ಸುಳ್ಯ: ಪ್ರಕೃತಿಯು ಮಳೆಯ ವರ್ಷಧಾರೆ ಹರಿಸುವುದಕ್ಕೆ ಮುನ್ನವೇ ಇಲ್ಲಿ ತಾಳ-ಲಯ-ರಾಗದ ಸಂಗೀತ ರಸಧಾರೆ ಹರಿಯುತ್ತದೆ. ಇದು ಕರುಂಬಿತ್ತಿಲ್ ಸಂಗೀತ ಶಿಬಿರ.
ನೂರು ನೂರು ಕಂಠಗಳಿಂದ ಹೊರಬರುವ ಸ್ವರ ರಾಗ ಸುಧೆಯು ಮಳೆಗಾಲ ಆರಂಭಕ್ಕೆ ಒಂದು ವಾರ ಮುನ್ನವೇ ಧರ್ಮಸ್ಥಳ ಸಮೀಮಪದ ನಿಡ್ಲೆ ಕರುಂಬಿತ್ತಿಲ್‍ನಲ್ಲಿ ಸಂಗೀತದ ಮಳೆ ಸುರಿಸುತ್ತದೆ. ಪ್ರಸಿದ್ಧ ವಯಲಿನಿಸ್ಟ್ ವಿದ್ವಾನ್ ವಿಠಲ ರಾಮಮೂರ್ತಿ ಅವರ ಕರುಂಬಿತ್ತಿಲ್‍ನ ಮನೆಯಲ್ಲಿ ಪ್ರತಿ ವರ್ಷ ಮೇ ತಿಂಗಳಲ್ಲಿ ನಡೆಯುವ ಕರುಂಬಿತ್ತಿಲ್ ಸಂಗೀತ ಶಿಬಿರವು ಅಕ್ಷರಶಃ ಶುದ್ಧ ಸಂಗೀತದ ಅದ್ಭುತ ಲೋಕವನ್ನು ತೆರೆದಿಡುತ್ತದೆ. ಪ್ರಕೃತಿಯ ತೊಟ್ಟಿಲಿನ ಹಸಿರು ಹೊದ್ದು ಮಲಗಿರುವ ಕರುಂಬಿತ್ತಿಲಿನ ಮನೆಯಲ್ಲಿ ನಿರಂತರ 20ನೇ ವರ್ಷ ನಡೆದ ನಡೆದ ಶಿಬಿರದಲ್ಲಿ ಸಂಗೀತ ಲೋಕದ ದಿಗ್ಗಜರು, ಸಂಗೀತ ವಿದ್ಯಾರ್ಥಿಗಳು, ಸಂಗೀತ ಪ್ರೇಮಿಗಳು ಒಟ್ಟಾಗಿ ಒಂದು ವಾರಗಳ ಕಾಲ ಸಂಗೀತದ ರಸಧಾರೆಯನ್ನು ಹರಿಸಿದ್ದಾರೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು ಇನ್ನೂರ ಇಪ್ಪತ್ತಕ್ಕೂ ಅಧಿಕ ಮಂದಿ ಪ್ರತಿ ವರ್ಷ ತಪ್ಪದೇ ಭಾಗವಹಿಸುತ್ತಾರೆ. ವಿದೇಶದಿಂದಲೂ ಸಂಗೀತಾಸಕ್ತರು ಕರುಂಬಿತ್ತಿಲ್ ಶಿಬಿರವನ್ನು ಅರಸಿ ಬರುತ್ತಾರೆ.
ಸಂಗೀತ ಕ್ಷೇತ್ರದ ದಿಗ್ಗಜರೇ ಪ್ರತಿ ವರ್ಷ ಕರುಂಬಿತ್ತಿಲ್‍ಗೆ ಆಗಮಿಸಿ ಶಿಬಿರವನ್ನು ಸಂಪನ್ನಗೊಳಿಸುತ್ತಾರೆ. ವಿದ್ವಾನ್ ಟಿ.ವಿ.ಗೋಪಾಲಕೃಷ್ಣನ್, ವಯಲಿನ್ ಮಾಂತ್ರಿಕ ವಿದ್ವಾನ್ ವಿ.ವಿ.ಸುಬ್ರಹ್ಮಣ್ಯಂ, ವಿದ್ವಾನ್ ಉಡುಪಿ ಗೋಪಾಲಕೃಷ್ಣನ್, ವಿದ್ವಾನ್ ಅಭಿಷೇಕ್ ರಘುರಾಂ, ವಿದುಷಿ ಬಾಂಬೆ ಜಯಶ್ರೀವಿದ್ವಾನ್ ಶ್ರೀಮುಷ್ಣಂ ವಿ.ರಾಜಾರಾವ್, ತಿರುವಾರೂರ್ ಭಕ್ತವಲ್ಸಲಂ ಹೀಗೆ ಪ್ರಮುಖರು ಈ ಬಾರಿಯ ಶಿಬಿರದಲ್ಲಿ ಭಾಗವಹಿಸಿ ಸಂಗೀತಧಾರೆ ಹರಿಸಿದ್ದಾರೆ.
