ಸುಳ್ಯ: ಜನರಿಗೆ ಸೌಲಭ್ಯವನ್ನು ಒದಗಿಸುವ ಬದಲು ಸಮಸ್ಯೆ ಮತ್ತು ಗೊಂದಲವನ್ನು ಸೃಷ್ಠಿಸಿ ಜನರಿಗೆ ತೊಂದರೆ ಕೊಡಬೇಡಿ ಎಂದು ಶಾಸಕ ಎಸ್.ಅಂಗಾರ ಮೆಸ್ಕಾಂ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪವಿಭಾಗಗಳ ತಾಲೂಕು ಮಟ್ಟದ ಮೆಸ್ಕಾಂ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾಲ್ಸೂರಿನಲ್ಲಿ ಮೆಸ್ಕಾಂ ಸೆಕ್ಷನ್ ಕಚೇರಿ ಆರಂಭಿಸುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದ ಸಂದರ್ಭದಲ್ಲಿ ಶಾಸಕ ಅಂಗಾರ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.
ಅಜ್ಜಾವರ, ಮಂಡೆಕೋಲು, ಉಬರಡ್ಕ ಗ್ರಾಮಗಳನ್ನು ಜಾಲ್ಸೂರು ಸೆಕ್ಷನ್ ಕಚೇರಿ ವ್ಯಾಪ್ತಿಗೆ ಸೇರಿಸುವುದು ಬೇಡ, ಇದಕ್ಕೆ ನಾವು ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿದ್ದೇವೆ ಎಂದು ಸುಬೋದ್ ಶೆಟ್ಟಿ ಮೇನಾಲ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪದ್ಮನಾಭ ಭಟ್, ಕನಕಮಜಲು ಜಾಲ್ಸೂರಿನಲ್ಲಿ ಸೆಕ್ಷನ್ ಕಚೇರಿ ಕೂಡಲೇ ಕಾರ್ಯಾರಂಭ ಮಾಡಬೇಕು ಎಂದು ಒತ್ತಾಯಿಸಿದರು. 2015 ರಲ್ಲಿಯೇ ಕಚೇರಿ ಆರಂಭಿಸುವುದಾಗಿ ಹೇಳಿದ್ದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ಮಂಡೆಕೋಲು ಗ್ರಾಮದವರಿಗೆ ಯಾವುದೇ ಆಕ್ಷೇಪ ಇಲ್ಲ, ಆದುದರಿಂದ ಜಾಲ್ಸೂರು, ಕನಕಮಜಲು, ಮಂಡೆಕೋಲು ಗ್ರಾಮಗಳ ವ್ಯಾಪ್ತಿಯನ್ನು ಒಳಗೊಳಿಸಿ ಸೆಕ್ಷನ್ ಕಚೇರಿ ಆರಂಭಿಸಿ ಎಂದು ಅವರು ಒತ್ತಾಯಿಸಿದರು.
ಉಬರಡ್ಕ ಗ್ರಾಮವನ್ನು ಜಾಲ್ಸೂರು ಸೆಕ್ಷನ್ ಕಚೇರಿ ವ್ಯಾಪ್ತಿಗೆ ಸೇರಿಸುವುದು ಬೇಡ ಎಂದು ಹರೀಶ್ ರೈ ಉಬರಡ್ಕ ಹೇಳಿದರು. ಇದಕ್ಕೆ ಉತ್ತರಿಸಿದ ಶಾಸಕ ಅಂಗಾರರು ಈ ಗೊಂದಲಕ್ಕೆ ತೆರೆ ಎಳೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಸಮರ್ಪಕವಾಗಿ ಗ್ರಾಮಗಳನ್ನು ಜಾಲ್ಸೂರು ಸೆಕ್ಷನ್ ಕಚೇರಿ ವ್ಯಾಪ್ತಿಗೆ ಸೇರಿಸಿ ಮೆಸ್ಕಾಂ ಅಧಿಕಾರಿಗಳು ಸಮಸ್ಯೆಯನ್ನು ಸೃಷ್ಠಿ ಮಾಡುತ್ತಿದ್ದಾರೆ. ಅದರ ಬದಲು ವ್ಯವಸ್ಥೆಗಳು ಜನರಿಗೆ ಪ್ರಯೋಜನಕಾರಿಯಾಗುವಂತೆ ರೂಪಿಸಿ ಎಂದರು.
