ಸುಬ್ರಹ್ಮಣ್ಯ: ಇವರಿಗೆ ಸ್ವಚ್ಛತೆಯೇ ದೇವರು…!, ಸ್ವಚ್ಛತೆಯೇ ಸಂಭ್ರಮ….!. ಇವರಿಗೆ ನಾವು ಅಭಿನಂದನೆ ಹೇಳದೇ ಇದ್ದರೇ ಅದು ನಮ್ಮ ಲೋಪವಾಗದೇ ಇದ್ದೀತು. ಏಕೆ ಗೊತ್ತಾ…?
ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಎಲ್ಲೆಡೆ ರಜೆ. ಆದರೆ ಕುಕ್ಕೆ ಸುಬ್ರಹ್ಮಣ್ಯದ ಗ್ರಾ.ಪಂ ವ್ಯಾಪ್ತಿಯ ಸ್ವಚ್ಛತೆ ಕಾರ್ಮಿಕರ ಪಾಲಿಗೆ ಸಂಭ್ರಮ ಹಾಗೂ ಸಾಮಾನ್ಯ ದಿನವಾಯಿತು. ಸ್ವಚ್ಛತೆಗೆ ರಜೆ ಎಂಬುದು ಇಲ್ಲ ಎಂಬ ಸಂದೇಶವನ್ನೂ ಈ ಕಾರ್ಮಿಕರು ತೋರಿಸಿದ್ದಾರೆ. ಹೀಗಾಗಿ ಅವರಿಗೆ “ಸುಳ್ಯನ್ಯೂಸ್.ಕಾಂ” ವಿಶೇಷ ಶುಭಾಶಯ ಸಲ್ಲಿಸುತ್ತದೆ.
ಮೇ.1 ರಂದು ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಸರಕಾರಿ ಕಚೇರಿಗಳಿಗೂ ರಜೆ. ಈ ರಜೆಯನ್ನು ಎಲ್ಲಾ ನೌಕರರು ಆರಾಮವಾಗಿ ಕಳೆದರೆ ಇಲ್ಲಿನ ಸ್ವಚ್ಛತಾ ಸಿಬಂದಿಗಳು ಮಾತ್ರಾ ಹೆಚ್ಚು ದುಡಿದರು. ಸ್ವಚ್ಛತೆಗೆ ಆದ್ಯತೆ ನೀಡಿದರು. ಈ ಮೂಲಕ ಇಡೀ ನಾಡಿಗೆ ನೀಡಿದ ಸಂದೇಶ ದೊಡ್ಡದು. ಬುಧವಾರ ಕಾರ್ಮಿಕರ ದಿನವಾಗಿದ್ದರೂ, ತ್ಯಾಜ್ಯ ವಿಲೆವಾರಿ ಸಂಗ್ರಹ ವಾಹನದ ಸ್ವಚ್ಛತಾ ವಿಲೆವಾರಿ ಕಾರ್ಮಿಕರು ಹಾಗೂ ಗ್ರಾ.ಪಂ ಸ್ವಚ್ಛತೆ ಸಿಬಂದಿಗಳು ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು.
ಎರಡು ದಿನಗಳ ಹಿಂದಷ್ಟೇ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ಸ್ವಚ್ಛ ಮಾಡಿದ ಯುವಬ್ರಿಗೇಡ್ ತಂಡದ ಸದಸ್ಯರು ಸುಮಾರು 10 ಟನ್ ತ್ಯಾಜ್ಯ ಸಂಗ್ರಹ ಮಾಡಿದ್ದರು.
ಧಾರ್ಮಿಕ ಕ್ಷೇತ್ರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಸ್ಥಳೀಯಾಡಳಿತಕ್ಕೆ ಸವಾಲಿನ ಕೆಲಸ.ಒಂದು ದಿನ ಕಸ ಎತ್ತದಿದ್ದರೆ.ನಗರದ ಅಂಗಡಿ ಮುಂಗಟ್ಟುಗಳ ಎದುರಿನಿಂದ ತ್ಯಾಜ್ಯ ಸಂಗ್ರಹಿಸದೆ ಇದ್ದರೆ ನಗರದಲ್ಲಿ ದೊಡ್ಡ ಪ್ರಮಾಣದ ಸ್ವಚ್ಛತೆ ಕೊರತೆಯಾಗುತ್ತದೆ. ಹೀಗಾಗಿ ಪ್ರತಿನಿತ್ಯ ತ್ಯಾಜ್ಯ ಸಂಗ್ರಹ ವಿಲೆವಾರಿ ಕಾರ್ಯವನ್ನು ಪೂರ್ಣಗೊಳಿಸುವುದು ಅನಿವಾರ್ಯವಾಗಿದೆ. ಇದನ್ನು ಮನಗಂಡು ರಜೆ ಮಾಡದ ಈ ಗೌರವಾನ್ವಿತ ಕಾರ್ಮಿಕರು ತಮ್ಮ ಸೇವೆಯನ್ನು ಮಾಡಿದ್ದಾರೆ. ಹೀಗಾಗಿ ಈ ಕಾರ್ಮಿಕರಿಗೆ ಶ್ಲಾಘನೆ ವ್ಯಕ್ತವಾಗಿದೆ.
ಈ ನಡುವೆ ಸ್ವಚ್ಛತಾ ಕಾರ್ಮಿಕರಿಗೆ ರಜೆ ನೀಡದೇ ಇರುವ ಬಗ್ಗೆ ಕೆಲವು ಅಪಸ್ವರಗಳು ಕೇಳಿಬಂದಿದೆ. ಹಾಗಿದ್ದರೂ ಸಾಮಾಜಿಕ ವಲಯದಲ್ಲಿ ಈ ಕಾರ್ಮಿಕರ ಮೇಲಿನ ಗೌರವ ಹೆಚ್ಚಾಗಿದೆ. ಸ್ವಚ್ಛ ಸಮಾಜದಲ್ಲಿ ಈ ಕಾರ್ಮಿಕರ ಪಾತ್ರ ದೊಡ್ಡದಿದೆ ಎಂದು ಸಾಬೀತು ಮಾಡಿದ್ದಾರೆ.
View Comments
God bless u dear labours..!!