ಸಂಗೀತ ಕ್ಷೇತ್ರದ ಮೇರು ವ್ಯಕ್ತಿಗಳಾದ ಡಾ.ಎಂ.ಬಾಲಮುರಳೀಕೃಷ್ಣ, ಲಾಲ್‍ಗುಡಿ ಜಿ.ಜಯರಾಮನ್, ಉಮಯಾಳ್‍ಪುರಂ ಕೆ.ಶಿವರಾಮನ್, ಟಿ.ಎಂ.ಕೃಷ್ಣ, ವಿದ್ವಾನ್ ನೈವೇಲಿ ಸಂತಾನಗೋಪಾಲನ್ ಹೀಗೆ ಈ ಹಿಂದೆ ಕರುಂಬಿತ್ತಿಲ್ ಸಂಗೀತ ಶಿಬಿರವನ್ನು ಸಂಪನ್ನವಾಗಿಸಿದವರು ಹಲವರು.
ವಿದ್ವಾನ್ ವಿಠಲ ರಾಮಮೂರ್ತಿ ಮತ್ತು ಮನೆಯವರು 20 ವರ್ಷಗಳ ಹಿಂದೆ ಸೇರಿ ನಡೆಸುತ್ತಿದ್ದ ಸಂಗೀತ ಕಾರ್ಯಕ್ರಮವೊಂದು ಬೆಳೆದು ಎಲ್ಲರೂ ಕಾತರದಿಂದ ಕಾಯುವ ಸಂಗೀತ ಅಧ್ಯಯನ ಶಿಬಿರವಾಗಿ ಮಾರ್ಪಾಟಾಗಿದೆ. ಒಂದು ವಾರಗಳ ಕಾಲ ನಡೆಯುವ ಶಿಬಿರದಲ್ಲಿ ಪ್ರತಿ ವರ್ಷವೂ 200ಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸುತ್ತಾರೆ. ಶಿಬಿರದ ದಿನಗಳಲ್ಲಿ ಬೆಳಿಗ್ಗೆ ಐದರಿಂದ ಆರಂಭವಾಗುವ ಸಂಗೀತ ಆರಾಧನೆ ರಾತ್ರಿ ಹನ್ನೆರಡು ಗಂಟೆಯವರೆಗೂ ಮುಂದುವರಿಯುತ್ತದೆ. ಪ್ರಮುಖರ ಸಂಗೀತ ಕಛೇರಿಗಳು, ತರಗತಿಗಳು, ಪ್ರಾತ್ಯಕ್ಷಿಕೆ, ಸಂಗೀತಕ್ಕೆ ಸಂಬಂಧಪಟ್ಟ ರಸಪ್ರಶ್ನೆಗಳು, ಶಿಬಿರದ ವಿದ್ಯಾರ್ಥಿಗಳಿಂದ ಸಂಗೀತ ಕಚೇರಿ, ಸಂದರ್ಶನ ಹೀಗೆ ಕರುಂಬಿತ್ತಿಲ್ ಪರಿಸರವೇ ಸರ್ವಂ ಸಂಗೀತಮಯವಾಗಿ ಮಾರ್ಪಾಡುತ್ತದೆ. ಕರುಂಬಿತ್ತಿಲ್‍ನ ಮನೆಯ ಅಂಗಳಕ್ಕೆ ಬಂದರೆ ಸುತ್ತಲಿನ ಪ್ರಕೃತಿಯೇ ಸಂಗೀತ ನುಡಿಸಿದಂತೆಯೇ ಭಾಸವಾಗುತ್ತದೆ.
