ನಾನು ಜನೌಷಧಿ ಜಾರಿಗೆ ತಂದ ಮಂತ್ರಿ ಯಲ್ಲ.
ಜನಔಷಧಿಗೆ ಸಂಬಂಧಿಸಿದ ಅಧಿಕಾರಿಯೂ ಅಲ್ಲ.
ಜನ ಔಷಧಿ ಮಳಿಗೆ ಇಟ್ಟುಕೊಂಡ ವ್ಯಾಪಾರಿಯಲ್ಲ.
ಹಾಗಾದರೆ ನಿಮಗೇಕೆ ಇದರ ಉಸಾಬರಿ? ಎಂದು ಪ್ರಶ್ನಿಸುತ್ತಾರೆ!Advertisementಇನ್ನು ಕೆಲವರು ನನ್ನ ಬಳಿ ಕೇಳುತ್ತಾರೆ-” ಜನ ಔಷಧಿ ಮಾಹಿತಿ ಕಾರ್ಯಾಗಾರ ನಡೆಸಿದ್ದಕ್ಕೆ ಸರಕಾರದಿಂದ ಏನಾದರೂ ದುಡ್ಡು ಬರುತ್ತದೆಯೇ? “
ಏನಾದರೂ ಪ್ರತಿಫಲದ ಅಪೇಕ್ಷೆಯಿಲ್ಲದೆ ಒಬ್ಬರು ಒಳ್ಳೆಯ ಕೆಲಸವನ್ನು ಮಾಡುತ್ತಾರೆ ಎಂಬುದನ್ನು ಈ ದೇಶದ ಜನರಿಂದ ಊಹಿಸುವುದು ಕಷ್ಟವಾಗುತ್ತದೆ.
ಪರಿಸ್ಥಿತಿ ಆ ಮಟ್ಟದಲ್ಲಿದೆ.Advertisement
ಹೀಗೆಲ್ಲಾ ಪ್ರಶ್ನೆಗಳು ಎದುರಾದಾಗ ನಾನು ಉತ್ತರಿಸುತ್ತೇನೆ.-” ಜನ ಔಷಧಿಯಲ್ಲಿ ನಾನು ಏನೂ ಅಲ್ಲ . ಅದರಲ್ಲಿ ನಾನು ಒಂದು ಜನವೇ ಅಲ್ಲ.
ಆದರೂ ಜನರಿಗೆ ಉಪಯೋಗಿ ಯಾದ ಯೋಜನೆಯ ಬಗ್ಗೆ ಜನರಿಗೆ ತಿಳಿಸುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ಏಕೆಂದರೆ ” ಅಧಿಕಾರಿ ನಾನಲ್ಲ, ಅಧಿಕಾರ ನನಗಿಲ್ಲ” ಎಂಬ ಒಂದು ಸ್ಥಿತಿ
ನನ್ನದು ಆಗಿರುವುದರಿಂದ ನನ್ನ ಪರಿಮಿತಿಯಲ್ಲಿ ಮಾಹಿತಿಯನ್ನಷ್ಟೇ ನಾನು ನೀಡಬಹುದಲ್ಲವೇ?
ಕೇಂದ್ರ ಸರಕಾರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್ ಅವರು ಜನಔಷಧಿ ಯೋಜನೆಯನ್ನು ಮೋದಿಯವರ ನೇತೃತ್ವದಲ್ಲಿ ಜಾರಿಗೆ ತಂದರು. ಅವರಿಗೆ ಆ ಖಾತೆಯನ್ನು ನೀಡಿದಾಗ ಅದೊಂದು ಉಪಯೋಗಕ್ಕೆ ಬಾರದ ಖಾತೆ ಎಂಬ ಅಭಿಪ್ರಾಯ ಎಲ್ಲರಲ್ಲೂ ಇತ್ತು. ಆದರೆ ಅದನ್ನು ಸವಾಲಾಗಿ ಸ್ವೀಕರಿಸಿ ಒಂದು ಹೊಸ ಪರಿವರ್ತನೆಯು ಆರೋಗ್ಯ ಕ್ಷೇತ್ರದಲ್ಲಿ ಉಂಟಾಗುವಂತಹ ನವನವೀನವಾದ ಈ ಯೋಜನೆಯನ್ನು ರೂಪಿಸಿದರು.
ಸ್ವಾತಂತ್ರ್ಯ ಬಂದು ಕಳೆಯಿತು ವರುಷ ಎಪ್ಪತ್ತು
ಬರಲಿಲ್ಲ ಇಂಥ ಯೋಜನೆ ಯಾವತ್ತೂ.
