ಸುಳ್ಯ: ಗ್ರಾಮ, ನಗರ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಯೋಗಾಯೋಗ ದೊರೆಯಬೇಕು. ತಾನು ಕಲಿತ ಯೋಗ ವಿದ್ಯೆಯನ್ನು ಎಲ್ಲರಿಗೂ ನೀಡಬೇಕು. ಆದುದರಿಂದ ಗ್ರಾಮಗಳಿಗೆ ತೆರಳಿ ಯೋಗ ಕಲಿಸಲು ನಿರ್ಧರಿಸಿದ್ದೇನೆ ಎನ್ನುತ್ತಾರೆ ಯೋಗ ತರಬೇತುದಾರ ಸಂತೋಷ್ ಮುಂಡಕಜೆ. ಎಲ್ಲಾ ಗ್ರಾಮಗಳಲ್ಲಿಯೂ ಯೋಗದ ಕಂಪನ್ನು ಪಸರಿಸುವ ಯೋಜನೆ ರೂಪಿಸಿರುವ ಸಂತೋಷ್ ಈಗಾಗಲೇ ಒಂದು ಗ್ರಾಮದಲ್ಲಿ ಯೋಗ ತರಬೇತಿಯನ್ನು ಪೂರ್ತಿ ಮಾಡಿದ್ದಾರೆ. ಗ್ರಾಮ ಗ್ರಾಮಗಳಲ್ಲಿ ವರ್ಷಪೂರ್ತಿ ಯೋಗ ತರಗತಿಗಳನ್ನು ಮುಂದುವರಿಸುವುದು ಅವರ ಯೋಜನೆ.
Advertisement
ಯೋಗವನ್ನು ಪ್ರಾಣವಾಯುವಿನಂತೆ ತನ್ನ ಸಂಗಾತಿಯಾಗಿಸಿದವರು ಇವರು. ತನ್ನ ನಾಲ್ಕನೇ ತರಗತಿಯಿಂದ ಯೋಗ ಶಿಕ್ಷಣ ಪಡೆಯಲು ಆರಂಭಿಸಿದ ಸಂತೋಷ್ ಕಳೆದ 16 ವರ್ಷಗಳಿಂದ ನಿರಂತರ ಯೋಗಾಭ್ಯಾಸ ಮಾಡುವುದರ ಜೊತೆಗೆ ಹಲವಾರು ಮಂದಿಗೆ ಯೋಗ ಕಲಿಸಿದ್ದಾರೆ. ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಯೋಗ ಶಿಕ್ಷಕರಾಗಿರುವ ಸಂತೋಷ್ ವಿವಿಧ ಕಡೆಗಳಲ್ಲಿ ನಡೆಸಿದ ಯೋಗ ತರಗತಿಗಳ ಮೂಲಕ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿಗೆ ಯೋಗ ಕಲಿಸಿಕೊಟ್ಟಿದ್ದಾರೆ. ದೊಡ್ಡತೋಟ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿದ್ದಾಗ ಯೋಗ ಕಲಿಯಲು ಆರಂಭಿಸಿದರು. ಪಿ.ಪ್ರೇಮಲತಾ ಯೋಗ ಶಿಕ್ಷಕರಾಗಿದ್ದರು. ಆರನೇ ತರಗತಿಯಲ್ಲಿ ವಿಭಾಗಮಟ್ಟದಲ್ಲಿ, ಎಂಟನೇ ತರಗತಿಯಲ್ಲಿ ರಾಷ್ಟ್ರಮಟ್ಟದಲ್ಲಿ, 10ನೇ ತರಗತಿಯಲ್ಲಿ ಮತ್ತು ಪಿಯುಸಿಯಲ್ಲಿದ್ದಾಗ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಡಿಪ್ಲೋಮಾ ಓದುತ್ತಿದ್ದಾಗ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಮಿಂಚಿದ್ದರು.
60ಕ್ಕೂ ಹೆಚ್ಚು ಆಸನಗಳ ಪ್ರವೀಣ:
ಅಮರಮುಡ್ನೂರು ಗ್ರಾಮದ ಮುಂಡಕಜೆಯ ರಾಘವ ಮಣಿಯಾಣಿ-ರಾಜೀವಿ ದಂಪತಿಗಳ ಪುತ್ರ ಸುಳ್ಯದಲ್ಲಿ ಮೆಕ್ಯಾನಿಕ್ ಆಗಿರುವ 24 ವರ್ಷದ ಸಂತೋಷ್ ಆರಂಭದ ನಾಲ್ಕು ವರ್ಷ ಅಂದರೆ ಎಂಟನೇ ತರಗತಿಯವರೆಗೆ ಮಾತ್ರ ಗುರುಗಳಲ್ಲಿ ಯೋಗ ಕಲಿತಿದ್ದರು. ಬಳಿಕ ಪುಸ್ತಕಗಳನ್ನು ಓದಿ, ಪ್ರದರ್ಶನಗಳನ್ನು ನೋಡಿಯೇ ಯೋಗವನ್ನು ಕರಗತ ಮಾಡಿಕೊಂಡಿದ್ದಾರೆ. 60ಕ್ಕೂ ಹೆಚ್ಚು ಆಸನಗಳು, ಪ್ರಾಣಾಯಾಮ, ಸುಮಾರು 40 ಮುದ್ರೆಗಳು, ಅತಿ ವಿಶಿಷ್ಠವಾದ ಜಲನೇತಿ ಕ್ರಿಯೆ, ಜಲಕಪಾಲ ಭಾತಿ, ನೌಳಿಯನ್ನೂ ಮಾಡುತ್ತಾರೆ. ಕಲಿಸುವವರಿಲ್ಲ ಎಂಬ ಕಾರಣಕ್ಕೆ ಯಾರೂ ಯೋಗದಿಂದ ದೂರ ಉಳಿಯಬಾರದು ಗ್ರಾಮೀಣ ಪ್ರದೇಶದ ಜನರಿಗೂ ಯೋಗ ಶಿಕ್ಷಣ ದೊರೆಯಬೇಕು ಎಂಬ ದೃಷ್ಠಿಯಿಂದ ಸಂಚಾರಿ ಯೋಗವನ್ನು ಪ್ರಾರಂಭಿಸಿದ್ದೇನೆ ಎನ್ನುತ್ತಾರೆ ಸಂತೋಷ್.
ಏನಿದು ಗ್ರಾಮ ಗ್ರಾಮಗಳಲ್ಲಿ ಯೋಗ?
ಸುಳ್ಯ ತಾಲೂಕಿನ ಪ್ರತಿ ಮನೆಗಳಿಗೂ ಯೋಗ ಶಿಕ್ಷಣ ತಲುಪಬೇಕು ಎಂಬುದು ಇದರ ಹಿಂದಿರುವ ಯೋಚನೆ. ಅದಕ್ಕಾಗಿ ಸುಳ್ಯ ತಾಲೂಕಿನ ಪ್ರತಿ ಗ್ರಾಮಗಳಿಗೆ ತೆರಳಿ ಅಲ್ಲಿ 15 ದಿನಗಳ ಕಾಲ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಗ್ರಾಮ ಪಂಚಾಯತ್ ಸಭಾಭವನ, ದೇವಸ್ಥಾನ, ಶಾಲೆ ಮತ್ತಿತರ ಕೇಂದ್ರಗಳನ್ನು ಆಯ್ಕೆ ಮಾಡಿ ಅಲ್ಲಿ ಆಸಕ್ತರಿಗೆ ಪ್ರತಿ ದಿನ ಬೆಳಿಗ್ಗೆ ಒಂದು ಗಂಟೆ ಯೋಗ ತರಗತಿ ನಡೆಸಲಾಗುತ್ತದೆ. ಪ್ರತಿ ದಿನ ಎರಡು ಅಥವಾ ಮೂರು ಆಸನಗಳನ್ನು ಕಲಿಸಲಾಗುತ್ತದೆ. ಯೋಗಾಸನ ಮಾಡುವ ವಿಧಾನ ಅದರ ಉಪಯೋಗ, ಆರೋಗ್ಯ ವೃದ್ಧಿಗೆ ಹೇಗೆ ಸಹಕಾರಿ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಆರೋಗ್ಯ ಕಾಪಾಡಲು ಬೇಕಾದ ಅತೀ ಅಗತ್ಯವಾದ ಸುಮಾರು 30 ಆಸನಗಳನ್ನು 15 ದಿನಗಳ ಶಿಬಿರದಲ್ಲಿ ತಿಳಿಸಿಕೊಡಲಾಗುತ್ತದೆ. ಅಲ್ಲದೆ ಪ್ರಾಣಾಯಾಮ, ಮುದ್ರೆಗಳು, ನೈತಿಕ ಶಿಕ್ಷಣಗಳನ್ನು ಬೋಧಿಸಲಾಗುತ್ತದೆ. ಉಬರಡ್ಕ ಗ್ರಾಮದಲ್ಲಿ ಈಗಾಗಲೇ 15 ದಿನಗಳ ಯೋಗ ತರಗತಿಗಳು ಪೂರ್ತಿಗೊಂಡಿದೆ. ಮುಂದೆ ಮರ್ಕಂಜ, ಸುಳ್ಯ, ಮಂಡೆಕೋಲು ಮತ್ತಿತರ ಕಡೆಗಳಿಂದಲೂ ಯೋಗ ತರಗತಿಗಳನ್ನು ನಡೆಸಿಕೊಡುವಂತೆ ಕರೆ ಬಂದಿದೆ. ವರ್ಷಪೂರ್ತಿ ಈ ರೀತಿ ತರಗತಿ ಕೊಡುವ ಉದ್ದೇಶ ಇದೆ. ಯಾರು ಕರೆಯುತ್ತಾರೋ ಅಲ್ಲಿಗೆ ತೆರಳಿ ಯೋಗ ಕಲಿಸಲು ಸಿದ್ಧ ಎಂದು ಸಂತೋಷ್ ಹೇಳುತ್ತಾರೆ.