ಸಂಗೀತದ ಹಳೆ ಬೇರು-ಹೊಸ ಚಿಗುರು ಸಂಗಮ:
ಕರುಂಬಿತ್ತಿಲ್ ಶಿಬಿರ ಸಂಗೀತ ಕ್ಷೇತ್ರದ ಹಳೆಬೇರು-ಹೊಸ ಚಿಗುರಿನ ಸಂಗಮ ಭೂಮಿಯಾಗುತ್ತದೆ. ಹಿರಿಯ ಕಿರಿಯ ಸಂಗೀತಗಾರರ ದಂಡೇ ಇಲ್ಲಿಗೆ ಹರಿದು ಬರುತ್ತಾರೆ. ಹಿರಿಯ ಸಂಗೀತಗಾರರು ತಮ್ಮ ಅರಿವು, ಜ್ಞಾನ, ಅನುಭವಗಳನ್ನು ಕಿರಿಯರಿಗೆ ಧಾರೆಯೆರೆಯುತ್ತಾರೆ. ಹಿರಿಯ ಸಂಗೀತ ದಿಗ್ಗಜರ ಹಾಡುಗಾರಿಕೆ, ಕ್ಲಾಸುಗಳನ್ನು ಕಣ್ಣು, ಕಿವಿ, ಹೃದಯವನ್ನು ಒಂದಾಗಿಸಿ ಶಿಬಿರಾರ್ಥಿಗಳು ಗ್ರಹಿಸಿಕೊಳ್ಳುತ್ತಾರೆ. ಮರೆಯದ ಅನುಭವವನ್ನು ನೀಡುವ ಶಿಬಿರ ಮತ್ತೆ ಮತ್ತೆ ಕೈ ಬೀಸಿ ಕರೆಯುತ್ತದೆ.
ವಿ.ವಿ.ಸುಬ್ರಹ್ಮಣ್ಯಂ ಅವರ ವಯಲಿನ್ ಕಛೇರಿ, ಟಿ.ವಿ.ಗೋಪಾಲಕೃಷ್ಣನ್, ಬಾಂಬೆ ಜಯಶ್ರೀ , ರಾಂನಾಥ್ ಅವರ ಹಾಡುಗಾರಿಕೆ, ಉಡುಪಿ ಗೋಪಾಲಕೃಷ್ಣನ್ ಅವರ ಸಂಗೀತ ತರಗತಿಗಳು ಹೀಗೆ ಈ ವರ್ಷದ ಶಿಬಿರ ಸಂಗೀತ ವಿದ್ಯಾರ್ಥಿಗಳಿಗೆ, ಸಂಗೀತಾಸಕ್ತರಿಗೆ ಹೊಸ ಅನುಭವವನ್ನು ನೀಡಿತು. ಸಂಗೀತ ವಿದ್ಯಾರ್ಥಿಗಳಾಗಲೀ, ಸಂಗೀತಾಸಕ್ತರಾಗಲೀ ಯಾರಿಗೂ ಶಿಬಿರದಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಹಲವಾರು ಪ್ರಸಿದ್ಧ ಸಂಗೀತಗಾರರ ಪರಿಚಯ, ಸಂಪರ್ಕವನ್ನು ಪಡೆಯಲು ಯುವ ಸಂಗೀತಗಾರರಿಗೆ ಸಹಾಯಕವಾಗುತ್ತದೆ. ಶಿಬಿರದ ಪ್ರೇರಣೆಯಿಂದಲೇ ಸಂಗೀತ ಕ್ಷೇತ್ರದಲ್ಲಿಯೇ ಮುಂದುವರಿದವರು ಹಲವು ಮಂದಿ. ಆದುದರಿಂದಲೇ ಎಲ್ಲೆಡೆ ನಡೆಯುವ ಹಲವಾರು ಬೇಸಿಗೆ ಶಿಬಿರಗಳಿಗಿಂತ ಭಿನ್ನವಾಗಿ ಕರುಂಬಿತ್ತಿಲ್ ಸಂಗೀತ ಶಿಬಿರಕ್ಕಾಗಿ ಸಂಗೀತಾಸಕ್ತರು ಕಾತರದಿಂದ ಕಾಯುತ್ತಾರೆ. ಗ್ರಾಮೀಣ ಪ್ರದೇಶದ ಹಲವಾರು ಮಂದಿ ಸಂಗೀತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನೂ, ಪ್ರೇರಣೆಯನ್ನೂ ನೀಡಬೇಕು ಎಂಬ ಉದ್ದೇಶದಿಂದ ವಿಠಲ ರಾಮಮೂರ್ತಿಯವರು ತಮ್ಮ ಊರಿನಲ್ಲಿ ಶಿಬಿರವನ್ನು ಹಮ್ಮಿಕೊಳ್ಳುತ್ತಾರೆ.