ಜನಔಷಧಿ ಬಂದಿದೆ ಈ ಹೊತ್ತು
ಅರಿಯಿರಿ ಜನೌಷಧಿಯ ತಾಕತ್ತು
ಜನರು ಯಾವುದೇ ಬೇಡಿಕೆಯಿಡದೆ, ಸರಕಾರವೇ ಜನರ ಅಗತ್ಯವನ್ನು ಪರಿಗಣಿಸಿ ಈಗ ಬಂದಂತಹ ಯೋಜನೆ , ಸ್ವಾತಂತ್ರ್ಯಬಂದ ನಂತರದ 70
ವರ್ಷಗಳಲ್ಲಿ ಇರಲಿಲ್ಲ. ಜಾರಿಗೆ ಬಂದು ಎರಡು ವರ್ಷಗಳು ಕಳೆದಿವೆ. ಇನ್ನೂ ಮಗು. ಅಂಬೆಗಾಲಿಟ್ಟು, ಎದ್ದು ಕುಳಿತು, ನಡೆದಾಡಿ, ಹಾಲುಂಡು ಬೆಳೆದು ಶಾಲೆಗೆ ಸೇರಿಸಲು ಐದು ವರ್ಷಗಳೇ ಬೇಕು. ಸಣ್ಣಪುಟ್ಟ ಕೊರತೆಗಳು ಸ್ವಲ್ಪ ಸಮಯದಲ್ಲಿ ಸರಿ ಹೋಗಬಹುದು.
ಆದರೆ ಕೆಲವೊಬ್ಬರು ಕೇವಲ ತಾವು ಕೇಳಿದ ಔಷಧಿಗಳು ಜನ ಔಷಧಿ ಮಳಿಗೆಯಲ್ಲಿ ಸಿಗಲಿಲ್ಲವೆಂದು ಆದಲ್ಲಿ, ಇಡೀ ಜನಔಷಧಿ ಯೋಜನೆಯನ್ನೇ ತೆಗಳುವಂತಹ ವ್ಯಕ್ತಿಗಳನ್ನು ಕಂಡಿದ್ದೇನೆ. ಆಗ ಮಾತ್ರ ಮನಸ್ಸಿಗೆ ತುಂಬಾ ನೋವಾಗುತ್ತದೆ. ಏಕೆಂದರೆ ಯೋಜನೆಯ ವ್ಯಾಪ್ತಿಯನ್ನು ,ಸಾಮರ್ಥ್ಯವನ್ನು ಇವರು ಅರ್ಥ ಮಾಡಿಕೊಳ್ಳಲಿಲ್ಲವಲ್ಲ ಎಂಬ ಕಾರಣಕ್ಕೆ. ಕೆಲವರಿಗೆ ಭೋಜನವು ಎಷ್ಟೇ ಚೆನ್ನಾಗಿದ್ದರೂ ಕೂಡ” ಸಾರಿಗೆ ಸ್ವಲ್ಪಉಪ್ಪು ಹೆಚ್ಚಾಯಿತು” ಎಂಬ ರೀತಿಯ ಸಣ್ಣ ಕೊರತೆಯನ್ನು ಹೇಳದಿದ್ದರೆ ರಾತ್ರಿ ನಿದ್ದೆ ಬೀಳುವುದಿಲ್ಲ! ಅದೆಲ್ಲ ಹಾಗಿರಲಿ. ಈಗ ಜನೌಷಧಿಯ ಪ್ರಯೋಜನದ ಮಹತ್ವವನ್ನು ಉದಾಹರಣೆಯೊಂದಿಗೆ ನಿಮ್ಮ ಮುಂದಿಡುತ್ತೇನೆ.
ವ್ಯಕ್ತಿಯೊಬ್ಬರಿಗೆ ಅಪಸ್ಮಾರಕ್ಕೆ ಬಳಸುವ leveteracetam 500 mg ಮಾತ್ರೆಯು ದಿನಕ್ಕೆ ಆರು ಬೇಕಾಗುತ್ತಿತ್ತು. ಆ ರೀತಿಯಲ್ಲಿ ವೈದ್ಯರ ಸಲಹೆ ಪ್ರಕಾರ ತಿಂಗಳಿಗೆ 180 ಮಾತ್ರೆಗಳು ಅವರ ಅಗತ್ಯವಾಗಿತ್ತು. ಅಂದರೆ 10 ಮಾತ್ರೆಯ 18 ಪಟ್ಟಿಗಳು ಬೇಕಾಗಿತ್ತು. 10 ಮಾತ್ರೆಯ ಬಂದು ಪಟ್ಟಿಗೆ ಕಂಪೆನಿಯ ಔಷಧ ವಾದರೆ ಅದರ ಬೆಲೆ ರೂಪಾಯಿ.130 ಆಗಿತ್ತು. ಅಂದರೆ ತಿಂಗಳಿಗೆ 2340 ರೂಪಾಯಿ ಅವರಿಗೆ ಖರ್ಚಾಗುತ್ತಿತ್ತು. ಆದರೆ ಜನ ಔಷಧಿ ಯಲ್ಲಿ ಈ ಮಾತ್ರೆಗಳನ್ನು ಕೊಂಡ ನಂತರ ಒಂದು ತಿಂಗಳ ಮಾತ್ರೆಗೆ ಈಗ ಖರ್ಚು ಆಗುತ್ತಿರುವುದು
ಕೇವಲ 970 ರೂಪಾಯಿಗಳು.
