ಸುಳ್ಯ: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಆ.27 ರಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬೆಂಗಳೂರಿನ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಬೆಳಿಗ್ಗೆ 10 ಕ್ಕೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.
ನಿರ್ಗಮನ ಬಿಜೆಪಿ ಅಧ್ಯಕ್ಷ ಮುಖ್ಯಮಂತ್ರಿ ಬಿ.ಯಸ್.ಯಡಿಯೂರಪ್ಪ ಅವರಿಂದ ನಳಿನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕರಿಸುವರು.
ಸುಳ್ಯ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಬಿಜೆಪಿ ಕಾರ್ಯಕರ್ತರು, ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡಿರುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರ ಉಂಟಾಗಿದ್ದು ಉತ್ಸಾಹ ಹೆಚ್ಚಿದೆ. ಆದುದರಿಂದ ಗ್ರಾಮ ಗ್ರಾಮ ಗಳು ಸೇರಿದಂತೆ ಪ್ರತಿ ವಿಧಾನಸಭಾ ಕ್ಷೇತ್ರದಿಂದ ನೂರಾರು ಮಂದಿ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಕರೆದೊಯ್ಯುವ ಪ್ರಯತ್ನವನ್ನು ಬಿಜೆಪಿ ಮಂಡಲ ಸಮಿತಿಗಳು ನಡೆಸುತ್ತಿದೆ. ಅದಕ್ಕಾಗಿನ ಸಿದ್ಧತೆಗಳು ನಡೆದಿದೆ. ಸೋಮವಾರ ರಾತ್ರಿಯೇ ಇಲ್ಲಿನ ಕಾರ್ಯಕರ್ತರು ಬೆಂಗಳೂರಿಗೆ ತೆರಳಲಿದ್ದಾರೆ.