದಿರುವವರಾಗಿದ್ದೇವೆ. ಯಾವತ್ತೂ ಗಡಿಬಿಡಿಯಲ್ಲಿ ಮಾಡುವ ಅಡಿಗೆ ತಿಂಡಿ ,ಊಟಗಳನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಅಡಿಗೆ ತಯಾರಿಯೂ ಒಂದು ಪವಿತ್ರ ಕಾರ್ಯ. ಅದೂ ಒಂದು ಕಲೆ.‌ ಕ್ರಮ ಪ್ರಕಾರವಾಗಿ ‌ಮಾಡಿದರೆ ಅಡಿಗೆ ರುಚಿಯೋ ರುಚಿ. ಬಡಿಸುವುದಕ್ಕೂ ಒಂದು ಕ್ರಮವಿದೆ.‌ಎಲ್ಲಾವನ್ನು ಒಟ್ಟಾರೆ ಬಡಿಸಿಬಿಡುವುದಲ್ಲ. ಒಂದಾದ ಮೇಲೆ ಒಂದು ಬಡಿಸ ಬೇಕು.‌ಉಣ್ಣುವವನು ಬಡಿಸುವವನು ಇಬ್ಬರೂ ತಾಳ್ಮೆ ಯಿಂದ ತಮ್ಮ ತಮ್ಮ ಕೆಲಸ ಮಾಡಿದಾಗ ಆಹಾರದ ರುಚಿ ದ್ವಿಗುಣವಾಗುತ್ತದೆ. ಇನ್ನೂ ಊಟಕ್ಕೂ ಒಂದು ಕ್ರಮವಿದೆ . ಬಡಿಸಿದ್ದನ್ನೆಲ್ಲಾ ಗಬಗಬ ತಿನ್ನುವುದಲ್ಲ. ಸಮಾಧಾನವಾಗಿ ಉಣ್ಣಬೇಕು.
ಒಟ್ಟಾರೆ ಹೇಳುವುದಾದರೆ ಅಡಿಗೆಗೆ ಬೇಕಾದ ಸಾಮಗ್ರಿಗಳನ್ನು ರೂಡಿ ಮಾಡುವಲ್ಲಿಂದ ಹಿಡಿದು ಊಟ ಮಾಡಿ ಮುಗಿಸುವವರೆಗೂ ಒಂದು ಯಜ್ಞವೇ  ಸರಿ. ನಮ್ಮಲ್ಲಿ ಇದರಲ್ಲಿ ಯಾವುದಾದರೂ ಒಂದು ವ್ಯತ್ಯಯವಾದರೂ ಮನೆಯ ಹಿರಿಯರು ಸರಿ ಹೇಳಿ ಕೊಟ್ಟಿಲ್ಲವೆಂದು ಕಾಣುತ್ತದೆ ಎಂಬ ಮಾತನ್ನು ಕೇಳಬೇಕಾಗುತ್ತದೆ.