ಇದೇ ರೀತಿಯಲ್ಲಿ ರಕ್ತದೊತ್ತಡ, ಸಕ್ಕರೆಕಾಯಿಲೆ, ಹೃದಯದ ಕಾಯಿಲೆ ಇತ್ಯಾದಿ ಕಾಯಿಲೆಗಳ ಮಾತ್ರೆಗಳು ಜನ ಔಷಧಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿರುತ್ತದೆ. ಸಾಧಾರಣವಾಗಿ ಖಾಸಗಿ ಕಂಪೆನಿಗಳ ಔಷಧಗಳ ಬೆಲೆಗಿಂತ 30 ಶೇಕಡಾ ರಿಂದ 80 ಶೇಕಡಾದಷ್ಟು ಕಡಿಮೆ ಬೆಲೆ ಇರುತ್ತದೆ.
1.ಹಾಗಾದರೆ ಈ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ ಎಂದರೇನು?
ಪ್ರಧಾನಮಂತ್ರಿ ಜನೌಷಧಿ ಕೇಂದ್ರ ವು ಭಾರತ ಸರಕಾರದ ಔಷಧ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟಿರುವ ಜನೆರಿಕ್ ಔಷಧಿಗಳ ಮೆಡಿಕಲ್ ಸ್ಟೋರ್ ಆಗಿರುತ್ತದೆ. ಬ್ಯೂರೋ ಆಫ್ ಫಾರ್ಮಾ ಆಫ್ ಫಾರ್ಮಾಸ್ಯುಟಿಕಲ್ಸೊಸೈಟೀಸ್ ಆಫ್ ಇಂಡಿಯಾ ಅಂದರೆ ಬಿ.ಪಿ .ಪಿ . ಐ. ಎಂದು ಕರೆಯಲ್ಪಡುವ ಘಟಕದಿಂದ ಉತ್ಪಾದನೆ ಮತ್ತು ವಿತರಣೆಯ ಕುರಿತಾದ ನಿಯಂತ್ರಣವನ್ನು ಹೊಂದಿದೆ.
2. ಜನ ಔಷಧಿ ಎಂದರೇನು?
ಜನ ಔಷಧಿ ಯಲ್ಲಿ ಕಂಪೆನಿಯ ಅಥವಾ ಬ್ರಾಂಡ್ ನ ಹೆಸರು ಇರುವುದಿಲ್ಲ. ಕೇವಲ ಅದರಲ್ಲಿರುವ ಔಷಧದ ಹೆಸರು ಮಾತ್ರ ನಮೂದಿತವಾಗಿರುತ್ತದೆ.
3. ಜನಔಷಧಿಗಳು ಕಡಿಮೆ ಬೆಲೆಯಲ್ಲಿ ದೊರಕುವುದು ಹೇಗೆ?
ಖಾಸಗಿ ಕಂಪೆನಿ ಔಷಧ ಗಳಂತೆ ಅಧಿಕ ತಯಾರಿಕಾ ವೆಚ್ಚ ಜಾಹಿರಾತು ವೆಚ್ಚ ,ಮಾರುಕಟ್ಟೆ ವೆಚ್ಚ ಹೋಲ್ಸೇಲ್ ,ರಿಟೇಲರ್ ,ಇತರ ಕಮಿಷನ್ ಗಳು ತೆರಿಗೆ ಇದಾವುದು ಇಲ್ಲದ ಕಾರಣ ಕಡಿಮೆ ಬೆಲೆಗೆ ದೊರಕುತ್ತದೆ. ಆದುದರಿಂದ “ಕಡಿಮೆ ಬೆಲೆಯ ಔಷಧಿ ಕಡಿಮೆ ಗುಣಮಟ್ಟದ್ದು “ಎಂಬ ಅವಸರವೂ, ದುರದೃಷ್ಟಕರವೂ ಆದ ತೀರ್ಮಾನಕ್ಕೆ ಬರಬೇಡಿ! ಏಕೆಂದರೆ 5000 ರೂಪಾಯಿ ಬೆಲೆಯ ಸೀರೆ ಉತ್ತಮ ಗುಣಮಟ್ಟದ್ದು ಹಾಗೂ 2000 ರೂಪಾಯಿ ಬೆಲೆಯ ಸೀರೆ ಕಡಿಮೆ ಗುಣಮಟ್ಟದ್ದು ಎಂಬ ರೀತಿಯ ಲೆಕ್ಕಾಚಾರಗಳು ಈ ಔಷಧಗಳಿಗೆ ಅನ್ವಯಿಸುವುದಿಲ್ಲ! ಎಂಬುದು ನಿಮಗೆ ತಿಳಿದಿರಲಿ. ಸಾಚಾ ಆಗಿದ್ದರೂ ಕೂಡ ಕಡಿಮೆ ಬೆಲೆಯದ್ದು ಎಂದಾಕ್ಷಣ ಅದರ ಬಗ್ಗೆ ಸಂಶಯಿಸುವ ಪ್ರವೃತ್ತಿ ಭಾರತೀಯ ಜನತೆಯಲ್ಲಿದೆ. ಇದರ ಲಾಭವನ್ನು ಮಾರಾಟಗಾರರು ಪೂರ್ಣವಾಗಿ ಬಳಸಿಕೊಳ್ಳುತ್ತಾರೆ ಕೂಡ!
4. ಜನ ಔಷಧಿಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯೇ?
ಇವುಗಳು ಇತರ ಕಂಪನಿ ಔಷಧ ಗಳಂತೆಯೇ ಸುರಕ್ಷಿತವೂ, ಪರಿಣಾಮಕಾರಿಯೂ ಆಗಿವೆ. ಏಕೆಂದರೆ ಇವುಗಳು ಪ್ರತಿಷ್ಠಿತ ಎನ್. ಎ .ಬಿ .ಎಲ್ ಪ್ರಯೋಗಶಾಲೆಯಲ್ಲಿ ಔಷಧೀಯ ಗುಣಮಟ್ಟ ಪರೀಕ್ಷೆಗೆ ಒಳಪಟ್ಟು, ಗುಣಮಟ್ಟದ ದೃಢೀಕರಣ ಗೊಂಡ ನಂತರ ಮಾರುಕಟ್ಟೆಗೆ ಬರುತ್ತವೆ. ಅದರಿಂದ ಯಾವುದೇ ಔಷಧವನ್ನು ಆದರೂ ಕಣ್ಣಿನಿಂದ ನೋಡಿದ ತಕ್ಷಣ ಅಥವಾ ಅದರ ಹೆಸರು ಕೇಳಿದ ತಕ್ಷಣ ಔಷಧ ಚೆನ್ನಾಗಿದೆ ಅಥವಾ ಇಲ್ಲವೆಂದು ಹೇಳುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಗುಣಮಟ್ಟ ದೃಢೀಕರಣ ವು ಯಾವುದೇ ವೈದ್ಯರ ವ್ಯಾಪ್ತಿ ಕೂಡ ಅಲ್ಲ. ಅದು ಔಷಧ ವಿಜ್ಞಾನದಲ್ಲಿ ಪದವಿ ಪಡೆದವರು ಅಂದರೆ ಡಿ. ಫಾರ್ಮ್., ಬಿ ಫಾರ್ಮ್, ಎಂ ಫಾರ್ಮ್ ಪದವಿ ಓದಿದವರ ವ್ಯಾಪ್ತಿಯಲ್ಲಿ ಬರುತ್ತದೆ. ಅವರಾದರೂ ಕೂಡ ಪರೀಕ್ಷೆಗೆ ಒಳಪಡಿಸದೆ ಔಷಧಗಳ ಗುಣಮಟ್ಟ ಹೇಳುವುದು ಸಾಧ್ಯವಿಲ್ಲ. ಆದಕಾರಣ ಜನಔಷಧಿ ಗುಣಮಟ್ಟ ಸರಿಯಿಲ್ಲವೆಂದು ಯಾವುದೇ ವೈದ್ಯರು ಅಥವಾ ರೋಗಿಗಳು ಹೇಳಿದರು ಕೂಡ ನೀವು ಅದಕ್ಕೆ ಕಿವಿ ಕೊಡಬೇಕಾದ ಅಗತ್ಯವಿಲ್ಲ.
