ಬೆಳ್ತಂಗಡಿ: ಎಲ್ಲೆಲ್ಲೂ ನೀರಿಲ್ಲ. ಕುಡಿಯಲು ನೀರಿಲ್ಲ, ಕೃಷಿಗೆ ನೀರಿಲ್ಲದ ಸುದ್ದಿಯ ಜೊತೆಗೆ ಇದೀಗ ಜಲಚರಗಳಿಗೂ ನೀರಿಲ್ಲದ ಸುದ್ದಿ ಕಂಗೆಡಿಸಿದೆ. ದೇವರೇ ಒಮ್ಮೆ ಮಳೆ ಸುರಿಸು ಎಂಬ ಪ್ರಾರ್ಥನೆ ಹೆಚ್ಚಾಗಿದೆ.
ಇದೀಗ ಏರುತ್ತಿರುವ ತಾಪಮಾನ ಜಲಚರಗಳನ್ನೂ ಬಲಿತೆಗೆದುಕೊಳ್ಳಲು ಪ್ರಾರಂಭಿಸಿದೆ. ಬೆಳ್ತಂಗಡಿ ತಾಲೂಕಿನ ಕೇಳ್ಕರ ದೇಗುಲದ ಸನಿಹದಲ್ಲಿನ ನದಿಯಲ್ಲಿ ಬಿಸಿಯಾಗುತ್ತಿರುವ ನೀರಿನಿಂದಾಗಿ ದೇವರ ಮೀನುಗಳು ಕೊನೆಯುಸಿರೆಳೆಯುತ್ತಿದ್ದು ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಕರಂಬಾರು ಗ್ರಾಮದಲ್ಲಿ ಶ್ರೀ ಕೇಳ್ಕರ ಮಹಾಲಿಂಗೇಶ್ವರ ದೇಗುಲವಿದೆ. ಗುರುವಾಯನಕೆರೆ-ನಾರಾವಿ ರಾಜ್ಯ ಹೆದ್ದಾರಿಯಲ್ಲಿ ಸಿಗುವ ಗುಂಡೇರಿ ಎಂಬಲ್ಲಿಂದ ಗಿಳಿಕಾಪು- ಬೊಳ್ಳಾಜೆ ರಸ್ತೆಯಲ್ಲಿ 2.33 ಕಿ.ಮೀ. ದೂರ ಸಾಗಿದರೆ ಕೇಳ್ಕರೇಶ್ವರ ದೇವಸ್ಥಾನ ಸಿಗುತ್ತದೆ. ದೇಗುಲದ ಪಕ್ಕದಲ್ಲಿ ಪಲ್ಗುಣಿ ನದಿಯ ಉಪನದಿ ಕೇಳ್ಕರ ನದಿ ಹರಿಯುತ್ತದೆ. ಕಳೆದ ಎರಡು ತಿಂಗಳಿನಿಂದ ಹರಿವು ಕಡಿಮೆಯಾಗಿ ನೀರಿನ ಒರತೆ ಕಡಿಮೆಯಾಗುತ್ತಿದೆ. ಇಲ್ಲಿ ಪೆರುವೊಳು ಜಾತಿಯ ಮೀನುಗಳು ಹೇರಳವಾಗಿವೆ. ತಾಲೂಕಿನಲ್ಲಿ ಶಿಶಿಲದ ಶಿಶಿಲೇಶ್ವರ ದೇಗುಲದ ಪಕ್ಕದ ಕಪಿಲಾ ನದಿಯಲ್ಲಿ ಮತ್ಸ್ಯ ಸಂಕುಲ ಇದ್ದರೆ ಇನ್ನೊಂದು ಇರುವುದು ಕೇಳ್ಕರೇಶ್ವರನ ಸನ್ನಿಧಿಯಲ್ಲಿ. ಆದರೆ ಇಲ್ಲಿ ಈ ಜಾತಿಯ ಮೀನುಗಳ ಸಂಕುಲವೇ ನಾಶವಾಗುವ ಸನ್ನಿವೇಶ ನಿರ್ಮಾಣವಾಗಿದೆ.
ದೇವಳದ ಕೆಳಭಾಗದಲ್ಲಿ ಬೃಹತ್ ಹೊಂಡವೊಂದಿದ್ದು ಸ್ವಲ್ಪ ಮಾತ್ರದಲ್ಲಿ ನೀರಿನ ಸಂಗ್ರಹವಿದೆ. ಎಲ್ಲಾ ಮೀನುಗಳು ಇಲ್ಲಿ ಬಂದು ಸೇರಿದ್ದು ಕಳೆದ ನಾಲ್ಕೈದು ದಿನಗಳಿಂದ ಸತ್ತ ಮೀನುಗಳು ದಡಕ್ಕೆ ಬಂದು ರಾಶಿ ಬೀಳುತ್ತಿವೆ. ಬಿಸಿಲಿನ ಬೇಗೆಯಿಂದಾಗಿ ನೀರು ಬಿಸಿಯಾಗಿದೆ ಮಾತ್ರವಲ್ಲದೆ ದಪ್ಪಗೊಂಡಿದೆ. ಬಣ್ಣವೂ ಬದಲಾಗಿದೆ. ಇದಲ್ಲದೆ ಮೂರು ಬದಿಯೂ ಬೃಹತ್ ಬಂಡೆಗಳಿರುವ ಕಾರಣ ನೀರು ಇನ್ನಷ್ಟು ಬಿಸಿಯಾಗುತ್ತಿದೆ. ಹೀಗಾಗಿ ನೀರಿನಲ್ಲಿರುವ ಮೀನುಗಳು ಪ್ರಾಣವಾಯುವಿನ ಕೊರೆತೆಯಿಂದಾಗಿ ಒದ್ದಾಡಿಕೊಂಡು ಪ್ರಾಣಬಿಡತೊಡಗಿವೆ.
ಇವುಗಳ ಒದ್ದಾಟವನ್ನು ನೋಡಲಾಗದೆ, ಇದ್ದ ಮೀನುಗಳಾದರೂ ಬದುಕಿಕೊಳ್ಳಲಿ ಎಂಬ ಇರಾದೆಯಿಂದ ನದಿಯ ದಡದಲ್ಲಿ ವಾಸಿಸುತ್ತಿರುವ ಶುಭಕರ ಆಚಾರ್ಯ ಎಂಬುವರು ತಮ್ಮ ಕೊಳವೆ ಬಾವಿಯಿಂದ ದಿನಕ್ಕೆರಡು ಬಾರಿ ಸಾಕಷ್ಟು ನೀರನ್ನು ನದಿಗೆ ಬಿಡುತ್ತಿದ್ದಾರೆ. ಇನ್ನೊಂದೆಡೆ ಪರಿಸರದಲ್ಲಿ ದುರ್ವಾಸನೆ ಬರಬಾರದೆಂದು ಆಗ್ಗಾಗ್ಗೆ ಹೊಂಡ ತೆಗೆದು ಸತ್ತ ಮೀನುಗಳನ್ನು ಹೂಳುವ ಕೆಲಸವನ್ನೂ ಮಾಡುತ್ತಿದ್ದಾರೆ.
2017 ರಲ್ಲಿ ನೀರಿನ ಕೊರತೆಯಿಂದಾಗಿ ಮತ್ಸ್ಯ ಸಂಕುಲ ಬರಿದಾಗತೊಡಗಿತ್ತು. ಆಗ ದೇವಳದ ಆಡಳಿತ ಮಂಡಳಿಯವರು ನದಿಗೆ ಟ್ಯಾಂಕರ್ ಮೂಲಕ ನೀರನ್ನು ತಂದು ಹಾಕುವ ಪ್ರಯತ್ನ ಮಾಡಿದ್ದರು. ಇಲ್ಲಿ ಇನ್ನೂ ಒಂದು ವಾರ ಮಳೆ ಬರದಿದ್ದರೆ ಇದ್ದ ನೀರು ಇಂಗಿ ಲೋಡುಗಟ್ಟಲೆ ಮೀನುಗಳು ಮೇಲೆ ತೇಲುವುದು ನಿಶ್ಚಿತ.
2017ರಲ್ಲೂ ಇದೇ ರೀತಿಯ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿತ್ತು. ಸಾವಿರಾರು ಮೀನುಗಳು ಸತ್ತು ಬಿದ್ದ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿಂದಂತಿದೆ. ಈ ಬಾರಿಯೂ ಹಾಗಾಗಬಾರದೆಂದು ದೇವರಲ್ಲಿ ಪ್ರಾರ್ಥಿಸಿ, ಸೀಯಾಳಾಭಿಷೇಕ ಮಾಡಿದ್ದೇವೆ. ಆದಷ್ಟು ಬೇಗ ಮಳೆ ಬರಲಿ ಎಂದು ಹಾರೈಸುತ್ತಿದ್ದಾರೆ ಸ್ಥಳೀಯ ಕೃಷಿಕ ಹೊನ್ನಪ್ಪ ಸಾಲಿಯಾನ್ .
ಜಲಚರಗಳ ಸಾವು ನೋಡಲಾಗುತ್ತಿಲ್ಲ. ಮಳೆ ಬರಲಿ ಎಂದು ದಿನಾಲೂ ಪ್ರಾರ್ಥಿಸುತ್ತಿದ್ದೇನೆ. ಶುಭಕರ ಆಚಾರ್ಯ ಅವರು ನದಿಗೆ ನೀರನ್ನು ಹಾಯಿಸಿ ಸೇವೆ ಮಾಡುತ್ತಿರುವುದು ಶ್ಲಾಘನೀಯ. ವರುಣದೇವನ ಕೃಪೆಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ ಎಂದು ದೇಗುಲದ ಅರ್ಚಕ ನಾರಾಯಣ ಭಟ್ ಗುರಿಪಳ್ಳ ಹೇಳುತ್ತಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…