ಹೀಗೆ ಕ್ರಮಬದ್ಧವಾಗಿ ತೆಗೆದುಕೊಂಡ ಆಹಾರವು ನಮ್ಮಲ್ಲಿ ಸಾಥ್ವಿಕ ಗುಣನಡತೆಗಳನ್ನು ಬೆಳೆಸುತ್ತದೆ. ಒಳ್ಳೆಯ ಮನಸ್ಸು, ಪರಿಸರ, ಹಿರಿಯರ ಹಿತನುಡಿಗಳು ನಮ್ಮ ನ್ನು ಸುಸಂಸ್ಕೃತರನ್ನಾಗಿ ಮಾಡುತ್ತದೆ. ಹಿರಿಯರು ತಿದ್ದಿ ತೀಡಿ ನಮ್ಮ ವ್ಯಕ್ತಿತ್ವವನ್ನು ಬೆಳೆಸುತ್ತಾರೆ. ಮನೆಯಲ್ಲಿ ‌ಅಜ್ಜ ಅಜ್ಜಿ , ಅಪ್ಪ ಅಮ್ಮ. ದೊಡ್ದಪ್ಪ, ಚಿಕ್ಕಪ್ಪ ,ಅಕ್ಕ ,ಅಣ್ಣ, ತಮ್ಮ, ತಂಗಿ ಹೀಗೆ ಕೂಡು ಕುಟುಂಬದಲ್ಲಿ ಬೆಳೆದ ಮಕ್ಕಳು ಕಷ್ಟ ಸುಖಗಳನ್ನು ಅರಿತಿರುತ್ತಾರೆ. ಸಮಾಜದೊಂದಿಗೆ  ಸುಲಭವಾಗಿ ಬೆರೆಯುತ್ತಾರೆ. ಯಾವುದಕ್ಕೂ ಹೆದರುವುದಿಲ್ಲ. ಹೀಗೆ ಆರೋಗ್ಯ ವಂತ ಸಮಾಜದ ನಿರ್ಮಾಣದಲ್ಲಿ ಆಹಾರ ಪದ್ಧತಿ , ಆಚಾರ ವಿಚಾರಗಳ ಕೊಡುಗೆಯೂ ಮಹತ್ವದ್ದು. ನಮ್ಮ ಸುತ್ತಮುತ್ತ ಹಲವು ರೀತಿಯ ಔಷದೀಯ ಗುಣಗಳನ್ನು ಹೊಂದಿರುವ ಸಸ್ಯಗಳಿವೆ. ನಾವು ಗುರುತಿಸಲು ಪ್ರಯತ್ನಿಸ ಬೇಕು ಅಷ್ಟೇ.  ಅಮೃತ ಬಳ್ಳಿ, ಕಿರಾತಕಡ್ಡಿ,  ಅಶ್ವತ್ಥ, ತಿಮರೆ ,ನೆಲನೆಲ್ಲಿ, ತುಳಸಿ   ಹೀಗೆ ಹತ್ತು ಹಲವು  ಸಸ್ಯಗಳಿವೆ . ಕ್ರಮಬದ್ಧವಾಗಿ ಬಳಸಿದಾಗ  ಜೀವ ನಿರೋಧಕ ಶಕ್ತಿ ಬರುತ್ತದೆ. ಕೆಲವು ಸುಲಭವಾಗಿ ಮಾಡಬಹುದಾದ ಕಷಾಯ ಗಳು ನಮ್ಮನ್ನು ಶೀತ, ಜ್ವರಗಳಿಂದ ನಮ್ಮನ್ನು ಕಾಪಾಡುತ್ತವೆ.
ಕೆಲವು  ಸುಲಭವಾಗಿ  ಮಾಡುವ    ಕಷಾಯಗಳು:
ಅರಶಿನ ಕಷಾಯ
ಬೇಕಾಗುವ ಸಾಮಗ್ರಿಗಳು
1 ಚಮಚ ಅರಶಿನ, 2 ಗ್ಲಾಸ್ ನೀರು.
ಮಾಡುವ ವಿಧಾನ
ಅರಶಿನ ಹುಡಿಗೆ ನೀರು ಹಾಕಿ ಚೆನ್ನಾಗಿ ಕುದಿಸಿ  ಎರಡು ಬಾರಿ ಸೇವಿಸ ಬೇಕು.  ಸ್ವಲ್ಪ ಹಾಲು, ಕಲ್ಲುಸಕ್ಕರೆ  ಹಾಕಿಯೂ ಕುಡಿಯ ಬಹುದು.
ಕಿರಾತಕಡ್ಡಿ ಕಷಾಯ
ಎರಡು ಮೂರು  ಗೆಲ್ಲು ಕಿರಾತಕಡ್ಡಿ , ಅರಶಿನ ಚಿಟಿಕೆ,  ನೀರು 4 ಗ್ಲಾಸು.
ಮಾಡುವ ವಿಧಾನ
ಕಿರಾತಕಡ್ಡಿ, ಅರಶಿನ, ನೀರು ಹಾಕಿ ಚೆನ್ನಾಗಿ ಕುದಿಸ ಬೇಕು. ಸ್ವಲ್ಪ ಬತ್ತುವಷ್ಟು ಕುದಿಸ ಬೇಕು. ಬಿಸಿ ಬಿಸಿ ಕಷಾಯ ಕುಡಿಯ ಬೇಕು.
ಅಮೃತ ಬಳ್ಳಿ ಕಷಾಯ ಒಂದು ಗೇಣು ಅಮೃತ ಬಳ್ಳಿ ಯ ಹೊರಗಿನ ಸಿಪ್ಪೆಯನ್ನು ಕೆರಸಿ ತೆಗೆಯ ಬೇಕು. ಆಮೇಲೆ ಕುದ್ದಿ ಅದರ ಒಳಗಿನ ಗಟ್ಟಿ ಭಾಗವನ್ನು ತೆಗೆದು  ಮಧ್ಯೆ ಇರುವ ತಿರುಳಿನ ಭಾಗವನ್ನು ‌ಹಾಕಿ ಕುದಿಸ ಬೇಕು. ‌ಸ್ವಲ್ಪ ಬತ್ತಿಸಿ  ಉಪಯೋಗಿಸ ಬೇಕು.
ಮೆಂತೆ ಕಷಾಯ
15 ಮೆಂತೆಯನ್ನು ಜಜ್ಜಿಕೊಳ್ಳ‌ಬೇಕು.‌ಅದಕ್ಕೆ ಎರಡು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸ ಬೇಕು.  ಈ ಕಷಾಯ ದೇಹಕ್ಕೆ ತುಂಬಾ ಒಳ್ಳೆಯದು. ‌
ತುಳಸಿ ಕಷಾಯ
ಒಂದು ಹಿಡಿ ತುಳಸಿ , ಅರ್ಧ ಚಮಚ ಅರಶಿನ, ನೀರು. ಇವುಗಳನ್ನು ಒಟ್ಟಿಗೆ ಹಾಕಿ   ಚೆನ್ನಾಗಿ ಕುದಿಸಿ ಸ್ವಲ್ಪ ಬತ್ತಿಸ ಬೇಕು.  ಇದನ್ನು ಒಂದು ತುಂಡು ಕಲ್ಲು ಸಕ್ಕರೆ ಹಾಕಿ ಕುಡಿಯ ಬಹುದು. ಶೀತ ಬಾದೆಗೆ ಇದು ಒಳ್ಳೆಯ ಮನೆ ಮದ್ದು.
ನಮ್ಮ ಸುತ್ತಮುತ್ತಲು ಇಷ್ಟೆಲ್ಲಾ ಇದ್ದರೂ , ಮನೆಯಲ್ಲಿ  ತರಕಾರಿ ಹಾಕಿದ ಪಲಾವ್, ತುಪ್ಪ, ಅನ್ನ, ರುಚಿ ರುಚಿಯಾದ ಚಪಾತಿ, ಪರೋಟ ಏನೇ ಮಾಡಿದರೂ ಅದರ ಮೇಲೆ ಟೊಮ್ಯಾಟೊ ಕೆಚಪ್ ಹಾಕಿ  ನಿಜವಾದ ರುಚಿಯನ್ನು  ಕೆಡಿಸಿ ತಿನ್ನುವ ಇಂದಿನ ಮಕ್ಕಳಿಗೆ ಏನನ್ನೋಣ?
* ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮನೆಯು ಮತ್ತೊಮ್ಮೆ ಮೊದಲ ಪಾಠಶಾಲೆಯಾಗಲಿ
November 20, 2024
8:49 PM
by: ಡಾ.ಚಂದ್ರಶೇಖರ ದಾಮ್ಲೆ
ಭತ್ತ ಬೆಳೆಸುವ ಪ್ರಯೋಗ, ಅಕ್ಕಿ ತಯಾರಿಸುವ ಪ್ರಕ್ರಿಯೆ
November 13, 2024
9:43 PM
by: ಡಾ.ಚಂದ್ರಶೇಖರ ದಾಮ್ಲೆ
ಆಧುನಿಕ ಯುಗದಲ್ಲಿ ಭಾರತೀಯ ಪ್ರಜೆ
November 6, 2024
6:42 AM
by: ಡಾ.ಚಂದ್ರಶೇಖರ ದಾಮ್ಲೆ
ವಕ್ಫ್ ಆಸ್ತಿ ವಿವಾದ | ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು……..
November 5, 2024
7:22 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror