ಶಿಕ್ಷಕರ ದಿನಾಚರಣೆ. ಗುರುವಿನ ಮಾರ್ಗದರ್ಶನ ಸರಿಯಾಗಿದ್ದರೆ ಶಿಷ್ಯ ಗುರಿ ತಲಪುವುದು ನಿಶ್ಚಿತ. ಅಂತಹ ಗುರುವೆಲ್ಲೇ ಸಿಗಲಿ, ಅವರಿಗೆ ಶರಣು.. ಶರಣು ಎನ್ನುವ ಶಿಷ್ಯಂದಿರು ಇದ್ದೇ ಇದ್ದಾರೆ. ಅಂತಹ ಗುರುಗಳ ಸಾಲಿನಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ದಿನೇಶ್ಚಂದ್ರ ಅವರೂ ಒಬ್ಬರು. ಬಾಳಿಲ ಶಾಲೆಯ ಶಿಕ್ಷಕರೆಲ್ಲರೂ ಹಾಗೆಯೇ. ಅಂತಹ ಅನೇಕ ಶಿಕ್ಷಕರು ನಾಡಿನಲ್ಲಿ ಇದ್ದಾರೆ. ಅವರಿಗೆಲ್ಲಾ ನಮನ ಸಲ್ಲಿಸುವ ನಿಟ್ಟಿನಲ್ಲಿ ಈ ಪೋಕಸ್….
ಒಬ್ಬ ಮೇಷ್ಟ್ರು ತಾನು ಕಲಿಸಿದ ವಿದ್ಯಾರ್ಥಿಗಳೆಲ್ಲರ ಹೆಸರನ್ನು, ವಿದ್ಯಾರ್ಥಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟ. ಶಾಲಾ ದಿನಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಸುಲಭದಲ್ಲಿ ಗುರುತು ಹಿಡಿಯುತ್ತಾರೆ. ಆದರೆ ಇದಕ್ಕೆಲ್ಲ ತದ್ವಿರುದ್ಧವೆಂಬಂತೆ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ಗಣಿತ ಶಿಕ್ಷಕರೊಬ್ಬರು ತಮ್ಮ 29 ವರ್ಷದ ಶಿಕ್ಷಕ ವೃತ್ತಿಯ ಅವಧಿಯಲ್ಲಿ ಕಲಿತ ಎಲ್ಲಾ ಶಿಷ್ಯಂದಿರ ಹೆಸರನ್ನು ನೆನಪಿಟ್ಟುಕೊಂಡು, ಅಷ್ಟೂ ಶಿಷ್ಯಂದಿರಿ ಎಲ್ಲೇ ಸಿಗಲಿ ತಾವೇ ಮಾತನಾಡಿ ಸಂಪರ್ಕವಿಟ್ಟುಕೊಂಡಿರುವುದು ವಿಶೇಷವಾಗಿದೆ.
ಬಾಳಿಲ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಡಿ.ಸಿ ಮೇಷ್ಟ್ರು ಎಂದೇ ಖ್ಯಾತರಾಗಿರುವ ಇವರ ಪೂರ್ಣ ಹೆಸರು ದಿನೇಶ್ಚಂದ್ರ ಕಿಲಂಗೋಡಿ. ಕಳಂಜ ಗ್ರಾಮದ ತಂಟೆಪ್ಪಾಡಿ ಬಳಿಯ ಕಿಲಂಗೋಡಿ ನಿವಾಸಿ. ಪ್ರತಿಭಾ ಕಾರಂಜಿಯೇ ಇರಲಿ, ಇಲಾಖಾ ಸ್ಪರ್ಧೆಗಳೇ ಇರಲಿ ಅಥವಾ ಗಣಿತ ವಿಜ್ಞಾನದ ಸ್ಪರ್ಧೆಗಳೇ ಇರಲಿ ಗೆಲುವಿಗಾಗಿ ಬಾಳಿಲ ಶಾಲೆಯ ಮಕ್ಕಳಿಗೆ ತಮ್ಮ ಡಿ.ಸಿ ಮಾಸ್ಟ್ರು ಸಹಾಯ ಮಾಡುವರೆಂಬ ನಂಬಿಕೆ. ಶಾಲಾ ಆಯೋಜಿತ ಕಾರ್ಯಕ್ರಮಗಳ ಯಶಸ್ಸಿಗೆ ಇವರ ಪ್ಲಾನ್ ಕೂಡಾ ಸೇರಿದೆ.
1500ಕ್ಕಿಂತಲೂ ಶಿಷ್ಯಂದಿರ ನೆನಪಿಟ್ಟಿರುವ ಅಪರೂಪದ ಮೇಷ್ಟ್ರು:ತಮ್ಮ ಕಾರ್ಯವೈಖರಿಗಿಂತಲೂ ಇವರು ಖ್ಯಾತಿ ಪಡೆದುಕೊಂಡಿರುವುದೇ ತಮ್ಮ ಅಗಾಧವಾದ ಸ್ಮರಣ ಶಕ್ತಿಗಾಗಿ. 29 ವರ್ಷಗಳಿಂದ ಶಿಕ್ಷಕ ವೃತ್ತಿ ನಡೆಸುತ್ತಿರುವ ಇವರ ಬಳಿ 1500ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪಾಠ ಹೇಳಿಸಿಕೊಂಡಿದ್ದಾರೆ. ಅಷ್ಟೂ ವಿದ್ಯಾರ್ಥಿಗಳಲ್ಲಿ ಯಾರೇ ಶಾಲೆಗೆ ಭೇಟಿಯಿತ್ತರೂ ಥಟ್ಟನೆ ಅವರ ಬ್ಯಾಚ್ ಸಹಿತ ನೆನಪನ್ನು ಮೆಲುಕು ಹಾಕಬಲ್ಲ ಸ್ಮರಣ ಶಕ್ತಿಯುಳ್ಳವರಾಗಿದ್ದಾರೆ. ತಮ್ಮ ಅವಧಿಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಇಂದು ಹಲವರು ಜಿಲ್ಲಾ ಅಧಿಕಾರಿಯಷ್ಟೇ ಮಾನ್ಯತೆ ಹೊಂದಿರುವವರು, ಖ್ಯಾತ ಪತ್ರಕರ್ತರು, ಪೊಲೀಸ್ ಅಧಿಕಾರಿಗಳು, ವಕೀಲರು, ಅಂಚೆ ಅಧೀಕ್ಷಕರು, ಕೆಎಸ್‍ಆರ್‍ಟಿಸಿ ಅಧಿಕಾರಿ ಸೇರಿದಂತೆ ಬಹು ದೊಡ್ಡ ಹುದ್ದೆಗಳನ್ನು ಅಲಂಕರಿಸಿದವರು ಇದ್ದಾರೆ. ಸಾಮಾನ್ಯವಾಗಿ ಮಕ್ಕಳಿಗೆ ಗಣಿತದ ಮೇಷ್ಟ್ರು ಎಂದರೆ ದೂರದ ಸಂಬಂಧವಿದ್ದರೂ ಬಾಳಿಲ ಶಾಲೆಯ ಅದೇಷ್ಟೋ ಹಳೆ ವಿದ್ಯಾರ್ಥಿಗಳಿಗೆ ಈ ಗಣಿತ ಶಿಕ್ಷಕನೆಂದರೆ ಅಚ್ಚುಮೆಚ್ಚು.
ವಿದ್ಯಾರ್ಥಿ ಪೂರಕವಾದ ಕೆಲಸಗಳೆಂದರೆ ಇವರಿಗೆ ಬಹು ಪ್ರೀತಿ: ಡಿ.ಸಿ ಮೇಷ್ಟ್ರು ತಮ್ಮ ಕಲಿಯುತ್ತಿದ್ದ ಅದೇಷ್ಟೋ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಖರ್ಚನ್ನು ಭರಿಸಿ ಅವರಿಗೆ ದಾರಿದೀಪವಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ತಮ್ಮ ಪರಿಚಯಸ್ಥರ ಮೂಲಕ ಉದ್ಯೋಗವನ್ನೂ ಕೊಡಿಸಿ ಅನ್ನಕ್ಕೆ ದಾರಿ ಮಾಡಿಕೊಟ್ಟ ಹಿರಿಮೆ ಅವರದ್ದು. ತಮ್ಮ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಉದ್ದೇಶದಿಂದ ತಮ್ಮ ಖರ್ಚಿನಲ್ಲಿಯೇ ಕುಮಾರ ಪರ್ವತಕ್ಕೆ, ಬಂಟಮಲೆಗಳಂತಹ ಸ್ಥಳಗಳಿಗೆ ಚಾರಣ ಕರೆದುಕೊಂಡು ಹೋಗುತ್ತಾರೆ. ಡೆಲ್ಲಿ ಬಾಂಬೆ, ಆಗ್ರ, ಹಿಮಾಚಲ ಪ್ರದೇಶಗಳಿಗೆ ಶೈಕ್ಷಣಿಕ ಪ್ರವಾಸಗಳು ಹೋಗುವ ಸಮಯದಲ್ಲಿ ಇವರೇ ಮಕ್ಕಳಿಗೆ ಗೈಡರ್.
ಶಾಲೆಗೂ ಡಿ.ಸಿ ಮೇಷ್ಟ್ರು ಬೆನ್ನೆಲುಬು:ಕೇವಲ ಕರಿ ಹಲಗೆ ಹಾಗು ಬಿಳಿ ಬಳಪಕ್ಕೆ ಸೀಮಿತವಾಗದ ಈ ಮೇಷ್ಟ್ರು ತಮಗೆ ಅನ್ನ ನೀಡಿದ ಶಾಲೆಗೆ ಅತ್ಯಧಿಕ ಅನುದಾನಗಳನ್ನೂ ತರಿಸಿಕೊಟ್ಟಿದ್ದಾರೆ. ತಮ್ಮ ಅಪಾರ ಹಳೆ ವಿದ್ಯಾರ್ಥಿಗಳ ಬಳಗದ ಸಹಾಯದಿಂದ ಶಾಲೆಯನ್ನು ಅಭಿವೃದ್ದಿ ಮಾಡಿಸಿದ್ದು, ಸುತ್ತಲಿನ ಖಾಸಗಿ ಶಾಲೆಗಳೂ ನಾಚುವಂತೆ ಇಲ್ಲಿ ಗುಣಮಟ್ಟವಿದೆ. ಅನೇಕ ಬಾರಿ ಸಂಸದರ ಖೋಟಾ, ಶಾಸಕರ ಖೋಟಾ ಹಾಗು ವಿಧಾನ ಪರಿಷತ್ ಸದಸ್ಯರ ಖೋಟಾ ಅಡಿಯಲ್ಲಿ ಶಾಲೆಗೆ ಅನುದಾನ ಬರಲು ಸಹಾಯ ಮಾಡಿ ಊರಿನ ವಿದ್ಯಾಭಿಮಾನಿಗಳೇ ಶಾಲೆಯೆಡೆಗೆ ತಿರುಗಿ ನೋಡುವಂತೆ ಮಾಡಿರುವುದು ಇವರ ಶ್ರೇಷ್ಠತೆ. ಅನೇಕ ಪ್ರಶಶ್ತಿಗಳು, ಸನ್ಮಾನಗಳನ್ನು ಪಡೆದರೂ ಬೀಗದ ಸರಳ ಶಿಕ್ಷಕರು ಇವರು.
ಹಾಸ್ಟೆಲ್ ವಾರ್ಡನ್ ಆಗಿದ್ದರು: ಹಿಂದೊಮ್ಮೆ ಬಾಳಿಲದಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇತ್ತು. ಆಗ ದಿನೇಶ್ಚಂದ್ರ ಅವರು ಹಾಸ್ಟೆಲ್ ವಾರ್ಡನ್. ವಿದ್ಯಾರ್ಥಿಗಳೆಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾ ಊಟ- ಉಪಹಾರದ ಕಡೆಗೂ ಸೂಕ್ತ ವ್ಯವಸ್ಥೆ ಮಾಡಿಸುತ್ತಿದ್ದ ದಿನೇಶ್ಚಂದ್ರ ಅವರು ಉತ್ತಮ ವಾರ್ಡನ್ ಆಗಿಯೂ ವಿದ್ಯಾರ್ಥಿಗಳಿಗೆ ಇಷ್ಟವಾಗಿದ್ದರು.
ಮಕ್ಕಳೇ ನನ್ನ ಆಸ್ತಿ. ಸಮಾಜಕ್ಕೆ ಹಾಗು ದೇಶಕ್ಕೆ ಸದಾ ಅತುತ್ತಮ ನಾಗರೀಕನ್ನು ಕೊಡುತ್ತಿರುವುದೇ ನನ್ನ ಗುರಿ. ಶಿಕ್ಷಕ ವೃತ್ತಿಯಲ್ಲಿರುವ ಸಂತೋಷ ಮತ್ತೊಂದರಲ್ಲಿ ದೊರೆಯದು.- – ದಿನೇಶ್ಚಂದ್ರ ಕಿಲಂಗೋಡಿ , ಬಾಳಿಲ ಶಾಲಾ ಶಿಕ್ಷಕ
ಡಿ.ಸಿ ಮೇಷ್ಟ್ರು ವಿದ್ಯಾರ್ಥಿಯನ್ನು ಪರಿಪೂರ್ಣನನ್ನಾಗಿಸುವ ಗುರಿಯನ್ನು ಹೊಂದಿರುವುದು ಖುಷಿ ಕೊಟ್ಟಿದೆ,. ಪಾಠ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಾದ ಪರ್ವತ ಚಾರಣ, ಪ್ರವಾಸಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ ಕರೆದುಕೊಂಡು ಹೋಗಿ ಸಂದರ್ಶಿಸುತ್ತಿದ್ದರು. ನನ್ನಂತಹ ಸಾಮಾನ್ಯ ವಿದ್ಯಾರ್ಥಿಯ ನೆನಪಿಟ್ಟುಕೊಂಡಿರುವ ಓರ್ವ ವಿಶೇಷ ಶಿಕ್ಷಕ. – ಶ್ರೀಹರ್ಷ ನೆಟ್ಟಾರು IPS, ಹಿರಿಯ ಅಂಚೆ ಅಧೀಕ್ಷಕರು ಭಾರತೀಯ ಅಂಚೆ ಇಲಾಖೆ ಮಂಗಳೂರು, 2000ನೇ ಇಸವಿ ಬ್ಯಾಚ್ ವಿದ್ಯಾರ್ಥಿ
ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…
ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…
ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…
ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …