ಉತ್ತರಾಖಂಡ/ನವದೆಹಲಿ: ಉತ್ತರಾಖಂಡದಲ್ಲಿ ಭೀಕರ ಮಳೆಯಾಗುತ್ತಿದೆ. ಕಳೆದ ವಾರವಷ್ಟೇ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದಾಗಿ ಕೇದಾರನಾಥ ಕಣಿವೆಯಲ್ಲಿ ಭಾರಿ ಹಾನಿಗೆ ಕಾರಣವಾಗಿತ್ತು.ಇದೀಗ ಮತ್ತೆ ಮೇಘಸ್ಫೋಟವಾಗಿದೆ.
ಉತ್ತರಾಖಂಡದ ಪಿಥೋರಗಢದ ಮಾಡ್ಕೋಟ್ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಮೂರು ಮಂದಿ ಪ್ರಾಣ ಕಳೆದುಕೊಂಡರೆ, ಪಕ್ಕದ ಹಳ್ಳಿಯ ಎಂಟು ಜನರು ಕಾಣೆಯಾಗಿದ್ದಾರೆ ಎಂದು ಪಿಥೋರಗಢದ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಘಟನಾ ಸ್ಥಳದಲ್ಲಿ ರಕ್ಷಣಾ ತಂಡವಿದ್ದು, ಕಾರ್ಯಾಚರಣೆ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಪಿಥೋರಗಡ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಪಟ್ಟಣ ಮುನ್ಸಿಯರಿಯಲ್ಲಿ ಸುರಿದ ನಿರಂತರ ಮಳೆಯಿಂದಾಗಿ ನಾಲ್ಕು ಮನೆಗಳು ಕುಸಿದು, ಒಂದು ಸೇತುವೆಗೆ ಹಾನಿಯಾಗಿದೆ. ಭಾರಿ ಮಳೆಯಿಂದಾಗಿ ಗೋರಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಅದರ ಸಮೀಪ ವಾಸಿಸುವ ಜನರನ್ನು ಸ್ಥಳೀಯ ಆಡಳಿತವು ಸುರಕ್ಷಿತ ಪ್ರದೇಶಗಳತ್ತ ಸ್ಥಳಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ನವದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದೆ. ವರುಣನ ಆರ್ಭಟಕ್ಕೆ ಎರಡು ಮಂದಿ ಬಲಿಯಾಗಿದ್ದಾರೆ. ದೆಹಲಿ , ಅಸ್ಸಾಂ, ಬಿಹಾರ, ಒರಿಸ್ಸಾ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ.