ಸಂಪಾಜೆ : ಕಳೆದ ವರ್ಷದ ಕೊಡಗಿನ ಭೀಕರ ಜಲಪ್ರಳಯದಲ್ಲಿ ಹಾನಿಗೀಡಾದ ಊರುಬೈಲು ಸೇತುವೆಯನ್ನು ತಾತ್ಕಾಲಿಕವಾಗಿ ಜಿಲ್ಲಾಡಳಿತದ ವತಿಯಿಂದ ದುರಸ್ತಿಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವರ್ಷವೂ ಮತ್ತೆ ಸುರಿದ ಮಳೆಗೆ ಸೇತುವೆ ಕೊಚ್ಚಿಹೋಗಿತ್ತು. ಇದೀಗ ಸ್ಥಳೀಯರು ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದಾರೆ.
ಮೊನ್ನೆ ದಿನ ಸುರಿದ ಭಾರೀ ಮಳೆಯಿಂದಾಗಿ ಮತ್ತೊಮ್ಮೆ ಊರುಬೈಲು ಸೇತುವೆಯಲ್ಲಿ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದಿದ್ದು, ಸೇತುವೆ ಭಾಗಶ ಹಾನಿಗೀಡಾಗಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರಾದ ಸಂಪಾಜೆ ಪಯಸ್ವಿನಿ ಕೃ ಪ ಸ ಸಂಘದ ಅದ್ಯಕ್ಷ ಯನ್.ಅನಂತ್ ಅವರ ಮುಂದಾಳತ್ವ ದಲ್ಲಿ ಸ್ಥಳೀಯ ಯುವಕರು ಮತ್ತು ಶ್ರೀ ಭಗವಾನ್ ಸಂಘದ ಸದಸ್ಯರು ಶ್ರಮದಾನ ಮಾಡಿ, ಸೇತುವೆಯನ್ನು ದುರಸ್ತಿಗೊಳಿಸಿ ,ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಈ ಕಾರ್ಯದಲ್ಲಿ ಚೆಂಬು ಗ್ರಾಮ ಪಂಚಾಯತ್ ಸದಸ್ಯ ಮನೋಹರ್.ಯನ್.ಸಿ ಪಂಚಾಯತ್ ವತಿಯಿಂದ ಜೆಸಿಬಿ ವ್ಯವಸ್ಥೆ ಮಾಡಿಕೊಡುವ ಮೂಲಕ ಸಹಕರಿಸಿದರು. ಇದರಿಂದಾಗಿ ಶಾಲಾಮಕ್ಕಳು,ಊರವರು ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಕಳೆದ ಕೆಲವು ದಿನಗಳಿಂದ ಮಡಿಕೇರಿ, ಸಂಪಾಜೆ ಭಾಗಶ: ಪ್ರದೇಶ, ಮೊಣ್ಣಂಗೇರಿ ಪ್ರದೇಶದಲ್ಲಿ ಉತ್ತಮ ಮಳೆಯಾಗಿತ್ತು. ಇದೇ ಸಂದರ್ಭ ಅಲ್ಲಲ್ಲಿ ಕುಸಿತ ಹಾಗೂ ಗುಡ್ಡದಲ್ಲಿದ್ದ ಕಳೆದ ವರ್ಷ ಹಾನಿಗೀಡಾದ ಪ್ರದೇಶದ ಮಣ್ಣು ಹಾಗೂ ಮರಗಳು ನೀರಿನೊಂದಿಗೆ ಕೊಚ್ಚಿಕೊಂಡು ಬಂದಿದ್ದವು.