ಸುಬ್ರಹ್ಮಣ್ಯ: ಕನ್ನಡವು ಪ್ರಪಂಚದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಇದು ಅಪ್ರತಿಮ ಸಾಹಿತ್ಯ ಸಂಪತ್ತನ್ನು ಹೊಂದಿರುವ ಭಾಷೆಯಾಗಿದೆ. ಆಧುನಿಕ ಯುಗದಲ್ಲಿ ನಾವು ನಮ್ಮ ಮಾತೃಭಾಷೆಯ ಕಡೆ ಹೆಚ್ಚು ಹೆಚ್ಚು ಆಕರ್ಷಿತರಾಗಬೇಕು. ಮಕ್ಕಳು ಎಳವೆಯಲ್ಲಿ ಕನ್ನಡವನ್ನು ಬಳಸುವ ಮೂಲಕ ಮಾತೃಭಾಷೆಯ ಪ್ರಗತಿಗೆ ಕಾಣಿಕೆ ನೀಡಬೇಕಾದುದು ಅತ್ಯವಶ್ಯಕ. ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಸಿರಿವಂತಿಕೆಯ ಕುರಿತು ಅರಿವು ಮೂಡಿಸುವ ಮೂಲಕ ಕನ್ನಡದ ಕಂಪನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ. ನಾವು ವ್ಯಾವಹಾರಿಕವಾಗಿ ಇತರ ಭಾಷೆಯನ್ನು ಬಳಸಿ ಕನ್ನಡವನ್ನು ಉಳಿಸಿ ಬೆಳೆಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯ ಪೂರ್ವಾಧ್ಯಕ್ಷ ಪಿ. ಸಿ. ಜಯರಾಮ್ ಹೇಳಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇದರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಎಸ್‍ಎಸ್‍ಪಿಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಜ್ಞಾನದ ಸಂಪತ್ತನ್ನು ನೀಡುತ್ತದೆ. ಜಾನಪದ ಸಾಹಿತ್ಯವು ಪ್ರಾಚೀನತೆಯ ವಿಚಾರಗಳನ್ನು ತೆರೆದಿಡುತ್ತದೆ. ಇವುಗಳು ಎಳೆಯ ಮಕ್ಕಳಿಗೆ ಹಿಂದಿನ ವಿಚಾರಗಳ ಅರಿವನ್ನು ಮೂಡಿಸುತ್ತದೆ ಎಂದರು.
ಜಾನಪದ ಸಾಹಿತ್ಯದಲ್ಲಿ ಸ್ತ್ರೀಸಂವೇದನೆ: ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ಜಾನಪದ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಎಂಬ ವಿಚಾರವಾಗಿ ಮಾಹಿತಿ ನೀಡಿದರು. ಕನ್ನಡ ಸಾಹಿತ್ಯದ ಪ್ರಗತಿಗೆ ಜನಪದರ ಪಾತ್ರ ಅನನ್ಯ. ತಮ್ಮ ನಿಜ ಜೀವನದಲ್ಲಿ ನಡೆಯುವ ವಿಚಾರಗಳನ್ನು ಸಾಹಿತ್ಯ ರೂಪದಲ್ಲಿ ಅವರು ತಿಳಿಸಿದ ಪರಿಯು ಅತ್ಯಂತ ಶ್ರೇಷ್ಠವಾದುದು ಎಂದರು.
ಎಸ್‍ಎಸ್‍ಪಿಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ. ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ವಿಭಾಗದ ಮುಖ್ಯಗುರು ಕೆ.ಯಶವಂತ ರೈ, ಸಂಪನ್ಮೂಲ ವ್ಯಕ್ತಿ ಕೃಷ್ಣಮೂರ್ತಿ ಹೆಬ್ಬಾರ್, ಸುವಿಚಾರ ವೇದಿಕೆ ಅಧ್ಯಕ್ಷ ಚಂದ್ರಶೇಖರ ಪೇರಾಲ್, ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಎಸ್‍ಎಸ್‍ಪಿಯು ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲೋಕೇಶ್ವರ ಡಿ.ಆರ್ ವೇದಿಕೆಯಲ್ಲಿದ್ದರು. ನಿವೃತ್ತ ಪ್ರಾಂಶುಪಾಲ ಬಾಬು ಗೌಡ ಅಚ್ರಪ್ಪಾಡಿ, ಸಾಹಿತ್ಯ ಪರಿಷತ್‍ನ ಡಾ.ರಂಗಯ್ಯ, ಹಿರಿಯ ಅಧ್ಯಾಪಕ ಎಂ.ಕೃಷ್ಣ ಭಟ್, ಅಧ್ಯಾಪಕ ಮತ್ತು ಕಲಾವಿದ ರಘು ಬಿಜೂರು ಉಪಸ್ಥಿತರಿದ್ದರು.
ಆರಂಭದಲ್ಲಿ ಕಲಾವಿದ ರಘು ಬಿಜೂರು ಮತ್ತು ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ನೆರವೇರಿತು. ಕೆ.ಯಶವಂತ ರೈ ಸ್ವಾಗತಿಸಿದರು. ಎಂ.ಕೃಷ್ಣ ಭಟ್ ಪರಿಚಯಿಸಿದರು. ತೇಜಸ್ವಿ ಕಡಪಳ ವಂದಿಸಿದರು. ಉಪನ್ಯಾಸಕ ರತ್ನಾಕರ.ಎಸ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಘು ಬಿಜೂರು ರಚಿಸಿದ ಮಾತೃಶ್ರೀ ಕವನ ಸಂಕಲನವನ್ನು ಗಣ್ಯರಿಗೆ ವಿತರಿಸಲಾಯಿತು.