5. ಜನ ಔಷಧಿ ಯನ್ನು ಯಾರಿಂದ, ಹೇಗೆ ತಿಳಿದುಕೊಳ್ಳುವುದು?
ನೀವು ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧವನ್ನು, ಅಥವಾ ವೈದ್ಯರಿಂದ ನೀಡಲ್ಪಟ್ಟಿರುವ ಯಾವುದೇ ಔಷಧಿಯ ಚೀಟಿಯನ್ನು ಜನ ಔಷಧಿ ಕೇಂದ್ರಕ್ಕೆ ತಂದರೆ ,ಔಷದ ಕೇಂದ್ರದಲ್ಲಿರುವ ಅರ್ಹತಾ ವ್ಯಕ್ತಿಯು ನೀವು ಮೊದಲು ತೆಗೆದುಕೊಳ್ಳುತ್ತಿದ್ದ ಔಷಧಕ್ಕೆ ಸಮಾನವಾದ ಜನ ಔಷಧಿಯನ್ನು ಕೊಡುತ್ತಾರೆ. ಅದರ ಕಂಪನಿ ಅಥವಾ ಬ್ರಾಂಡ್ ಹೆಸರನ್ನು ನೋಡಿ ಅಲ್ಲ, ಅದರೊಳಗಿನ ಔಷಧದ ಹೆಸರನ್ನು ನೋಡಿ.
6. ಜನವಸತಿಯಲ್ಲಿ ಎಲ್ಲಾ ಕಾಂಬಿನೇಷನ್ ಔಷಧಗಳು ದೊರೆಯುತ್ತವೆಯೇ?
ಒಂದು ಅಥವಾ ಎರಡು ಕಾಂಬಿನೇಷನ್ ಗಳ ಎಲ್ಲಾ ಔಷಧಗಳು ದೊರೆಯುತ್ತವೆ. ಆದರೆ ಕೆಲವೊಮ್ಮೆ ಎರಡು ಅಥವಾ ಮೂರು ಕಾಂಬಿನೇಷನ್ನು ಗಳು ಇಲ್ಲದ ಸಂದರ್ಭದಲ್ಲಿ ಅರ್ಹತಾ ವ್ಯಕ್ತಿಯು ಆ ಕಾಂಬಿನೇಷನ್ ಗೆ ಸಮವಾದ 2 ಬೇರೆಬೇರೆ ಔಷಧಿಗಳನ್ನು ನೀಡುತ್ತಾರೆ. ಆಗ ನೀವು ಔಷಧಗಳ ಸಂಖ್ಯೆಯ ಕುರಿತು ಚಿಂತಿಸಬೇಕಾದ ಅಗತ್ಯವಿಲ್ಲ. ನೀವು ಮೊದಲು ತೆಗೆದುಕೊಳ್ಳುತ್ತಿದ್ದ ಮಾತ್ರೆಯಲ್ಲಿ ಇರುವ ಔಷಧಗಳನ್ನೇ ,ನೀವು ಈಗ ಬೇರೆಬೇರೆಯಾಗಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಅರ್ಥಮಾಡಿಕೊಳ್ಳಬೇಕು.
ಉದಾಹರಣೆಗೆ,
metformin 500 mg + glemeperide 2mg ಇರುವ ಮಾತ್ರೆಯನ್ನು ನೀವುತೆಗೆದುಕೊಳ್ಳುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆದರೆ ಜನೌಷಧಿ ಮಳಿಗೆಯಲ್ಲಿ ಈ ಎರಡು ಔಷಧಿಗಳಿರುವ ಒಂದೇ ಮಾತ್ರೆ ಲಭ್ಯವಿಲ್ಲ ಎಂದು ಇಟ್ಟುಕೊಳ್ಳೋಣ. ಆಗ ಔಷಧ ಅಂಗಡಿಯಲ್ಲಿನ ಅರ್ಹತಾ ವ್ಯಕ್ತಿಯು ಆ ಮಾತ್ರೆಗೆ ಸಮಾನವಾಗಿ ಎರಡು ಬೇರೆ ಬೇರೆ ಮಾತ್ರೆಗಳನ್ನು ಕೊಡಬಹುದು.metformin 500 mg ಎಂಬುದಕ್ಕೆ ಒಂದು ಮಾತ್ರೆ, glemeperide 2 mg ಎಂಬುದಕ್ಕೆ ಇನ್ನೊಂದು ಮಾತ್ರೆ ಕೊಡಬಹುದು. ಆಗ ಈ ಎರಡು ಮಾತ್ರೆಗಳನ್ನು ತೆಗೆದುಕೊಂಡರೂ ಕೂಡ, ನೀವು ಮೊದಲು ಒಂದು ಮಾತ್ರೆ ಸೇವಿಸುತ್ತಿದ್ದಷ್ಟೇ ಪರಿಣಾಮ.
7. ಜನ ಔಷಧಿ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?
ಔಷಧಗಳ ಪ್ಯಾಕಿಂಗ್ ಅಥವಾ ಲೇಬಲ್ ಮೇಲೆ “ಭಾರತೀಯ ಜನೌಷಧಿ ಪರಿಯೋಜನ” ಎಂದು ನಮೂದಿಸಿದ್ದರೆ ಮಾತ್ರ ಅದು ಜನಔಷಧಿ ಆಗಿರುತ್ತದೆ. ಹಾಗಲ್ಲದಿದ್ದರೆ ಅದು ಯಾವುದೇ ಅಂಗಡಿಯಿಂದ ತೆಗೆದುಕೊಂಡದ್ದು ಆಗಿದ್ದರೂ ಕೂಡ ಜನ ಔಷಧಿ ಅಲ್ಲ.
8. ಕಂಪನಿ ಔಷಧಿ ಹಾಗೂ ಜನ ಔಷಧಿಗಳಿಗೆ ಪ್ಯಾಕಿಂಗ್ ನಲ್ಲಿ ವ್ಯತ್ಯಾಸವಿದೆಯೇ?
ಖಂಡಿತವಾಗಿಯೂ ವ್ಯತ್ಯಾಸಗಳಿವೆ. ಒಳಗೆ ಇರುವ ಔಷಧ ಒಂದೇ ಆಗಿದ್ದರೂ ಕೂಡ ಹೊರನೋಟಕ್ಕೆ ವ್ಯತ್ಯಾಸ ಕಾಣುತ್ತದೆ. ಆದುದರಿಂದ ನೀವು ಒಳಗೆ ಇರುವ ಮದ್ದಿನ ಹೆಸರುಗಳನ್ನು ಪರಿಗಣಿಸಬೇಕೇ ಹೊರತು ಹೊರಗಿನ ರೂಪವನ್ನು ಅಲ್ಲ. ಆದುದರಿಂದ ಔಷಧಗಳ ಬಣ್ಣ ,ಲೇಬಲ್ ನ ರೀತಿ ಹಾಗೂ ಹೊರನೋಟದ ವ್ಯತ್ಯಾಸ ಗಳ ಬದಲಿಗೆ ಔಷಧಿಗಳಲ್ಲಿ ಇರುವ ಮೂಲ ಔಷಧದ ಹೆಸರನ್ನು ಗಮನಿಸುವುದನ್ನು , ಅರಿತು ಕೊಳ್ಳುವುದನ್ನು ರೂಢಿಸಿಕೊಳ್ಳಿ. ಔಷಧಗಳಲ್ಲಿನ ಮದ್ದಿನ ಮೂಲ ಹೆಸರು ಹಾಗೂ ಡೋಸೇಜ್( ಪ್ರಮಾಣ) ಪ್ರಾಮುಖ್ಯ.
9. ಯಾವ ವರ್ಗದ ಔಷಧಗಳು ಸಿಗುತ್ತವೆ?
ರಕ್ತದೊತ್ತಡ ,ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್, ಹೃದಯ ಕಾಯಿಲೆ , ನರಮಂಡಲ ಇತ್ಯಾದಿ ಎಲ್ಲಾ ಶಾರೀರಿಕ ಹಾಗೂ ಮಾನಸಿಕ ರೋಗಗಳಿಗೆ ಔಷಧಗಳು,. ನೋವು, ಜ್ವರ ,ಜೀರ್ಣಾಂಗ, ಮೂತ್ರಜನಕಾಂಗ, ಶ್ವಾಸಕೋಶ ,ಎಲುಬು ಕೀಲುಗಳಿಗೆ ಸಂಬಂಧಿಸಿದ ತೊಂದರೆ ಇತ್ಯಾದಿಗಳಿಗೆ. ಆಂಟಿಬಯೋಟಿಕ್ ಮಾತ್ರೆಗಳು, ಇಂಜೆಕ್ಷನ್ ಗಳು ಹಾಗೂ ಸರ್ಜಿಕಲ್ ವಸ್ತುಗಳು ಕೂಡ ಲಭ್ಯವಿದೆ.
10. ಜನ ಔಷಧಿ ಗಳು ಎಲ್ಲಿ ದೊರಕುತ್ತವೆ?