ಸಂಪಾಜೆಗೆ ಗ್ರಾಮಕ್ಕೆ ಮಂಜೂರಾದ 33 ಕೆ.ವಿ.ಸಬ್ ಸ್ಟೇಷನ್ ಸ್ಥಳ ಮಂಜೂರಾತಿಯ ಬಗ್ಗೆ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಜಿ.ಕೆ.ಹಮೀದ್, ಅಧ್ಯಕ್ಷೆ ಸುಂದರಿ ಮುಂಡಡ್ಕ, ಉಪಾಧ್ಯಕ್ಷೆ ಮೋಹಿನಿ ಪೆಲ್ತಡ್ಕ ಪ್ರಶ್ನಿಸಿದರು. ಅರಣ್ಯ ಇಲಾಖೆಯ ವತಿಯಿಂದ ಸ್ಥಳ ಮಂಜೂರಾತಿ ಮಾಡುವ ಪ್ರಕ್ರಿಯೆಯ ಬಗ್ಗೆ ಅಧಿಕಾರಿಗಳನ್ನು ಕರೆಸಿ ಸಭೆಯಲ್ಲಿ ಮಾಹಿತಿ ಪಡೆಯಲಾಯಿತು. ಸ್ಥಳ ಮಂಜೂರಾತಿ ಪ್ರಕ್ರಿಯೆ ಸರಕಾರಿ ಮಟ್ಟದಲ್ಲಿ ನಡೆಯುತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಬಿಲ್ ನಲ್ಲಿ ಮುಗಿಯದ ಸಮಸ್ಯೆ: ಮೆಸ್ಕಾಂ ಬಿಲ್ ನಲ್ಲಿ ಸಮಸ್ಯೆಗಳು ಮುಗಿಯುತ್ತಿಲ್ಲ. ಕೆಲವರಿಗೆ ಅಧಿಕ ಮೊತ್ತದ ಬಿಲ್ ಬರ್ತಾ ಇದೆ. 2-3 ತಿಂಗಳ ಬಿಲ್ ಒಟ್ಟಿಗೆ ಬರ್ತಾ ಇದೆ ಇತ್ಯಾದಿ ದೂರು ವ್ಯಾಪಕವಾಗಿದೆ ಎಂದು ಬೀರಾ ಮೊಯ್ದೀನ್, ಜಿ.ಕೆ.ಹಮೀದ್ ಹೇಳಿದರು. ಹಲವು ಮಂದಿಗೆ ಅಧಿಕ ಬಿಲ್ ಬರ್ತಾ ಇದೆ. ಕೇಳಿದರೆ ಸಾಪ್ಟ್ ವೇರ್ ಸಮಸ್ಯೆ ಎಂಬ ಬೇಜವಾಬ್ದಾರಿಯ ಉತ್ತರ ಬರುತ್ತದೆ ಎಂದು ಬೆಟ್ಟ ಜಯರಾಮ ಭಟ್ ಹೇಳಿದರು. ಎರಡು ಪಟ್ಟು, ಮೂರು ಪಟ್ಟು ಬಿಲ್ ಬರುವ ಪ್ರಸಂಗ ಉಂಟಾಗುತ್ತಿದೆ. ನಿಮ್ಮ ಸಾಪ್ಟ್ ವೇರ್ ಸಮಸ್ಯೆಯಿಂದ ಗ್ರಾಹಕರಿಗೆ ಸಮಸ್ಯೆ ಸೃಷ್ಠಿಸಬೇಡಿ ಎಂದು ಅವರು ಹೇಳಿದರು.
ದೀನದಯಾಳ್ ಯೋಜನೆಯಡಿ ವಿದ್ಯುದೀಕರಣ ಯೋಜನೆ ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ಅಡ್ಡಿಯಿಂದ ಸಮಸ್ಯೆ ಉಂಟಾಗುತಿದೆ ಎಂದು ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಸಭೆಯ ಗಮನಕ್ಕೆ ತಂದರು. ಎರಡೂ ಇಲಾಖೆಯವರು ಆನ್ ಲೈನ್ ಅರ್ಜಿ ಸಲ್ಲಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಆದರೆ ಹಾಗೆ ಮಾಡದೆ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಆನ್ ಲೈನ್ ಅಪ್ಲಿಕೇಶನ್ ಸಲ್ಲಿಸುವುದು ಯಾರು, ಅದರ ಖರ್ಚನ್ನು ಭರಿಸುವುದು ಯಾರು ಎಂಬ ಗೊಂದಲ ಇದೆ ಎಂದು ಅವರು ಹೇಳಿದರು. ಯಾವ ಪಂಚಾಯತ್ ವ್ಯಾಪ್ತಿಯಲ್ಲಿ ಯೋಜನೆ ಬರುತ್ತದೆಯೋ ಆಯಾ ಪಂಚಾಯತ್ ಗಳು ಆನ್ ಲೈನ್ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಶಾಸಕ ಅಂಗಾರ ಹೇಳಿದರು.
