ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಎಂಬಿಎ ಪದವೀಧರ ಮಣಿಪಾಲ ಮೂಲದ 34 ವರ್ಷದ ಆದಿತ್ಯ ರಾವ್ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ. ಎಂಬಿಎ ಪದವೀಧರನಾಗಿ ಆತ ಈ ಕೆಲಸ ಮಾಡಿದ್ದೇಕೆ ?.
ಇಂಜಿನಿಯರಿಂಗ್ ಪದವಿಯ ಬಳಿಕ ಎಂಬಿಎ ಓದಿರುವ ಆದಿತ್ಯ ರಾವ್ ಕೆಲಸವಿಲ್ಲದೆ ಓಡಾಟ ನಡೆಸುತ್ತಿದ್ದ. ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಯ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ತಾಂತ್ರಿಕ ಕಾರಣಗಳಿಂದ ಆತನ ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ಮಾನಸಿಕವಾಗಿ ನೊಂದಿದ್ದ ಇದರಿಂದ 2018ರಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ಸ್ಫೋಟಿಸುವುದಾಗಿ ಹುಸಿ ಬೆದರಿಕೆ ಕರೆ ಮಾಡಿದ್ದ. ಒಟ್ಟು ಮೂರು ಹುಸಿ ಬೆದರಿಕೆ ಕರೆಗಳನ್ನು ಮಾಡಿದ್ದ ಆತನನ್ನು 2018ರ ಆಗಸ್ಟ್ 29ರಂದು ಬಂಧಿಸಲಾಗಿತ್ತು. ನಂತರ ಆತನ ಬಿಡುಗಡೆಯಾಗಿದ್ದ. ಅದಾದ ಬಳಿಕ ಮಣಿಪಾಲದಲ್ಲಿ ಕೆಲ ಸಮಯ ಇದ್ದು ನಂತರ ಮಂಗಳೂರಿನಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಹೋಟೆಲ್ ನಲ್ಲಿ ಸಪ್ಲೈ ಕೆಲಸಕ್ಕೆ ಬಂದವನಿಗೆ ಓದಿನ ಅರ್ಹತೆ ನೋಡಿ ಬಿಲ್ ಮಾಡುವ ಕೆಲಸ ನೀಡಿದ್ದರು. ಹೆಚ್ಚು ಮಾತನಾಡದ ಆದಿತ್ಯ ರಾವ್ ತನ್ನ ಪಾಡಿಗೆ ಇದ್ದ ಎಂದು ತಿಳಿದುಬಂದಿದೆ. ಇದೀಗ ಬಾಂಬ್ ಇರಿಸಿ ಪೊಲೀಸ್ ಅತಿಥಿಯಾಗಿದ್ದಾನೆ.
ಬಾಂಬ್ ತಯಾರು ಮಾಡಿದ್ದು ಹಾಗೂ ಈ ಬಗ್ಗೆ ಪೊಲೀಸ್ ಉನ್ನತ ಮೂಲಗಳ ಪ್ರಕಾರ ಈತ ಯೂಟೂಬ್ ನೋಡಿ ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದು, ಆನ್ ಲೈನ್ ಮೂಲಕವೇ ಅದಕ್ಕೆ ಬೇಕಾದ ವಸ್ತುಗಳನ್ನು ತರಿಸಿದ್ದ ಇದಕ್ಕಾಗಿ ಹಲವು ಬಾರಿ ಪ್ರಯತ್ನ ಮಾಡಿದ್ದ ಎಂದು ತಿಳಿದು ಬಂದಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಬಳಿಕ ಮಾರುವೇಷದಲ್ಲಿ ಬೆಂಗಳೂರಿಗೆ ತೆರಳಿದ್ದ ಬಳಿಕ ಭಯಗೊಂಡು ಮಂಗಳವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದ. ಮನೆಯವರೊಂದಿಗೆ ಹೆಚ್ಚು ಸಂಪರ್ಕವಿಲ್ಲದೆ ಆದಿತ್ಯ ತನ್ನ ಪಾಡಿಗೆ ಇದ್ದ. ಉದ್ಯೋಗದ ಹುಡುಕಾಟ ಎಂದು ಮನೆಯಲ್ಲಿ ಹೇಳುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳುತ್ತವೆ.