ಇವುಗಳು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಮಳಿಗೆಗಳಲ್ಲಿ ಮಾತ್ರ ದೊರಕುತ್ತವೆ. ಇತರ ಕಂಪನಿ ಔಷಧಗಳ ಮೆಡಿಕಲ್ ಅಂಗಡಿಗಳಲ್ಲಿ ಇವು ಲಭ್ಯ ಇರುವುದಿಲ್ಲ. ಜನೌಷಧಿ ಮಳಿಗೆಗಳಲ್ಲಿ ಇತರ ಕಂಪೆನಿಗಳ ಔಷಧಗಳನ್ನು ಮಾರುವ ಅವಕಾಶ ಇಲ್ಲ., ಅದಕ್ಕೆ ಸರಕಾರದ ಅನುಮತಿ ಕೂಡ ಇಲ್ಲ.
ಆದುದರಿಂದ ಇದರ ಉಪಯೋಗಗಳ ಕುರಿತಾಗಿ, ಇದರ ಲಭ್ಯತೆಯ ಕುರಿತಾಗಿ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ನಾವು ಮಾಡುವ ಈ ಜನ ಔಷಧಿ ಮಾಹಿತಿ ಕಾರ್ಯಾಗಾರ ಗಳಿಂದ ಇಂದು ಕರ್ನಾಟಕದಲ್ಲಿ ಲಕ್ಷಾಂತರ ಮಂದಿ ಔಷಧಿಗಳನ್ನು ಬಳಸಿ ತಮ್ಮ ದುಡ್ಡನ್ನು ಉಳಿತಾಯ ಮಾಡಿಕೊಂಡಿದ್ದಾರೆ. ಹಾಗಾಗಿ” ಜನಔಷಧಿ ಅವರ್ನೆಸ್”(everness ಅಂದರೆ ಇದು, ಈ ಯೋಜನೆ ಎಂದೆಂದಿಗೂ ಶಾಶ್ವತ ವಾಗಲಿ) ಮತ್ತು “ಜನಔಷಧಿ ಅವೇರ್ನೆಸ್” (awareness ಅಂದರೆ ಇದರ ಕುರಿತಾಗಿ ಅರಿವು ಮೂಡಲಿ).
ಕೊನೆಯದಾಗಿ ಒಂದು ಮಾತು.
ಕೆಲವೊಂದು ಲಭ್ಯವಿಲ್ಲದ ಔಷಧಗಳು ಇನ್ನು ಮುಂದೆ ಜನವಸತಿಯಲ್ಲಿ ಸಿಗುವಂತಾಗಲಿ ಉದಾಹರಣೆಗೆ ಕಣ್ಣಿನ ಗ್ಲೂಕೋಮ ಕಾಯಿಲೆಗೆ ಬಳಸುವ ದುಬಾರಿ ವೆಚ್ಚದ ಔಷಧಗಳು, ನರ ಮಾನಸಿಕ ಕಾಯಿಲೆಗಳ ಚಿಕಿತ್ಸೆಗೆ ಬೇಕಾದ ದುಬಾರಿ ಔಷಧಗಳು, ಮತ್ತು ಅಸ್ತಮ ಇನ್ಹೇಲರ್ ಗಳು ಇದರಲ್ಲಿ ನಿರಂತರವೂ ಸಿಗುವಂತೆ ಆಗಲಿ.
ಅಷ್ಟೇ ಅಲ್ಲದೆ, ಮೋದಿಯವರ ಆಶಯದಂತೆ ಹಳ್ಳಿಹಳ್ಳಿಯಲ್ಲೂ ಈ ಜನ ಔಷಧಿ ಕೇಂದ್ರಗಳು ದೊರೆಯುವಂತಾಗಲಿ.
