ಮಂಗಳೂರು : ಉಡುಪಿ ಜಿಲ್ಲೆಯಲ್ಲಿ ಇಎಸ್‍ಐ ವತಿಯಿಂದ ಸುಸಜ್ಜಿತ ಆಸ್ಪತ್ರೆಯನ್ನು ತೆರೆಯುವ ಉದ್ದೇಶ ಹೊಂದಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇಎಸ್‍ಐ ಯೋಜನೆಯಡಿ ಕಾರ್ಮಿಕರು ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 30 ಸಾವಿರಕ್ಕೂ ಹೆಚ್ಚು ಗೋಡಂಬಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ಇಎಸ್‍ಐ ಆಸ್ಪತ್ರೆ ಸೌಲಭ್ಯ ಕಲ್ಪಿಸಿಕೊಡುವಂತೆ ಲೋಕಸಭಾ ಸದಸ್ಯೆ ಶೋಭ ಕರಂದ್ಲಾಜೆ, ನಿರ್ದೇಶಿಸಿರುವುದರಿಂದ ಜನವರಿ 27 ರಿಂದ ಫೆಬ್ರವರಿ 10 ರ ವರೆಗೆ ಎಲ್ಲಾ ಕಾರ್ಮಿಕರನ್ನು ಇಎಸ್‍ಐ ವ್ಯಾಪ್ತಿಗೆ ಒಳಪಡಿಸಲು ಕಾರ್ಮಿಕ ಸಂಘಟನೆಗಳು, ಗೋಡಂಬಿ ಉದ್ದಿಮೆದಾರರ ಸಂಘ, ಸ್ವತಃ ಕಾರ್ಮಿಕರು, ಇಎಸ್‍ಐ ಅಧಿಕಾರಿಗಳು, ಕಾರ್ಮಿಕ ಇಲಾಖಾ ಅಧಿಕಾರಿಗಳು ಹಾಗೂ ಎಲ್ಲಾ ಭಾಗೀದಾರರು ಸಮರೋಪಾದಿಯಲ್ಲಿ ನೋಂದಣಿ ಕಾರ್ಯದಲ್ಲಿ ಭಾಗವಹಿಸುವಂತೆ ರಾಜ್ಯದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿರುತ್ತಾರೆ. ಎಲ್ಲಾ ಕಾರ್ಮಿಕರು ಇಎಸ್‍ಐ ಯೋಜನೆಯಲ್ಲಿ ನೋಂದಾಯಿಸಿ, ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಇಎಸ್‍ಐ ಕಚೇರಿ ಹಾಗೂ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಲು ಸಹಾಯಕ ಕಾರ್ಮಿಕ ಆಯುಕ್ತರು, ಮಂಗಳೂರು ವಿಭಾಗ ಇವರ ಪ್ರಕಟಣೆ ತಿಳಿಸಿದೆ