ಸುಳ್ಯ: ಮಳೆಗಾಲದಲ್ಲಿ ನೀರನ್ನು ಶೇಖರಿಸಿ ಭೂಮಿಗೆ ಇಂಗಿಸಿ ತೆಂಗಿನ ತೋಟಗಳನ್ನು ಜಲಸಮೃದ್ಧಿಯಾಗಿಸುವಲ್ಲಿ ಕಟ್ಟಗಳ ಪಾತ್ರ ಬಲು ದೊಡ್ಡದು. ತನ್ನ ತೋಟದಲ್ಲಿ ಅಲ್ಲಲ್ಲಿ ಕಟ್ಟಗಳನ್ನು ನಿರ್ಮಿಸಿ ಭೂಮಿಯನ್ನು ಜಲಸಮೃದ್ಧಿ ಮಾಡುವ ಗಡಿ ಪ್ರದೇಶವಾದ ಕಲ್ಲಪಳ್ಳಿಯ ಪ್ರಗತಿ ಪರ ಕೃಷಿಕ ಬಿ.ರಾಜಗೋಪಾಲ ಭಟ್ ಅವರ ಪ್ರಯತ್ನ ಉತ್ತಮ ಫಲಿತಾಂಶವನ್ನೇ ನೀಡುತ್ತಿದೆ.
ಮಳೆ ಸುರಿದಾಗ ಗುಡ್ಡ ಪ್ರದೇಶದಲ್ಲಿ, ಭೂಮಿಯ ಇಳಿಜಾರಿನಲ್ಲಿ ಬಿದ್ದು ಹರಿದು ಹೋಗಿ ವ್ಯರ್ಥವಾಗುವ ನೀರನ್ನು ತಡೆದು ಶೇಖರಿಸಿ ಭೂಮಿಗೆ ಇಂಗಿಸಲು ಈ ರೀತಿಯ ಕಲ್ಲಿನ ಕಟ್ಟಗಳು ಬಹು ಉಪಯೋಗಿಯಾಗುತ್ತಿದೆ. ಗುಡ್ಡ ಪ್ರದೇಶದಲ್ಲಿ ಮಳೆ ಸುರಿದರೆ ಕ್ಷಣಾರ್ಧದಲ್ಲಿ ನೀರು ಹರಿದು ಹೋಗಿ ತೋಡು, ಹಳ್ಳಗಳಿಗೆ ಸೇರಿ ಸಮುದ್ರ ಪಾಲಾಗುತ್ತದೆ. ಇದರಿಂದ ಎಷ್ಟೇ ಅಧಿಕ ಮಳೆ ಸುರಿಯುವ ಪ್ರದೇಶವಾದರೂ ಮಳೆ ನಿಂತು ಕೆಲವೇ ದಿನದಲ್ಲಿ ಭೂಮಿ ಒಣಗಿ ಬರಡಾಗುತ್ತದೆ. ಮಳೆ ಹೋದ ಬೆನ್ನಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. ಬೇಸಿಗೆಯಲ್ಲಿ ತೆಂಗಿನ ತೋಟಗಳು ಮತ್ತಿತರ ಕೃಷಿ ಒಣಗಿ ಹೋಗುವುದರ ಜೊತೆಗೆ ಕುಡಿಯುವ ನೀರಿಗೂ ಬರ ಎದುರಾಗುತ್ತದೆ. ಅಂತರ್ಜಲ ಕುಸಿದು ಹೋಗಿ ಎಲ್ಲೆಡೆ ನೀರಿನ ತತ್ವಾರ ಸಾಮಾನ್ಯವಾಗುತ್ತದೆ. ಇದಕ್ಕೆ ಪರಿಹಾರವಾಗಿ ಜಲ ಮೂಲವನ್ನು ಹೆಚ್ಚಿಸಲು ಕೃಷಿಕರು ನಿರ್ಮಿಸುವ ಕಟ್ಟಗಳು ಬಹು ಉಪಯೋಗಿಯಾಗುತ್ತದೆ.