ಆದರೆ ಈ ಆಶಯವನ್ನು ಈಡೇರಿಸಲು ಸಣ್ಣ ತೊಡಕು ಇದೆ. ಅದೇನೆಂದರೆ ಔಷಧಿ ಮಳಿಗೆ ಆರಂಭಿಸಲು ಬೇಕಾದ ಅನುಮತಿಯನ್ನು ಪಡೆಯುವುದಕ್ಕೆ ಅಗತ್ಯವಿರುವ, ಕಾನೂನುಬದ್ಧ ಕ್ರಿಯೆಗೆ ಬೇಕಾದ ಅರ್ಹತಾ ವ್ಯಕ್ತಿಗಳ ಕೊರತೆ. ಅಂದರೆ ಡಿ .ಫಾರ್ಮಾ ,ಬಿ .ಫಾರ್ಮ ಆದ ವ್ಯಕ್ತಿಗಳ ಕೊರತೆ. ಈ ಕಾರಣಕ್ಕೋಸ್ಕರ ಜನ ಔಷಧಿ ಮಳಿಗೆ ತೆರೆಯುವ ಅಪೇಕ್ಷೆ ಇದ್ದರೂ ಕೂಡ ಬಹುಸಂಖ್ಯೆಯಲ್ಲಿ ಅವುಗಳನ್ನು ತೆರೆಯಲು ಅಡ್ಡಿಯಾಗುತ್ತಿದೆ. ಆದಕಾರಣ ಕೇಂದ್ರ ಸರಕಾರವು ಮೂರರಿಂದ ನಾಲ್ಕು ತಿಂಗಳ ಅವಧಿಯ ಫಾರ್ಮಸಿ ಅಸಿಸ್ಟೆಂಟ್ ತರಬೇತಿಯನ್ನು ನೀಡಿ, ಅವರಿಗೆ ಕಾನೂನುಬದ್ಧವಾಗಿ ಜನೌಷಧಿ ಮಳಿಗೆಗಳನ್ನು ತೆರೆಯಲು ಮತ್ತು ಅವುಗಳಲ್ಲಿ ಕೆಲಸ ಮಾಡಲು ಸರ್ಟಿಫಿಕೇಟ್ ಗಳನ್ನು ನೀಡಿದರೆ ಈ ಕೊರತೆಯನ್ನು ನೀಗಿದಂತಾಗುತ್ತದೆ. ದೇಶವ್ಯಾಪಿ ಯಾದ ಯಶಸ್ಸನ್ನು ಈ ಯೋಜನೆ ಬಯಸುವುದಾದರೆ ಈ ಕೋರ್ಸನ್ನು ಆರಂಭಿಸಬೇಕಾದ ಅಗತ್ಯವಿದೆ.
ಕೊನೆಯದೊಂದು ಎಚ್ಚರಿಕೆಯ ಮಾತು.
ಒಬ್ಬನೇ ವ್ಯಕ್ತಿಯು ಜನೌಷಧಿ ಮಳಿಗೆ ಹಾಗೂ ಇತರ ಕಂಪೆನಿಗಳ ಔಷಧಿ ಮಳಿಗೆ ಯನ್ನು ಒಂದೇ ಕಡೆಯಲ್ಲಿ ಅಕ್ಕಪಕ್ಕ ಹೊಂದಿದ್ದರೆ ಆ ಸಂದರ್ಭದಲ್ಲಿ ಆ ವ್ಯಕ್ತಿಯ ವ್ಯಾಪಾರಿ ಮನೋಭಾವ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರವಹಿಸಿ ! ನೀವು ಜನಔಷಧಿ ಕೊಳ್ಳಲೆಂದು ಹೋದಾಗ ,ಆತ ಎರಡು ಕಾರಣಗಳನ್ನು ಕೊಡಬಹುದು. ಒಂದು, ನೀವು ಕೇಳಿದ ಔಷಧಿ ಸರಬರಾಜು ಆಗುತ್ತಿದ್ದರೂ, ಆಗುವುದಿಲ್ಲವೆಂದು ಹೇಳಬಹುದು. ಎರಡು, ಬಂದ ಔಷಧ ಇದ್ದರೂ ಕೂಡ, ಅದು ಇಲ್ಲವೆಂದು ಹೇಳಿ ತನಗೆ ಲಾಭದಾಯಕವಾದ ಇತರ ಕಂಪನಿ ಔಷಧಗಳನ್ನು ಸ್ವಲ್ಪ ರಿಯಾಯಿತಿ ದರದಲ್ಲಿ(??!) ನಿಮಗೆ ನೀಡಬಹುದು.!!! ಆದಕಾರಣ ಅದರ ಲಭ್ಯತೆಯ ಬಗ್ಗೆ , ಅದರ ಬೆಲೆಯ ಬಗ್ಗೆ,” ಭಾರತೀಯ ಜನೌಷಧಿ ಪರಿಯೋಜನ “ಎಂದು ಅದರಲ್ಲಿ ಮುದ್ರಿಸಿದ್ದರ ಬಗ್ಗೆ ಸ್ಪಷ್ಟವಾದ ಚಿತ್ರಣ ನಿಮಗೆ ಇರಲಿ.
ಹೆಚ್ಚಿನ ಮಾಹಿತಿಗೆ,
ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು
ಪ್ರಸಾದ್ ಆಯುರ್ವೇದ ಹೆಲ್ತ್ ಕೇರ್, ಪುರುಷರಕಟ್ಟೆ ಪುತ್ತೂರು.
ಮೊಬೈಲ್.9740545979
rpbangaradka@gmail.com.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…