ಗ್ರಾಮ ಪಂಚಾಯತ್ ಗಳಿಗೆ ಬರುವ ದೊಡ್ಡ ಮೊತ್ತದ ನೀರಿನ ವಿದ್ಯುತ್ ಬಿಲ್ ಬಗ್ಗೆ ಚರ್ಚೆ ನಡೆದು ಈ ಕುರಿತು ಚರ್ಚಿಸಲು ಶಾಸಕರ ನೇತೃತ್ವದಲ್ಲಿ ಜನಪ್ರತಿನಿಧಿಗಳ ಸಭೆಯನ್ನು ಮೆಸ್ಕಾಂ ಕರೆಯಬೇಕೆಂದು ಜಿ.ಕೆ.ಹಮೀದ್ ಒತ್ತಾಯಿಸಿದರು. ಝರಿ ನೀರು ಬಳಸುವ ಸಂದರ್ಭದಲ್ಲಿಯೂ ವಿದ್ಯುತ್ ಬಿಲ್ ಬರುತ್ತಿರುವುದರ ಬಗ್ಗೆ ಹರೀಶ್ ರೈ ಉಬರಡ್ಕ ಸಭೆಯಲ್ಲಿ ಹೇಳಿದರು. ನೀರಿಗೆ ವಿದ್ಯುತ್ ಬಳಸದ ಸಂದರ್ಭದಲ್ಲಿ ಮಿನಿಮಂ ಮೊತ್ತ ಎಷ್ಟು ಎಂದು ತಿಳಿಸಿ ಅಸ್ಟು ಮಾತ್ರ ಬಿಲ್ ನೀಡಿ ಎಂದು ಶಾಸಕ ಅಂಗಾರ ಸೂಚಿಸಿದರು.
ಗುತ್ತಿಗಾರು 33 ಕೆ.ವಿ.ಸಬ್ ಸ್ಟೇಷನ್ ಕಾಮಗಾರಿ ಕೂಡಲೇ ಪೂರ್ತಿ ಮಾಡಬೇಕು ಎಂದು ವೆಂಕಟ್ ವಳಲಂಬೆ ಒತ್ತಾಯಿಸಿದರು. ಅಜ್ಜಾವರ, ಮಂಡೆಕೋಲು ಭಾಗಕ್ಕೆ ಹೆಚ್ಚುವರಿ ಲೈನ್ ಮೆನ್ ಗಳ ನೇಮಕ ಮಾಡಬೇಕು ಎಂದು ಮಿಥುನ್ ಕರ್ಲಪಾಡಿ ಹೇಳಿದರು. ನೆಲ್ಲೂರು ಕೆಮ್ರಾಜೆ ಭಾಗಕ್ಕೆ ವಿದ್ಯುತ್ ಸರಬರಾಜಿಗೆ ನೀರಬಿದಿರೆಯಲ್ಲಿ ಪ್ರತಿ ಬಾರಿಯೂ ಸಮಸ್ಯೆ ಉಂಟಾಗುತಿದೆ ಇದರ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದು ವಿನಯಚಂದ್ರ ಹೇಳಿದರು. ನೆಲ್ಲೂರು ಕೆಮ್ರಾಜೆ ಗ್ರಾಮವನ್ನು ಸುಳ್ಯ ಕಚೇರಿ ವ್ಯಾಪ್ತಿಗೆ ಸೇರಿಸಬೇಕು ಎಂದು ಅವರು ಆಗ್ರಹಿಸಿದರು. ಗ್ರಾಮ ಸಭೆಗಳಿಗೆ ಮೆಸ್ಕಾಂ ಅಧಿಕಾರಿಗಳು ಭಾಗವಹಿಸಬೇಕು ಎಂದು ಬೀರಾಮೊಯ್ದೀನ್ ಹೇಳಿದರು.
ಸುಳ್ಯಕ್ಕೆ ಅತೀ ಅಗತ್ಯವಾಗಿರುವ 110 ಕೆ.ವಿ.ವಿದ್ಯುತ್ ಲೈನ್ ಕಾಮಗಾರಿ ಅನುಷ್ಠಾನಕ್ಕೆ ಪ್ರಕ್ರಿಯೆಗಳು ಮುಂದುವರಿದಿದೆ. ಅದನ್ನು ಶೀಘ್ರ ಅನುಷ್ಠಾನಕ್ಕೆ ಸರಕಾರ ಬದ್ಧ ಎಂದು ಶಾಸಕ ಅಂಗಾರ ಹೇಳಿದರು. ತಾಲೂಕೊನಾದ್ಯಂತ ಹಲವು ವಿದ್ಯುತ್ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಉಪಸ್ಥಿತರಿದ್ದರು.ಮೆಸ್ಕಾಂ ಪುತ್ತೂರು ಕಾರ್ಯಪಾಲಕ ಇಂಜಿನಿಯರ್ ನರಸಿಂಹ, ಸುಳ್ಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಾದ ಹರೀಶ್, ಚಿದಾನಂದ, ಕಿರಿಯ ಇಂಜಿನಿಯರ್ ಗಳಾದ ಹರಿಕೃಷ್ಣ, ಪ್ರಸಾದ್, ಅಭಿಷೇಕ್ ಸಭೆಯಲ್ಲಿ ಗ್ರಾಹಕರ ಮತ್ತು ಜನಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…