ತೆಂಗಿನ ತೋಟದಲ್ಲಿ ಅಲ್ಲಲ್ಲಿ ನಿರ್ಮಿಸಿದ ಕಟ್ಟಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿ ಭೂಮಿಗೆ ಇಂಗಿಸುವ ತಮ್ಮ ಪ್ರಯೋಗದಿಂದ ಕಳೆದ 15 ವರ್ಷಗಳಿಂದೀಚೆಗೆ ರಾಜಗೋಪಾಲ ಭಟ್ಟರ ತೋಟದಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ. ತಮ್ಮ ನಾಲ್ಕು ಏಕ್ರೆ ತೆಂಗಿನ ತೋಟ ವರ್ಷ ಪೂರ್ತಿ ಜಲ ಸಮೃದ್ಧಿಯಾಗಿಸಲು ಇದರಿಂದ ಸಾಧ್ಯವಾಗಿದೆ. ಗುಡ್ಡದ ಇಳಿಜಾರಿನಲ್ಲಿರುವ ತೆಂಗಿನ ತೋಟದಲ್ಲಿ ಹಿಂದೆಲ್ಲ ಮಳೆ ಸುರಿದರೆ ಕ್ಷಣಾರ್ಧದಲ್ಲಿ ಮಳೆ ನೀರು ಹರಿದು ಹೋಗುತ್ತಿತ್ತು. ಮಳೆ ನೀರು ತೋಟದ ಮಣ್ಣನ್ನೂ ಕೊಚ್ಚಿಕೊಂಡು ಹೋಗುತ್ತಿತ್ತು. ಇದರಿಂದ ಬೇಸಿಗೆಯಲ್ಲಿ ತೆಂಗಿನ ತೋಟ ಬರಡಾಗಿ ಒಣಗಿ ಹೋಗುತ್ತಿತ್ತು. ಆದರೆ ತೋಟದಲ್ಲಿ ಅಲ್ಲಲ್ಲಿ ಕಟ್ಟಗಳನ್ನು ನಿರ್ಮಿಸಿ ಮಳೆ ನೀರು ಶೇಖರಿಸಿ ನೀರನ್ನು ಭೂಮಿಗೆ ಇಂಗಿಸಲು ಆರಂಭಿಸಿದರಿಂದ ಇದಕ್ಕೆ ಪರಿಹಾರ ಸಿಕ್ಕಿದೆ. ತೋಟದಲ್ಲೇ ಸಿಗುವ ಕಲ್ಲುಗಳಿಂದ ಮೂರು-ನಾಲ್ಕು ಅಡಿ ಎತ್ತರದಲ್ಲಿ ಕಟ್ಟಗಳ್ನು ನಿರ್ಮಿಸಲಾಗುತ್ತದೆ. ಬಿದ್ದ ನೀರು ಅಲ್ಲಲ್ಲೇ ಶೇಖರಗೊಂಡು ನಿಧಾನವಾಗಿ ಇಂಗುತ್ತದೆ. ಈ ಪ್ರಯೋಗ ಆರಂಭಿಸಿದ ಬಳಿಕ ಕಡು ಬೇಸಿಗೆಯಲ್ಲಿಯೂ ತೆಂಗಿನ ತೋಟ ಹಸಿರಿನಿಂದ ನಳ ನಳಿಸುತ್ತದೆ. ಸಮೀಪದಲ್ಲಿರುವ ಕೆರೆಗಳಲ್ಲಿಯೂ ನೀರಿನ ಕೊರತೆ ಉಂಟಾಗುವುದಿಲ್ಲ. ತೆಂಗಿನ ತೋಟಕ್ಕೆ ಮಾತ್ರವಲ್ಲದೆ ಅಡಕೆ ತೋಟಕ್ಕೂ ನೀರಾವರಿಗೆ ಬೇಕಾದಷ್ಟು ನೀರು ದೊರೆಯುತ್ತದೆ ಎನ್ನುತ್ತಾರೆ ರಾಜಗೋಪಾಲ ಭಟ್. ತಮ್ಮ ಪ್ರದೇಶದ ನೀರಿನ ಸಂಪತ್ತನ್ನು ಹೆಚ್ಚಿಸಲು ಮಾತ್ರವಲ್ಲದೆ ತೋಟದ ಮಣ್ಣಿನ ಸವಕಳಿಯನ್ನು ತಡೆಯಲೂ ಕಟ್ಟಗಳು ಸಹಾಯಕವಾಗುತ್ತದೆ.