ಸಂಗೀತದ ಮಳೆ…ಮಳೆಯ ಸಂಗೀತ:
ಸಂಗೀತ ರಸಧಾರೆಯ ಮೂಲಕ ವರ್ಷಧಾರೆ ಹರಿಸಿದವರು ನಮ್ಮ ಪರಂಪರೆಯಲ್ಲಿ ಹಲವರಿದ್ದಾರೆ. ಕರುಂಬಿತ್ತಿಲ್ ಶಿಬಿರ ಸಂಗೀತ ಮಳೆ ಹರಿಸುವ ಮೂಲಕ ಮಳೆಗಾಲದ ಸ್ವಾಗತಕ್ಕೆ ಪ್ರಕೃತಿಯನ್ನು ಅಣಿಗೊಳಿಸುತ್ತದೆ. ಇಲ್ಲಿನ ಸಂಗೀತದ ತಾಳಕ್ಕೆ ವಿರಾಮ ನೀಡುತ್ತಿದ್ದಂತೆ ಭುವಿಯಲ್ಲಿ ಮಳೆಯ ಸಂಗೀತ ಆರಂಭಗೊಳ್ಳುತ್ತದೆ. ಶಿಬಿರದಲ್ಲಿ ಎದ್ದ ಶುದ್ಧ ಸಂಗೀತದ ಸ್ವರಗಳು ಬೆಟ್ಟ ಗುಡ್ಡಗಳಲ್ಲಿ ಪ್ರತಿಧ್ವನಿಸಿ ಅಲೆ ಅಲೆಯಾಗಿ ಹರಿಯುತ್ತಿದ್ದಂತೆ ಅದರಿಂದ ಪ್ರೇರಣೆಗೊಂಡ ಮಳೆಯ ಕಣಗಳು ಪ್ರಕೃತಿಯಲ್ಲಿ ನಾದ ಸಂಗೀತವನ್ನು ಆರಂಭಿಸುತ್ತದೆ.
ಶಿಬಿರದ ಬಗ್ಗೆ ಮಾತನಾಡುವ ವಿದ್ವಾನ್ ವಿಠಲ ರಾಮಮೂರ್ತಿ, “ಗ್ರಾಮೀಣ ಪ್ರದೇಶದಲ್ಲಿನ ಸಂಗೀತ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಸಂಗೀತ ಕ್ಷೇತ್ರದ ಪ್ರಮುಖರ ಪರಿಚಯ ಆಗಬೇಕು ಮತ್ತು ಅವರ ಮಾರ್ಗದರ್ಶನ ದೊರೆಯಬೇಕು ಎಂಬ ದೃಷ್ಠಿಯಿಂದ ಪ್ರತಿ ವರ್ಷ ನಮ್ಮ ಕುಟುಂಬಸ್ಥರ ಮತ್ತು ಬಳಗದ ಸಹಕಾರದಿಂದ ಸಂಗೀತ ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಹಲವು ಮಂದಿಗೆ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಶಿಬಿರ ಪ್ರೇರಣೆ ನೀಡಿದೆ” ಎನ್ನುತ್ತಾರೆ.
ಅಲ್ಲಲ್ಲಿ ಗುಡುಗು ಸಹಿತ ಸಂಜೆ, ರಾತ್ರಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಮುಂದಿನ…
ಪರಿಸರ ಪ್ರೇಮಿಗಳಿಗೆ, ನಗರದಲ್ಲಿ ಹೂವು, ಸಣ್ಣ ಸಣ್ಣ ಗಿಡ ಬೆಳೆಸುವವರಿಗೆ ಹೂಕುಂಡವಾಗಿ ಅಡಿಕೆಯ…
2026 ಜೂನ್ ವೇಳೆಗೆ ಎತ್ತಿನಹೊಳೆ ನೀರು ತುಮಕೂರು ತಲುಪಲಿದೆ ಎಂದು ಗೃಹ ಸಚಿವ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…
ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490