ಬೆಳ್ಳಾರೆ : ಆಧುನಿಕ ಜಗತ್ತಿನಲ್ಲಿ ಒಳ್ಳೆಯ ಮಾತುಗಾರರಿಗೆ ತುಂಬಾ ಬೇಡಿಕೆ ಇದೆ. ಅತ್ಯುತ್ತಮವಾಗಿ ಮಾತನಾಡಬಲ್ಲವ ಜಗತ್ತನ್ನೇ ಗೆಲ್ಲಬಲ್ಲ ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಹೇಳಿದರು.
ಅವರು ಬೆಳ್ಳಾರೆ ಜೇಸಿಐ ಆಶ್ರಯದಲ್ಲಿ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರುಗಳಿಗೆ ನಡೆದ ಎರಡು ದಿನಗಳ ಮಾತುಗಾರಿಕಾ ಕಮ್ಮಟದ ಮುಖ್ಯ ತರಬೇತುದಾರರಾಗಿ ಭಾಗವಹಿಸಿ ತರಬೇತಿ ನೀಡಿದರು. ಉತ್ತಮವಾಗಿ ಮಾತನಾಡುವುದು ಒಂದು ಕಲೆ. ವಿಷಯಾಧಾರಿತವಾಗಿ ನಿರರ್ಗಗಳವಾಗಿ ಮಾತಾಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ರಾಜೇಂದ್ರ ಭಟ್ ಕರೆ ನೀಡಿದರು.
ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ, ಉದ್ಯಮಿ ಮಿಥುನ್ ಶೆಣೈ ತರಬೇತಿ ಮಾತುಗಾರಿಕಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿ, ಯುವಕರಿಗೆ ವ್ಯಕ್ತಿತ್ವ ವಿಕಸನದ ತರಬೇತಿಗಳನ್ನು ನೀಡುವ ಮೂಲಕ ಜೇಸೀ ಸಂಸ್ಥೆ ಸಮಾಜಕ್ಕೆ ಪ್ರಬುದ್ಧ ನಾಯಕರನ್ನು ನೀಡುವ ಶಕ್ತಿ ಹೊಂದಿದೆ ಎಂದರು.
ರಾಷ್ಟ್ರೀಯ ತರಬೇತಿದಾರ ರಾಜೇಂದ್ರ ಭಟ್ ಹಾಗೂ ಜೇಸಿಐ ವಲಯ ತರಬೇತುದಾರ ದಿನೇಶ್ ಕಾರ್ಕಳ ಎರಡು ದಿನಗಳ ಕಾಲ ವಿವಿಧ ವಿಷಯಗಳಲ್ಲಿ ಮಾತುಗಾರಿಕಾ ಕಮ್ಮಟ ನಡೆಸಿಕೊಟ್ಟರು.
ಬೆಳ್ಳಾರೆ ಜೇಸಿಐ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷ ಜಯರಾಮ ಉಮಿಕ್ಕಳ, ಯುವಜೇಸೀ ಅಧ್ಯಕ್ಷ ಸಾಗರ್, ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರವೀಣ್ ವಂದಿಸಿದರು.