ಈ ರೀತಿಯಾಗಿ ತೆಂಗಿನ ತೋಟದಲ್ಲಿ ಎಲ್ಲೆಡೆ ಕಟ್ಟಗಳನ್ನು ನಿರ್ಮಿಸಿರುವುದರಿಂದ ಈಗ ಇವರ ತೆಂಗಿನ ತೋಟದಲ್ಲಿ ಸುರಿದ ಮಳೆ ನೀರಿನ ಒಂದು ಹನಿಯೂ ಹರಿದು ಹೋಗಿ ವ್ಯರ್ಥವಾಗುವುದಿಲ್ಲ. ಈ ರೀತಿಯ ಕಟ್ಟಗಳಲ್ಲಿ ಸುಮಾರು ಹತ್ತು ವರ್ಷಗಳ ಬಳಿಕ ಮಣ್ಣು ತುಂಬುತ್ತದೆ, ಆ ಸಂದರ್ಭದಲ್ಲಿ ಒಂದು ಅಡಿಯಷ್ಟು ಕಟ್ಟಗಳನ್ನು ಎತ್ತರಿಸಬೇಕು. ತೆಂಗಿನ ತೋಟದ ಒಳಗೆ ಕಟ್ಟಗಳನ್ನು ನಿರ್ಮಿಸಿ ನೀರಿಂಗಿಸುವುದರ ಜೊತೆಗೆ ತೋಟದ ಸುತ್ತಲೂ ಅಲ್ಲಲ್ಲಿ ಭಾರೀ ಗಾತ್ರದ ಗುಂಡಿಗಳನ್ನು ತೋಡಿ ಅದರಲ್ಲಿಯೂ ಮಳೆ ನೀರನ್ನು ಶೇಖರಿಸುತ್ತಾರೆ ಇವರು. ಇದರಿಂದ ಪ್ರದೇಶವೆಲ್ಲ ಜಲ ಸಮೃದ್ಧವಾಗುತ್ತದೆ.
ಮಳೆಗಾಲದಲ್ಲಿ ಎಷ್ಟೇ ಮಳೆ ಸುರಿದರೂ ಅದು ಹರಿದು ಸಮುದ್ರ ಸೇರುವುದರಿಂದ ಭೂಮಿಗೆ ಮಳೆ ನೀರಿನ ಪ್ರಯೋಜನ ದೊರೆಯುವುದಿಲ್ಲ. ಬೇಸಿಗೆಯಲ್ಲಿ ನೀರಿನ ಹಾಹಾಕಾರ ಉಂಟಾಗುತ್ತದೆ. ಅಲ್ಲಲ್ಲಿ ಕಟ್ಟಗಳನ್ನು ನಿರ್ಮಿಸಿ, ಹೊಂಡಗಳನ್ನು ತೋಡಿ ಮಳೆಯ ನೀರನ್ನು ಸಂಗ್ರಹಿಸಿ ಸಾಧ್ಯವಾದಷ್ಟು ಭೂಮಿಗೆ ಇಂಗಿಸಿದರೆ, ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಯನ್ನು ಪರಿಹರಿಸಬಹುದು ಎಂಬುದು ನಮ್ಮ ಅನುಭವ – ಬಿ.ರಾಜಗೋಪಾಲ ಭಟ್ , ಕೃಷಿಕ
ಡಿಎಪಿ ರಸಗೊಬ್ಬರಗಳ ತ್ವರಿತ ಪೂರೈಕೆ ಹಾಗೂ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು…
ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ರಾಯಬಾಗ, ಚಿಕ್ಕೋಡಿ ಹುಕ್ಕೇರಿ ಹಾಗೂ ಬಾಗಲಕೋಟ ಜಿಲ್ಲೆಯ…
ಕೊಂಕಣ ರೈಲಿನ ವಿಲೀನಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು…
ಬೇಸಗೆಯ ಅವಧಿಯಲ್ಲಿ ಅಂದರೆ ನವೆಂಬರ್ ಬಳಿಕ ಮಂಗನ ಜ್ವರ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ…
ಉತ್ತರ ಶ್ರೀಲಂಕಾ ಕರಾವಳಿಯ ಬಳಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವು ಕೇಂದ್ರೀಕೃತವಾಗಿದೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ…